Advertisement

ಮಾಜಾಳಿಯಿಂದ ಗೊರ್ಟೆಯ ರಾಷ್ಟ್ರೀಯ ಹೆದ್ದಾರಿ ಕುರಿತು ಸರಕಾರಕ್ಕೆ ವರದಿ: ಡಿಸಿ

08:42 PM Jul 15, 2023 | Team Udayavani |

ಭಟ್ಕಳ: ಕಾರವಾರದ ಮಾಜಾಳಿಯಿಂದ ಭಟ್ಕಳದ ಗೊರ್ಟೆ ತನಕದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಪರಿಸೀಲಿಸಿದ್ದು ವಿವರವಾದ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು ಎಂದು ಭಟ್ಕಳದಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಮ್ಮನ್ನು ಭೇಟಿಯಾದ ನಾಗರಿಕರಿಗೆ ತಿಳಿಸಿದರು.

Advertisement

ಬೆಳಗ್ಗೆ ಮಾಜಾಳಿಯಿಂದ ವಿವಿಧ ಇಲಾಖೆಯ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಐ.ಆರ್.ಬಿ. ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಅಭಿಯಂತರರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಪ್ರವಾಸ ಮಾಡಿದ್ದು ಪ್ರವಾಸದುದ್ದಕ್ಕೂ ಜನರು ಬಂದು ತಮ್ಮ ತಮ್ಮ ಅಹವಾಲುಗಳನ್ನು ಹೇಳಿಕೊಂಡಿದ್ದಾರೆ. ಅವರ ಅಭಿಪ್ರಾಯ, ಅಧಿಕಾರಿಗಳ ಅಭಿಪ್ರಾಯ ಹಾಗೂ ಎನ್.ಎಚ್.ಎ.ಐ. ಮತ್ತು ಐ.ಆರ್.ಬಿ. ಅಧಿಕಾರಿಗಳ ಅಭಿಪ್ರಾಯವನ್ನು ಕ್ರೋಢೀಕರಿಸಿ ವರದಿಯನ್ನು ತಯಾರಿಸಿ ಕಳುಹಿಸುದಾಗಿಯೂ ಜಿಲ್ಲಾಧಿಕಾರಿ ತಿಳಿಸಿದರು.

ಮುಖ್ಯವಾಗಿ ಭಟ್ಕಳದ ಸಮಸ್ಯೆಗಳನ್ನು ನಾಗರೀಕರೊಂದಿಗೆ ಮುಕ್ತವಾಗಿ ಚರ್ಚಿಸಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಎಲ್ಲರ ಅಹವಾಲುಗಳನ್ನು ಆಲಿಸಿದರು. ರಾಷ್ಟ್ರೀಯ ಹೆದ್ದಾರಿಯಿಂದ ನಾಗರೀಕರಿಗೆ ತೊಂದರೆಯಾಗಿರುವ ಬಗ್ಗೆ ತಿಳಿದಿದ್ದೇನೆ. ಕಾರವಾರದ ಮಾಜಾಳಿಯಿಂದ ಬೆಳಕೆಯ ತನಕ ಐ.ಆರ್.ಬಿ.ಯವರ ಕಾಮಗಾರಿಯಿಂದ ಎಲ್ಲೆಲ್ಲಿ ಅಪಘಾತಗಳು ಸಂಭವಿಸಿದೆ ಎನ್ನುವುದನ್ನು ಕೂಡಾ ಅರಿತಿದ್ದೇನೆ. ಐ.ಆರ್.ಬಿ.ಯವರು ಹೆದ್ದಾರಿ ಕಾಮಗಾರಿ ಮುಕ್ತಾಯವಾಗಿದ್ದು ಕೇವಲ ೭ ಕಿ.ಮಿ. ರಸ್ತೆ ಮಾಡುವುದು ಬಾಕಿ ಎಂದು ವರದಿ ಕೊಟ್ಟಿದ್ದಾರೆ. ತನ್ನ ಪರಿಶೀಲನೆಯ ವೇಳೆಯಲ್ಲಿ ಅವುಗಳನ್ನು ಕೂಡಾ ಗಣನೆಗೆ ತೆಗೆದುಕೊಂಡಿದ್ದು ಕೇವಲ ರಸ್ತೆ ಮಾಡಿಕೊಟ್ಟರೆ ಅದು ಪೂರ್ಣ ಎಂದು ಹೇಳಲಾಗದು. ಅಗತ್ಯದ ಬೀದಿ ದೀಪ, ರಸ್ತೆಯ ಎರಡೂ ಕಡೆಗಳಲ್ಲಿ ಇರುವ ಸರ್ವಿಸ್ ರಸ್ತೆ, ಚರಂಡಿ ವ್ಯವಸ್ಥೆಯಿದ್ದಲ್ಲಿ ಚರಂಡಿ ಮಾಡಿದ ನಂತರವಷ್ಟೇ ಅದನ್ನು ಪೂರ್ಣ ಎಂದು ಹೇಳಲು ಸಾಧ್ಯ ಎಂದರು. ಅದನ್ನೆಲ್ಲ ಗಣನೆಗೆ ತೆಗೆದುಕೊಂಡಿದ್ದು ವರದಿಯಲ್ಲಿ ಸೇರಿಸುವುದಾಗಿಯೂ ಹೇಳಿದರು. ಹಲವು ಕಡೆಗಳಲ್ಲಿ ಬಸ್ ನಿಲ್ದಾಣಗಳನ್ನು ಎಲ್ಲಿ ಇದೆಯೋ ಅಲ್ಲಿ ಮಾಡಿಲ್ಲ, ಬೇರೆ ಬೇರೆ ಕಡೆಗಳಲ್ಲಿ ಮಾಡಿದ್ದರಿಂದ ಕೂಡಾ ಸಮಸ್ಯೆಯಾಗಿದೆ ಎಂದರು.

ಭಟ್ಕಳ ನಗರದಲ್ಲಿ ಮಳೆಗಾಲದಲ್ಲಿ ತೀವ್ರ ತೊಂದರೆಯಾಗುವುದನ್ನು ಅರಿತಿದ್ದೇನೆ. ಹೆದ್ದಾರಿ ಕಾಮಗಾರಿ ತುಂಬಾ ನಿದಾನಗತಿಯಲ್ಲಿ ಆಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಅಲ್ಲದೇ ಅನೇಕ ಮನೆಗಳಿಗೆ ನೀರು ನುಗ್ಗಿದ್ದು ಕೂಡಾ ಇದೇ ರಸ್ತೆ ಕಾಮಗಾರಿಯಿಂದ ಎಂದ ಅವರು ಐ,ಆರ್.ಬಿ. ಅಧಿಕಾರಿಗಳಿಗೆ ಶೀಘ್ರ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿಸಿದರು.

ಭಟ್ಕಳದಲ್ಲಿ ಹೆದ್ದಾರಿಯ ಮೇಲೆ ಇನ್ನು ಮುಂದೆ ನೀರು ನಿಲ್ಲುವುದಕ್ಕೆ ಅವಕಾಶ ಕೊಡಬಾರದು ಎಂದು ಖಡಕ್ ಆಗಿ ಹೇಳಿದ ಅವರು ಸೋಮವಾರವೇ ಪುರಸಭೆಯಲ್ಲಿ ಸ್ಥಳೀಯರು, ಅಧಿಕಾರಿಗಳು, ಐ.ಆರ್.ಬಿ. ಇಂಜಿನಿಯರ್ ಸಭೆ ನಡೆಸಿ ನಗರದಲ್ಲಿ ಚರಂಡಿ ವ್ಯವಸ್ಥೆ ಹೇಗೆ ಆಗಬೇಕು, ಯಾವ ಯಾವ ಕಡೆಗಳಲ್ಲಿ ನೀರು ಹರಿದು ಹೋಗಬೇಕು ಎನ್ನುವುದನ್ನು ನಿರ್ಧರಿಸಿ ಮಾಸ್ಟರ್ ಪ್ಲಾನ್ ತಯಾರಿಸುವಂತೆ ಹೇಳಿದ ಅವರು ಸೋಮವಾರ ಕಾರವಾರದಿಂದ ಕೆ.ಯು.ಡಿ.ಐ.ಸಿ.ಇಂಜಿನಿಯರ್ ಅವರನ್ನು ಕೂಡಾ ಕಳುಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ, ರಾ.ಹೆ.ಅಭಿವೃದ್ಧಿ ಪ್ರಾಧಿಕಾರದ ಪ್ರೊಜೆಕ್ಟ್ ಡೈರೆಕ್ಟರ್, ನಾಗರೀಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next