Advertisement

ಸೇತುವೆಯೊಂದಿಗೆ ಕುಸಿಯುತ್ತಿದೆ ಜನಪ್ರತಿನಿಧಿಗಳ ಭರವಸೆ

09:38 AM Nov 09, 2019 | sudhir |

ವಿದ್ಯಾನಗರ: ಕಾಂಕ್ರೀಟ್‌ ಕಿತ್ತು ಹೋಗಿ ತುಕ್ಕು ತಿಂದ ಕಬ್ಬಿಣದ ಸರಳುಗಳು, ನೀರಿನ ರಭಸಕ್ಕೆ, ವಾಹನಗಳ ಸಂಚಾರದ ಒತ್ತಡಕ್ಕೆ ಮೈಯೊಡ್ಡಿ ನಿಲ್ಲಲೂ ಶಕ್ತಿ ಇಲ್ಲದ ಅವಸ್ಥೆಯಲ್ಲಿ ಸಂಪೂರ್ಣ ಶಿಥಿಲಗೊಂಡ ಸೇತುವೆಯ ಮೇಲಿನ ಸಂಚಾರ ಭಯ ಹುಟ್ಟಿಸುತ್ತದೆ. ಈಗಲೋ ಆಗಲೋ ಕುಸಿದು ಬೀಳಬಹುದಾದ ಈ ಸೇತುವೆ ಬಗ್ಗೆ ಆತಂಕ ದಲ್ಲಿದ್ದಾರೆ ಈ ಊರಿನ ಜನರು. ಇದು ಮುಳ್ಳೇರಿಯ-ನಾಟೆಕಲ್‌ ಮಾರ್ಗ ಮಧ್ಯೆ ಇರುವ ಸೇತುವೆಯ ದುಃಸ್ಥಿತಿ. ಶಿಥಿಲಾವಸ್ಥೆಯ ಪರಮಾವ ಧಿ ಹಂತಕ್ಕೆ ತಲುಪಿರುವ ಈ ಸೇತು ವೆಯು ಕೇರಳ ಕರ್ನಾಟಕ‌ ಬಂಧಿಸುವ ಸೇತುವೂ ಹೌದು. ಶಿಥಿಲಗೊಂಡ ಸೇತುವೆ ಕೆಳಭಾಗವು ಗಾಬರಿ ಹುಟ್ಟಿಸುತ್ತಿದ್ದು ಆದಷ್ಟು ಬೇಗ ಇದನ್ನು ಒಡೆದು ಹೊಸ ಸೇತುವೆ ನಿರ್ಮಿಸದಿದ್ದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ.

Advertisement

ಸೇತುವೆ ಮೇಲಿನ ಪಯಣ ಅಪಾಯಕ್ಕೆ ರಹದಾರಿ
ಮುಳ್ಳೇರಿಯ-ನೆಟ್ಟಣಿಗೆ ರಸ್ತೆ ಮಧ್ಯೆ ಪಳ್ಳಪ್ಪಾಡಿಯಲ್ಲಿರುವ ಸೇತುವೆಯ ಅಡಿಭಾಗವು ಸಂಪೂರ್ಣ ಜೀರ್ಣಗೊಂಡಿದ್ದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲಿದೆ. ನಿರ್ವಹಣೆಯ ಕೊರತೆಯಿಂದ ವಾಹನ ಚಾಲಕರು, ಪ್ರಯಾಣಿಕರು ಆತಂಕದಿಂದಲೇ ಸೇತುವೆ ದಾಟುವಂತಾಗಿದೆ. ಶತಮಾನದ ಹಿಂದೆ ನಿರ್ಮಿಸಲಾಗಿದೆ ಎನ್ನುವ ಈ ಸೇತುವೆಯು ಈಗ ಸಂಪೂರ್ಣ ಜೀರ್ಣಾವಸ್ಥೆಯಲ್ಲಿದ್ದರೂ ಇದರ ಬಗ್ಗೆ ಪಂಚಾಯತ್‌ ಅಧಿಕೃತರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಒಂದೇ ನೋಟಕ್ಕೆ ಸೇತುವೆ ಅಪಾಯದಂಚಿಗೆ ತಲುಪಿರುವುದು ಅರಿವಾಗುತ್ತದೆ. ಪ್ರಯಾಣಿಕರ ತಂಗುದಾಣ ಇಲ್ಲದಿದ್ದರೂ ಈ ಸೇತುವೆಯನ್ನೆ ಪ್ರಯಾಣಿಕರು ಬಸ್ಸು ನಿಲ್ದಾಣವನ್ನಾಗಿ ಬಳಸುತ್ತಿದ್ದಾರೆ. ಸೇತುವೆಯ ಮೇಲೆಯೇ ಬಸ್ಸು ನಿಲ್ಲುತ್ತಿದ್ದು ಶಾಲಾ ಕಾಲೇಜು ಮಕ್ಕಳು ಸೇರಿದಂತೆ ಸಾವಿರಾರು ಜನರು ಇದನ್ನು ಆಶ್ರಯಿಸುತ್ತಿದ್ದಾರೆ. ಸೇತುವೆ ಕುಸಿದು ಅಪಾಯ ಎದುರಾಗುವ ಮುನ್ನ ಎಚ್ಚೆತ್ತುಕೊಂಡು ಪ್ರದೇಶದ ಜನರ ಆತಂಕವನ್ನು ದೂರ ಮಾಡಬೇಕಾಗಿದೆ.

ಮನವಿ ಮನಮುಟ್ಟಲಿಲ್ಲ
ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ಇತ್ತ ಗಮನ ಹರಿಸಿ ಸೇತುವೆಯನ್ನು ಮರು ನಿರ್ಮಿಸಿ ಜನರ ಆತಂಕ ದೂರಮಾಡುವುದರೊಂದಿಗೆ ಜನರಿಗೆ ಸುರಕ್ಷತೆಯನ್ನು ನೀಡಬೇಕು. ಜೀವಾಪಾಯ ಉಂಟಾಗುವ ಮುನ್ನ ಈ ಸೇತುವೆಯನ್ನು ಸಂಚಾರಯೋಗ್ಯವಾಗಿಸಬೇಕೆಂದು ಬೆಳ್ಳೂರಿನ ಜನತೆಯ ಪರವಾಗಿ ಈಗಾಗಲೇ ಬೆಳ್ಳೂರು ಪಂಚಾಯತು ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ತಿಂಗಳುಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ಬಾರದಿರುವುದು ಜನರ ಆತಂಕವನ್ನು ಹೆಚ್ಚಿಸಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಈ ನಡುವೆ ಅಂತಾರಾಜ್ಯ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು ರಸ್ತೆಯು ಈ ಸೇತುವೆಯ ಮೂಲಕ ಹಾದುಹೋಗುತ್ತದೆ. ಮಾತ್ರವಲ್ಲದೆ ಕೆಲವೇ ದಿನಗಳಲ್ಲಿ ಈ ಸೇತುವೆಯ ಮೇಲಿನ ರಸ್ತೆ ನಿರ್ಮಾಣ ಕಾರ್ಯ ಪೂರ್ತಿಯಾಗಲಿದ್ದು ಅಪಾಯದಂಚಿನಲ್ಲಿರುವ ಸೇತುವೆಯನ್ನು ಒಡೆದು ಹೊಸ ಸೇತುವೆ ನಿರ್ಮಿಸದಿದ್ದಲ್ಲಿ ಮಾಡಿದ ಕೆಲಸ ನೀರ ಮೇಲಿನ ಹೋಮ ದಂತಾಗಲಿದೆ.

ಮುಂದೆ ಸೇತುವೆ ಕುಸಿದು ಬಿದ್ದಲ್ಲಿ ಸೇತುವೆ ನಿರ್ಮಾಣ ಹಾಗೂ ರಸ್ತೆಯ ಮರುಡಾಮರೀಕರಣ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಕಾಮಗಾರಿ ನಡೆಯುತ್ತಿರುವ ಭಾಗದಲ್ಲಿ ಮಳೆಯಿಂದ ಕೆಸರುಮಯವಾಗುವ ರಸ್ತೆಯು ಬಿಸಿಲು ಪ್ರಾರಂಭವಾದಂತೆ ಧೂಳಿನ ಸಮಸ್ಯೆಗೂ ಕಾರಣ ವಾಗುತ್ತಿದ್ದು ಇಲ್ಲಿನ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ ಎನ್ನುವಂತಾಗಿದೆ.

Advertisement

ಜನರ ಬೇಡಿ ಕೆಗೆ ಕಿವು ಡುಜನರ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಅಧಿಕಾರ ವರ್ಗ ತೋರುವ ಅನಾಸ್ಥೆಗೆ ಈ ಸೇತುವೆ ಜ್ವಲಂತ ಉದಾಹರಣೆ. ಜನರ ಬೇಡಿಕೆಗಳಿಗೆ ಕಿವುಡಾಗುವ ಕಾಲ ದೂರವಾಗಿ ಸಕಾಲದಲ್ಲಿ ಈ ಸೇತುವೆಯ ನಿರ್ಮಾಣವಾಗಬೇಕು. ಪ್ರತಿಯೊಂದನ್ನೂ ಹೋರಾಟದ ಮೂಲಕವೇ ಪಡೆಯಬೇಕೆಂಬ ಅಲಿಖೀತ ನಿಯಮ ಕೊನೆಯಾಗುವುದು ಎಂದು?
-ಶ್ರೀಕಾಂತ್‌ ನೆಟ್ಟಣಿಗೆ.

– ವಿದ್ಯಾಗಣೇಶ್‌ ಅಣಂಗೂರು

Advertisement

Udayavani is now on Telegram. Click here to join our channel and stay updated with the latest news.

Next