Advertisement

ಜನಪ್ರತಿನಿಧಿಗಳೇ…ಒಮ್ಮೆ  ಇತ್ತ  ಕಣ್ಣು ಹಾಯಿಸಿ…..

01:00 AM Feb 06, 2019 | Team Udayavani |

ಬದಿಯಡ್ಕ: ಬದಿಯಡ್ಕ ಪೆರಡಾಲ ಕೊರಗ ಕಾಲನಿಯಲ್ಲಿ ಸೂಕ್ತ ಕಟ್ಟಡವಿಲ್ಲದೆ ಅಂಗನವಾಡಿ ಮತ್ತು ಏಕೋಪಾಧ್ಯಾಯ ಶಾಲಾ ತರಗತಿಗಳು ಸಮುದಾಯ ಕೇಂದ್ರದಲ್ಲಿ ನಡೆಸುವ ದುಃಸ್ಥಿತಿ ಎದುರಾಗಿದೆ. ಹಿಂದುಳಿದ ವರ್ಗದ ಶಿಕ್ಷಣ ಪ್ರಗತಿಗಾಗಿ ವರ್ಷಗಳ ಹಿಂದೆ ನಿರ್ಮಿಸಲಾದ ಅಂಗನವಾಡಿ ಕಟ್ಟಡವು ಪ್ರಸ್ತುತ ಶಿಥಿಲಾವಸ್ಥೆಗೆ ತಲುಪಿದ್ದು, ಸಮರ್ಪಕ ರೀತಿಯಲ್ಲಿ ಅಗತ್ಯ ಸೌಕರ್ಯಗಳನ್ನು ಕೊಡಮಾಡದ ಕಾರಣ ಅಂಗನವಾಡಿ ಕೇಂದ್ರ ಸೊರಗಿದೆ. ಸಮೀಪದಲ್ಲಿರುವ ಏಕೋಪಾಧ್ಯಾಯ ಶಾಲೆಗೂ ಸೂಕ್ತ ಕಟ್ಟಡವಿಲ್ಲದೆ ಸಮುದಾಯ ಕೇಂದ್ರದಲ್ಲಿಯೇ ನಡಸಲಾಗುತ್ತಿದೆ. 

Advertisement

     ಕಳೆದ ಸೆಪ್ಟಂಬರ್‌ನಲ್ಲಿ ಅಂಗನವಾಡಿ ಕಟ್ಟಡದ ರಿಪೇರಿ ಕಾರ್ಯದ ನಿಮಿತ್ತ ತರಗತಿಗಳನ್ನು ಸ್ಥಳಾಂತರಿಸಲಾಗಿತ್ತು. ಹಲವು ತಿಂಗಳುಗಳು ಉರುಳಿದರೂ ಶಿಥಿಲಾವಸ್ಥೆಯಲ್ಲಿ ಶೋಚನೀಯವಾಗಿರುವ ಅಂಗನವಾಡಿ ಕಟ್ಟಡದ ದುರಸ್ತಿ ಅಥವಾ ಏಕೋಪಾಧ್ಯಾಯ ಶಾಲೆಗೆ ಸೂಕ್ತ ಕಟ್ಟಡವನ್ನು ನಿರ್ಮಿಸಲಾಗಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ಶೀಘ್ರದಲ್ಲೆ ಶೌಚಾಲಯ ಸಹಿತ ಅಂಗನವಾಡಿ ಕೊಠಡಿಗಳನ್ನು ದುರಸ್ತಿಗೊಳಿಸಿ, ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿ ಮಕ್ಕಳನ್ನು. ಸಮುದಾಯ ಕೇಂದ್ರದ  ಕಟ್ಟಡಕ್ಕೆ ಕಳುಹಿಸಲಾಗಿತ್ತು. ಅಂಗನವಾಡಿಯಲ್ಲಿ ಮಕ್ಕಳಿಗಾಗಿರುವ ಭೋಜನ ತಯಾರಿ ಅಡುಗೆಕೋಣೆಗೆ ತೆರಳಲು ಸರಿಯಾದ ದಾರಿಯಿಲ್ಲದ ಕಾರಣ ಅಂಗನವಾಡಿಗೆ ಸುತ್ತಿ ತೆರಳಬೇಕಾದ ದುರವಸ್ಥೆ ಇದೆ. ಅಂಗನವಾಡಿಯನ್ನು ಬೇರೆಡೆಗೆ ಸ್ಥಳಾಂತರಿಸಿ ನಾಲ್ಕು ತಿಂಗಳುಗಳು ಕಳೆದರೂ ಶೋಚನೀಯಾವಸ್ಥೆಯಲ್ಲಿರುವ ಅಂಗನವಾಡಿಯ ದುರಸ್ತಿ ಕಾರ್ಯ ಇನ್ನೂ ಆರಂಭಗೊಂಡಿಲ್ಲ. 

ಏಕೋಪಾಧ್ಯಾಯ ಶಾಲೆಗೂ ಕಟ್ಟಡವಿಲ್ಲದೆ 18 ವರ್ಷ 
ಕೊರಗ ಕಾಲನಿಗೆಂದು ಶೆ„ಕ್ಷಣಿಕ ಪ್ರಗತಿಗಾಗಿರುವ ಏಕೋಪಾಧ್ಯಾಯ ಶಾಲಾ ತರಗತಿಯನ್ನು 2000 ರಲ್ಲಿ ಆರಂಭಿಸಲಾಗಿತ್ತು. 

ಸಾಮಾಜಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯಾರಂಭಗೊಂಡ ಏಕೋಪಾಧ್ಯಾಯ ಶಾಲೆಗೆ 18 ವರ್ಷಗಳಾದರೂ  ಸೂಕ್ತ ಕಟ್ಟಡದ ಭಾಗ್ಯ ದೊರೆತಿಲ್ಲ ಎನ್ನಲಾಗಿದೆ. ಮಳೆಗಾಲದಲ್ಲಿ ಸೋರುವ ಕಟ್ಟಡದಲ್ಲಿ ತರಗತಿ ನಡೆಸಲೂ ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. 

ಜೀರ್ಣೋದ್ಧಾಗವಾಗಬೇಕು
 ಯವುದೇ ಸರಕಾರಗಳು ಬಂದರೂ, ಯಾವುದೇ ಪಂಚಾಯತ್‌ ಆಡಳಿತ ಬಂದರೂ ನಮಗೆ ಲಭಿಸಬೇಕಾದ ಸವಲತ್ತುಗಳು ಸೂಕ್ತ ರೀತಿಯಲ್ಲಿ  ದೊರಕುವುದಿಲ್ಲ. ಅಂಗನವಾಡಿ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದ್ದು ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸೌಕರ್ಯಯುಕ್ತ ಮಾಡಿಕೊಡಬೇಕು.
 – ವಿಮಲಾ  ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ. 

Advertisement

ಶೀಘ್ರ ಕ್ರಮ
 ಹಿಂದೆ ಈ ಪ್ರದೇಶದ ಅಂಗನವಾಡಿಗಾಗಿ ಹಣ ಮಂಜೂರು ಮಾಡಲಾಗಿತ್ತಾದರೂ ಕಾರಣಾಂತರಗಳಿಂದ ಅದು ಬಳಕೆ ಯಾಗಲಿಲ್ಲ. 2019-20ನೇ ಸಾಲಿನಲ್ಲಿ  ಈ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು. 
– ಕೆ.ಎನ್‌. ಕೃಷ್ಣ ಭಟ್‌, ಬದಿಯಡ್ಕ ಗ್ರಾ. ಪಂ.ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next