Advertisement

ರೈತರ ನೆರವಿಗೆ ಬಾರದ ಜನಪ್ರತಿನಿಧಿಗಳು

04:42 PM Mar 17, 2018 | Team Udayavani |

ಗಂಗಾವತಿ: ಸರಕಾರ ಬೇಡವೆಂದರೂ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಸುಮಾರು 1.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಮೂಲಕ ಇದೀಗ ರೈತರು ಕೈಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಿಸಿಕೊಂಡಿದ್ದಾರೆ.

Advertisement

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅನ್ನದಾತ ನೆರವಿಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಬರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ವಾರ ಸಿಂಧನೂರು, ಗಂಗಾವತಿ, ಮುನಿರಾಬಾದ್‌ ಡ್ಯಾಂ ಪ್ರದೇಶದಲ್ಲಿ ಕಾಲುವೆ ನೀರು ಹರಿಸುವಂತೆ ರೈತರು, ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರೂ ಏನು ಪ್ರಯೋಜನವಾಗಲಿಲ್ಲ. ಅಚ್ಚುಕಟ್ಟು ಪ್ರದೇಶದ ಶೇ.25ರಷ್ಟು ಭೂಮಿಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಉಳಿದ ರೈತರು ಮುಂಗಾರಿನಲ್ಲಿ ಭತ್ತ ನಾಟಿ ಮಾಡಿ ನಂತರ ನೀರಿನ ಕೊರತೆಯಿಂದಾಗಿ ಹಿಂಗಾರಿನಲ್ಲಿ ನಿರಾಕರಿಸಿದ್ದರು.

ಒಟ್ಟು 1.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಶೇ.3ರಷ್ಟು ಮಾತ್ರ ಪಂಪ್‌ಸೆಟ್‌ ನೀರಾವರಿ ಪ್ರದೇಶವಿದೆ. ಉಳಿದ ಶೇ.22ರಷ್ಟು ಭೂಮಿಯಲ್ಲಿ ಬೆಳೆದ ಭತ್ತ ಬೆಳೆ ಎಡದಂಡೆ ಕಾಲುವೆ ನೀರು ಅವಲಂಬಿತವಾಗಿದೆ. ಭತ್ತ ಸದ್ಯ ಕಾಳು ಕಟ್ಟುವ ಸ್ಥಿತಿಯಲ್ಲಿದ್ದು, ಈಗ ನೀರಿನ ಅಗತ್ಯವಿದೆ. ಇನ್ನೂ ಎರಡು ಮೂರು ದಿನಗಳಲ್ಲಿ ನೀರು ಹರಿಸದಿದ್ದರೆ ಸುಮಾರು 400 ಕೋಟಿಯಷ್ಟು ಮೌಲ್ಯದ ಭತ್ತ ಬೆಳೆ ನಾಶವಾಗುತ್ತಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ನೀರಿನ ಕೊರತೆಯಿಂದ ಬಹುತೇಕ ರೈತರು ತೀವ್ರ
ಹಾನಿಗೊಳಗಾಗಿದ್ದಾರೆ. 

ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿದಂತೆ ಫೆ.28ರಂದು ಎಡದಂಡೆ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಕುಡಿಯುವ ನೀರಿಗಾಗಿ ಮಾತ್ರ ಜಲಾಶಯದಲ್ಲಿ ನೀರು ಉಳಿದಿದೆ. ಬೆಳೆದು ನಿಂತ ಭತ್ತದ ಬೆಳೆಗೆ ಹರಿಸಿದರೆ ಮೇ, ಜೂನ್‌ ಮತ್ತು ಜುಲೈ ತಿಂಗಳಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕೊರತೆಯಾಗಬಹುದು
ಎನ್ನುವ ಅಧಿಕಾರಿ ನೀಡಿದ ವರದಿ ಹಿನ್ನೆಲೆಯಲ್ಲಿ ಸರಕಾರ ಕೂಡ ರೈತರ ನೆರವಿಗೆ ಬರಲು ಹಿಂದೇಟು ಹಾಕುತ್ತಿದೆ.

ಕನಕಗಿರಿ ಶಾಸಕ ಶಿವರಾಜ ತಂಗಡಗಿ ಅವರು ಬುಧವಾರ ಮತ್ತು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೈತರ ಸ್ಥಿತಿ ವಿವರಿಸಲು ಯತ್ನಿಸಿದರು. ಆದರೆ ಕೊರತೆ ಇರುವ ಹಿನ್ನೆಲೆಯಲ್ಲಿ ಕಾಲುವೆ ನೀರು ಹರಿಸುವುದು ಸಾಧ್ಯವಿಲ್ಲ. ಶೀಘ್ರ ಐಸಿಸಿ ಸಭೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಅವರು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಉಳಿದಂತೆ ಎರಡು ಜಿಲ್ಲೆಗಳ ಜನಪ್ರತಿನಿಧಿಗಳು ರೈತರ ಸಮಸ್ಯೆ ಕುರಿತು ಸಿಎಂ ಅವರ ಗಮನಕ್ಕೆ ತರುತ್ತಿಲ್ಲ ಎನ್ನಲಾಗುತ್ತಿದೆ.

Advertisement

ಸದ್ಯ ಜಲಾಶಯದಲ್ಲಿ 6.7 ಟಿಎಂಸಿ ನೀರಿನ ಸಂಗ್ರಹವಿದ್ದು ಇದರಲ್ಲಿ ಕುಡಿಯುವ ನೀರಿಗಾಗಿ ಕಲಬುರಗಿ ಪ್ರಾದೇಶಿಕ ಆಯುಕ್ತರು 3.5 ಟಿಎಂಸಿ ನೀರನ್ನು ಮೀಸಲಿಡುವಂತೆ ಸೂಚನೆ ನೀಡಿದ್ದಾರೆ. ಇನ್ನು ಡೆಡ್‌ ಸ್ಟೋರೆಜ್‌ 1.7 ಟಿಎಂಸಿ ಮತ್ತು ಆಂಧ್ರಪ್ರದೇಶದ ಕೋಟಾ 1.5 ಟಿಎಂಸಿ ನೀರು ಸಂಗ್ರಹ ಇದೆ. ಸರಕಾರ ಐಸಿಸಿ ಸಭೆ ಕರೆದು ಜಲಾಶಯದಲ್ಲಿರುವ ನೀರಿನಲ್ಲಿ ಒಂದು ಟಿಎಂಸಿಯಷ್ಟು ನೀರನ್ನು
ಪ್ರತಿ ದಿನ 1500 ಕ್ಯೂಸೆಕ್‌ನಂತೆ 10 ದಿನ ಹರಿಸಿದರೆ ಶೇ.80 ರಷ್ಟು ಭತ್ತದ ಬೆಳೆ ನಾಶ ತಪ್ಪಿಸಲು ಅವಕಾಶವಿದೆ ಎನ್ನುವುದು ರೈತರ
ಅಭಿಪ್ರಾಯವಾಗಿದೆ.

ಇನ್ನೂ ಒಂದು ವಾರ ಕಾಲ ಕಾಲುವೆಗೆ ನೀರು ಹರಿಸುವ ಮೂಲಕ ಸರಕಾರ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ಕೃಷಿಕರು
ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಪ್ರತಿದಿನ 1500-2000 ಕ್ಯೂಸೆಕ್‌ ನೀರನ್ನು ಕಾಲುವೆಗೆ ಹರಿಸಬೇಕು. ಐಸಿಸಿ ನಿರ್ಣಯದಂತೆ ಮೇ ತಿಂಗಳಲ್ಲಿ ಕುಡಿಯುವ ನೀರನ್ನು ಮುಂಚಿತವಾಗಿ ಕಾಲುವೆ ಹರಿಸುವುದರಿಂದ ರೈತರಿಗೆ ಮತ್ತು ಜನರಿಗೆ ಕುಡಿಯಲು ನೀರು ಹರಿಸಿದಂತಾಗುತ್ತದೆ. ಸರಕಾರ ಕೂಡಲೇ ನೀರನ್ನು ಕಾಲುವೆ ಹರಿಸಬೇಕು. 
ಕಲ್ಗುಡಿ ಪ್ರಸಾದ, ಕಾಂಗ್ರೆಸ್‌ ಕಿಸಾನ್‌ ಘಟಕದ ಮುಖಂಡ.

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next