Advertisement

ಜನಪ್ರತಿನಿಧಿಗಳೇ…ವಿಳಂಬ ನೀತಿಯಿಂದ ಪ್ರಯೋಜನವಿಲ್ಲ

03:16 AM Oct 27, 2021 | Team Udayavani |

ಉಡುಪಿ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಂದೆರಡು ವರ್ಷಗಳಿಂದ ಭತ್ತದ ಬೇಸಾಯ ಹೆಚ್ಚು ಉತ್ಸಾಹದಿಂದ ನಡೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳೂ ಪ್ರೋತ್ಸಾಹಿಸುತ್ತಿವೆ. ಆದರೆ ಇದಕ್ಕೆ ತಕ್ಕಂತೆ ಸರಕಾರದ ಪ್ರೋತ್ಸಾಹ ಮಾತ್ರ ಸಿಗುತ್ತಿಲ್ಲ.

Advertisement

ಎರಡು ವರ್ಷಗಳ ಹಿಂದೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಸಕಾಲದಲ್ಲಿ ಸಿಗಲಿಲ್ಲ. ರೈತರ ಪ್ರತಿಭಟನೆ, ಆಕ್ರೋಶದ ಬಳಿಕ ಪರಿಸ್ಥಿತಿ ಸುಧಾರಿಸಿತು. ಈ ಬಾರಿ ಬಿತ್ತನೆ ಬೀಜ ವಿಷಯದಲ್ಲಿ ಅಂತಹ ಸಮಸ್ಯೆ ಕಾಣಿಸಲಿಲ್ಲ. ಆದರೆ ಈಗ ಕೊಯ್ಲಿನ ಸಂದರ್ಭದಲ್ಲಿ ಕಟಾವು ಯಂತ್ರಗಳ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಮಳೆ ಕೂಡ ತೊಂದರೆ ನೀಡುತ್ತಿರುವುದರಿಂದ ಭತ್ತ ಬೆಳೆಗಾರರು ಒಟ್ಟಾರೆಯಾಗಿ ನಿರಾಸೆಗೊಂಡಿದ್ದಾರೆ.

ಕೃಷಿಯಲ್ಲಿನ ಸುಧಾರಣೆ ಮತ್ತು ಅದನ್ನು ಜನರು ಅಳವಡಿಸಿಕೊಳ್ಳುತ್ತಿರುವುದರ ಬಗ್ಗೆ ಸರಕಾರ ಮತ್ತು ಕೃಷಿ ಇಲಾಖೆ ಮೊದಲೇ ಅಂದಾಜು ಮಾಡಬೇಕಿತ್ತು. ಭತ್ತ ಕಟಾವು ಯಂತ್ರ ಕರಾವಳಿಗೆ ಬಂದು ಆರೇಳು ವರ್ಷಗಳಾದರೂ ಕಳೆದ ಎರಡು ವರ್ಷಗಳಿಂದ ಹಳ್ಳಿ ಹಳ್ಳಿಯ ರೈತರೂ ಇದನ್ನೇ ಅವಲಂಬಿಸುತ್ತಿದ್ದಾರೆ. ಕೃಷಿ ಕಾರ್ಮಿಕರ ಕೊರತೆ ಮತ್ತು ರೈತರು ಯಾಂತ್ರಿಕ ಕೃಷಿಯನ್ನೇ ನಂಬಲಾರಂಭಿಸಿದ್ದು ಕೃಷಿ ಇಲಾಖೆಗೆ ಗೊತ್ತಿಲ್ಲದ ವಿಷಯವಲ್ಲ. ಯಾಂತ್ರಿಕ ಕೃಷಿಯಿಂದ ಅನುಕೂಲ, ಲಾಭ ಎಂದೆಲ್ಲ ಎಲ್ಲೆಡೆ ಪ್ರಚಾರ ನಡೆಸಿದ ಇಲಾಖೆಗೆ ತಮ್ಮಲ್ಲಿರುವ ಯಂತ್ರಗಳು ಎಷ್ಟು ಸಾಕಾದೀತು ಎಂಬ ಅಂದಾಜು ಕೂಡ ಇದ್ದಂತಿಲ್ಲ ಅಥವಾ ಖಾಸಗಿ ಯಂತ್ರಗಳನ್ನೇ ಅವಲಂಬಿಸಲಿ, ಕೇಳಿದಷ್ಟು ಬಾಡಿಗೆ ಕೊಡಲಿ ಎಂಬ ಅಸಡ್ಡೆಯೋ ಗೊತ್ತಿಲ್ಲ. ಒಟ್ಟಾರೆಯಾಗಿ ಕೃಷಿಕರು ಮಾತ್ರ ಹೈರಾಣಾಗಿದ್ದಾರೆ.

ವಿಳಂಬ ಧೋರಣೆಯೇ ಅಪಾಯ
ಯುವಕರು ಸಹಿತ ಒಂದಷ್ಟು ಮಂದಿ ಮತ್ತೆ ಗದ್ದೆಗೆ ಇಳಿದಿರುವಾಗ ಸರಕಾರ ಮತ್ತು ಕೃಷಿ ಇಲಾಖೆ ವಿಳಂಬ ಧೋರಣೆ ಅನುಸರಿಸಿದರೆ ಅದು ತೀರಾ ಅಪಾಯಕಾರಿಯಾದೀತು. ಮತ್ತೆ ಭತ್ತದ ಕೃಷಿಯಿಂದ ರೈತರು ವಿಮುಖರಾದರೆ ಮಗದೊಮ್ಮೆ ಅವರನ್ನು ಅದರತ್ತ ಆಕರ್ಷಿಸುವುದು ಕಷ್ಟಸಾಧ್ಯವಾಗಬಹುದು. ಆಗ ಮತ್ತೆ ಆಹಾರ ಉತ್ಪಾದನೆಯಲ್ಲಿ ಕೊರೆತೆಯಾದೀತು. ಆದುದರಿಂದ ಸಕಾಲದಲ್ಲಿ ಬೆಂಬಲ ಬೆಲೆ ಘೋಷಣೆ, ಕಟಾವು ಯಂತ್ರಗಳ ಲಭ್ಯತೆ ಕುರಿತಾಗಿ ಸರಕಾರ ಆದ್ಯ ಗಮನ ನೀಡಬೇಕಾಗಿದೆ. ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಪಟ್ಟು ಬಿಡದೆ ಪ್ರಯತ್ನ ನಡೆಸಬೇಕಾಗಿದೆ.

ರೈತರ ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಉದಯವಾಣಿ ಆರಂಭಿಸಿರುವ “ಕಟಾವು ಸಂಕಟ’ ಸರಣಿಯಲ್ಲಿ ಇಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ತಾವು ಏನು ಕ್ರಮ ಕೈಗೊಳ್ಳಲಿದ್ದೇವೆ ಎಂಬುದನ್ನು ವಿವರಿಸಿದ್ದಾರೆ.

Advertisement

ಕೇವಲ ಹೇಳಿಕೆ, ಆಶ್ವಾಸನೆಗಳಿಂದಷ್ಟೇ ಪ್ರಯೋಜನ ವಾಗದು. ಎಷ್ಟೋ ದಿನ ಕಳೆದು ಸರಕಾರ ಕ್ರಮ ಕೈಗೊಂಡರೂ ನಮಗೇನೂ ಪ್ರಯೋಜನವಾಗದು ಎಂದು ಭತ್ತದ ಬೆಳೆಗಾರರು ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

ಬೆಂಬಲ ಬೆಲೆ ಘೋಷಣೆ
ಬೆಂಬಲ ಬೆಲೆ ಘೋಷಣೆ ಬೇಗನೇ ಮಾಡ ಬೇಕೆಂದು ಕೃಷಿಕರೂ ಹಲವಾರು ಬಾರಿ ಮನವಿ ಸಲ್ಲಿಸಿ ದ್ದಾರೆ. ಈ ಬಗ್ಗೆ ಕೃಷಿ ಸಚಿವರ ಗಮನಕ್ಕೂ ತರಲಾಗಿದೆ. ಅಕ್ಟೋಬರ್‌ ನಲ್ಲಿ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಕಟಾವು ನಡೆಯುವುದರಿಂದ ಬೆಂಬಲ ಬೆಲೆ ಘೋಷಣೆಗೆ ಇದು ಉತ್ತಮ ಸಮಯ. ಚುನಾವಣೆ ಕಾರಣದಿಂದಾಗಿ ತುಸು ವಿಳಂಬವಾಗಿರಬಹುದು. ನವೆಂಬರ್‌ ಒಳಗೆ ಘೋಷಣೆಯಾಗುವ ಸಾಧ್ಯತೆಗಳಿವೆ. ಆದಷ್ಟು ಬೇಗನೇ ಸರಕಾರ ನಿರ್ಧಾರ ತೆಗೆದು ಕೊಳ್ಳುವಂತೆ ಆಗ್ರಹಿಸುತ್ತೇನೆ.
– ಲಾಲಾಜಿ ಮೆಂಡನ್‌, ಕಾಪು ಶಾಸಕ

ಸಚಿವರ ಜತೆ ಮಾತುಕತೆ
ಭತ್ತದ ಕಟಾವು ಯಂತ್ರದ ಬಾಡಿಗೆ ದರ ಏರಿಕೆ ಹಾಗೂ ಭತ್ತದ ಬೆಂಬಲ ಬೆಲೆ ಸಕಾಲದಲ್ಲಿ ಲಭ್ಯವಾಗುತ್ತಿಲ್ಲ ಎಂಬ ಕೃಷಿಕರ ಕೊರಗಿನ ಕುರಿತು “ಉದಯವಾಣಿ’ಯಲ್ಲಿ ಪ್ರಕಟವಾಗುತ್ತಿರುವ ಸರಣಿ ವರದಿಗಳನ್ನು ಗಮನಿಸಿದ್ದೇನೆ. ರೈತರ ಬೇಡಿಕೆ ಸಮಂಜಸವಾದುದು. ಈಡೇರಿಸಬೇಕಾದ್ದು ಸರಕಾರದ ಕರ್ತವ್ಯ. ಆದ್ದರಿಂದ ಉಪಚುನಾವಣೆ ಮುಗಿದ ಬಳಿಕ ಖುದ್ದು ಕೃಷಿ ಸಚಿವರ ಜತೆ ಮಾತನಾಡಿ, ಮನವಿ ನೀಡಿ ರೈತಪರ ನಿಲುವು ತಳೆಯುವಂತೆ ಆಗ್ರಹಿಸಲಿದ್ದೇನೆ.
– ಬಿ.ಎಂ. ಸುಕುಮಾರ ಶೆಟ್ಟಿ,
ಬೈಂದೂರು ಶಾಸಕ

ಸಚಿವರ ಗಮನಕ್ಕೆ ತರುವೆ
ಕರಾವಳಿಯ ಪ್ರಧಾನ ಬೆಳೆಯಾ
ಗಿರುವ ಭತ್ತಕ್ಕೆ ಹೆಚ್ಚಿನ ಉತ್ತೇಜನ ಅಗತ್ಯ. ಈ ನಿಟ್ಟಿ ನಲ್ಲಿ ಬೆಂಬಲ ಬೆಲೆ ಪೂರಕವಾಗಲಿದೆ. ಪ್ರಸ್ತುತ ಭತ್ತದ ಕಟಾವು ನಡೆಯುತ್ತಿದ್ದು ಬೆಂಬಲ ಬೆಲೆ ಈಗಲೇ ದೊರಕಿದರೆ ರೈತರಿಗೆ ಹೆಚ್ಚು ಸಹಾಯವಾಗುತ್ತದೆ ಮತ್ತು ಬೆಳೆಗೂ ಉತ್ತೇಜನ ಲಭಿಸಲಿದೆ. ಎದುರಾಗಿರುವ ಎಲ್ಲ ಸಮಸ್ಯೆಗಳನ್ನು ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ.
– ವೇದವ್ಯಾಸ ಕಾಮತ್‌, ಮಂಗಳೂರು ದಕ್ಷಿಣ ಶಾಸಕ

ಸರಕಾರದ ಗಮನಕ್ಕೆ
ರಾಜ್ಯ ಸರಕಾರ ರೈತ ಪರವಾಗಿದ್ದು, ಕೃಷಿಗೆ ಉತ್ತೇಜನ ನೀಡುತ್ತದೆ. ಕರಾವಳಿಯ ಭತ್ತಕ್ಕೆ ಸಕಾಲದಲ್ಲಿ ಬೆಂಬಲ ಬೆಲೆ ಲಭಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು. ಕಾರ್ಮಿಕರ ಸಮಸ್ಯೆಯಿಂದಾಗಿ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚುತ್ತಿದೆ. ಭತ್ತ ಕಟಾವು ತ್ವರಿತವಾಗಿ ನಡೆಯುವ ನಿಟ್ಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಯಂತ್ರಗಳನ್ನು ಒದಗಿಸುವ ಬಗ್ಗೆಯೂ ಮುಖ್ಯಮಂತ್ರಿಯವರ ಗಮನ ಸೆಳೆಯಲಾಗುವುದು.
 - ಡಾ| ಭರತ ಶೆಟ್ಟಿ, ಶಾಸಕರು ಮಂಗಳೂರು ಉತ್ತರ

ಯಂತ್ರಗಳ ಹೆಚ್ಚಳ ಸಾಧ್ಯತೆ
ಉಭಯ ಜಿಲ್ಲೆಗಳಲ್ಲಿ ಕಟಾವು ಏಕಕಾಲದಲ್ಲಿ ಆಗುತ್ತಿರುವುದರಿಂದ ಯಂತ್ರಗಳ ಕೊರತೆ ನಿಜ.ಈ ಬಾರಿ ಭತ್ತದ ಬೆಳೆಯೂ ಸಾಕಷ್ಟು ಹೆಚ್ಚಾಗಿದೆ. ಹಡಿಲು ಗದ್ದೆಗಳಲ್ಲಿ 100-150 ಎಕರೆ ಯಷ್ಟು ಬೇಸಾಯ ಮಾಡಲಾಗಿದೆ. ಉಡುಪಿ ಜಿಲ್ಲೆ ಯಲ್ಲಿ ಇನ್ನೂ ಹೆಚ್ಚಿನ ಬೇಸಾಯವಾಗಿದೆ.ಆದ್ದರಿಂದ ಯಂತ್ರಗಳ ಕೊರತೆ ಸಹಜವಾಗಿದೆ. ಮುಂದಿನ ದಿನಗಳಲ್ಲಿ ಯಂತ್ರಗಳ ಸಂಖ್ಯೆ ಅಧಿಕಗೊಳ್ಳುವ ಸಾಧ್ಯತೆ ಹೆಚ್ಚು. ಈ ಭಾಗದ ಕೃಷಿಕರ ಅನುಕೂಲದ ದೃಷ್ಟಿಯಿಂದ ರಾಜ್ಯ ಸರಕಾರದ ಬೆಂಬಲ ಬೆಲೆಯ ಕುರಿತು ಸಂಬಂಧಪಟ್ಟವರಿಂದ ಮಾಹಿತಿ ತಿಳಿದುಕೊಂಡು ವ್ಯವಸ್ಥೆ ಸರಿಪಡಿಸಲು ಗಮನ ಹರಿಸಲಾಗುವುದು.
– ರಾಜೇಶ್‌ ನಾೖಕ್‌
ಉಳಿಪ್ಪಾಡಿಗುತ್ತು, ಬಂಟ್ವಾಳ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next