ಕುಂದಾಪುರ: ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಕುರಿತು ಮಾಹಿತಿಯ ಕೊರತೆಯಿದೆ. ಏಜೆನ್ಸಿಗಳು ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ಹಣ ಸ್ವೀಕರಿಸುತ್ತಿವೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೂ ಮಾಹಿತಿ ನೀಡುವ ಅವಶ್ಯವಿದೆ ಎಂದು ತಾಲೂಕು ಪಂಚಾಯತ್ ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ ಹೇಳಿದರು.
ಅವರು ಸೋಮವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಯಶಸ್ವಿ ಅನುಷ್ಠಾನಕ್ಕಾಗಿ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ ಯೋಜನೆಯ ಪಾಕ್ಷಿಕ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರುವ ಈ ದಿನಗಳಲ್ಲಿ ಸರಕಾರ ತಂದ ಈ ಯೋಜನೆಗಳು ಜನೋಪಯೋಗಿಯಾಗಿವೆ. ಈ ಕುರಿತು ಸರಿಯಾದ ಮಾಹಿತಿ ಎಲ್ಲರಿಗೂ ತಲುಪಬೇಕು ಎಂದರು.
ಮೈಸೂರು ಪ್ರಾದೇಶಿಕ ವಿಭಾಗದ ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಡಾ| ರಾಮಚಂದ್ರ ಬಾಯರಿ, 2 ವರ್ಷದ ಹಿಂದೆ ಆರಂಭವಾದ ಈ ಯೋಜನೆ ಕುರಿತು ಕೆಲವೆಡೆ ವೈದ್ಯರಿಗೂ ಮಾಹಿತಿ ಇಲ್ಲ. ಅದಕ್ಕಾಗಿ ರಾಜ್ಯಾದ್ಯಂತ 15 ದಿನಗಳ ಎಲ್ಲ ಜಿಲ್ಲೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತಗಳಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಲಿದೆ.
ವೈದ್ಯಲೋಕ ಕಾಲರಾ, ಸಿಡುಬು, ಪೊಲಿಯೊ, ಡಿಫ್ತಿàರಿಯಾ ಮೊದಲಾದ ರೋಗಗಳನ್ನು ನಿರ್ಮೂಲನೆ ಮಾಡಿದೆ. ಮುಂದೆಯೂ ಇಂತಹ ದಿಟ್ಟ ಹೆಜ್ಜೆಗಳು ಇರಲಿವೆ. ಇದಕ್ಕೆಲ್ಲ ಜನರ ಸಹಕಾರದ ಅಗತ್ಯವಿದೆ ಎಂದರು.ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶೋಕ್ ಉಪಸ್ಥಿತರಿದ್ದರು.ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ಸ್ವಾಗತಿಸಿ, ಆಯುಷ್ಮಾನ್ ಭಾರತ ಜಿಲ್ಲಾ ಸಂಯೋಜಕ ಜಗನ್ನಾಥ ಶಿರ್ಲಾಲ್ ವಂದಿಸಿದರು.
ತಾಲೂಕಿನ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸೇವಾಸಿಂಧು ಸಂಸ್ಥೆ ಪ್ರತಿನಿಧಿಗಳಿಗೆ ಕಾರ್ಯಾಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.