ಬೆಂಗಳೂರು: ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಆಗ್ನೇಯ ವಿಭಾಗದ ಪೊಲೀಸರು ಹೊಸ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಈ ತಂತ್ರಜ್ಞಾನಕ್ಕೆ “ಲೋಕಸ್ಪಂದನ’ “ನಿಮ್ಮ ನುಡಿ, ನಮ್ಮ ನಡೆ’ ಎಂಬ ಹೆಸರಿಡಲಾಗಿದೆ.
ಪೊಲೀಸ್ ಠಾಣೆಗಳಿಗೆ ದೂರು ಹೊತ್ತು ಬರುವ ಸಾರ್ವಜನಿಕರಿಗೆ ಪೊಲೀಸರು ಯಾವ ರೀತಿ ಸ್ಪಂದಿಸಿದರು? ಹೇಗೆ ನಡೆಸಿಕೊಂಡರು? ಎಂಬ ಬಗ್ಗೆ ದೂರುದಾರರು ಠಾಣೆ ಹೊರಭಾಗದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಪೊಲೀಸರ ಬಗ್ಗೆ ಅಭಿಪ್ರಾಯ ತಿಳಿಸಬಹುದು. ಜತೆಗೆ ಸ್ಟಾರ್ ಮೂಲಕ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಬಹುದು. ಈ ಮೂಲಕ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯ ಹೆಚ್ಚಾಗಲಿದೆ.
ಜತೆಗೆ ಠಾಣಾ ಮಟ್ಟದ ಪೊಲೀಸರ ಕಾರ್ಯವೈಖರಿ ಹಿರಿಯ ಅಧಿಕಾರಿಗಳಿಗೆ ನೇರವಾಗಿ ದೊರೆಯಲಿದೆ. ಅದರಿಂದ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೂ ನೆರವಾಗುತ್ತದೆ. ಕಳೆದ ಆರು ತಿಂಗಳಿಂದ ಈ ವ್ಯವಸ್ಥೆ ಜಾರಿಯಲ್ಲಿದ್ದು, ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾರ ಈ ಹೊಸ ಪ್ರಯೋಗಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಬೇಸಿಕ್ ಮೊಬೈಲ್ ಬಳಕೆದಾರರಿಂದಲೂ ಪ್ರತಿಕ್ರಿಯೆ: ಹ್ಯಾಂಡ್ರೈಡ್ ಮೊಬೈಲ್ ಬಳಕೆದಾರರು ಮಾತ್ರವಲ್ಲ, ಬೇಸಿಕ್ ಮೊಬೈಲ್ ಬಳಕೆದಾರರು ಅಥವಾ ಬಳಸದವರು ಕೂಡ ಪೊಲೀಸರ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದರು. ಠಾಣೆ ಹೊರಭಾಗದಲ್ಲಿ ಕ್ಯೂಆರ್‌ಕೋಡ್ ಅಂಟಿಸಿರುವ ಬಾಕ್ಸ್ ಕೆಳಗಡೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಚಲನ್ ಮಾದರಿಯಲ್ಲಿ ನಮೂನೆಗಳು ಇದೆ. ಅದರಲ್ಲಿ ಹತ್ತಾರು ಪ್ರಶ್ನೆಗಳು ಇದ್ದು, ಸರಿ/ಇಲ್ಲ ಎಂದು ಟಿಕ್ ಮಾಡಿ, ಲೆಟರ್ ಬಾಕ್ಸ್‌ನಲ್ಲಿ ಚಲನ್ ಹಾಕಬೇಕು. ಡಿಸಿಪಿ ಕಚೇರಿಯಲ್ಲಿರುವ ಸಿಬ್ಬಂದಿ ತಮ್ಮ ಬಳಿಯಿರುವ ಕೀ ಬಳಸಿ ಬಾಕ್ಸ್‌ನಲ್ಲಿರುವ ಚಲನ್ ಪಡೆದು ಡಿಸಿಪಿಗೆ ನೇರವಾಗಿ ನೀಡಲಿದ್ದಾರೆ.
ಡಿಪಿಗೆ ಕ್ಯೂಆರ್‌ಕೋಡ್ ಹಾಕಿ!: ಡಿಸಿಪಿ ಸೇರಿ ಆಗ್ನೇಯ ವಿಭಾಗದ ಪೊಲೀಸ್ ಅಧಿಕಾರಿಗಳು ತಮ್ಮ ಡಿಪಿಯಲ್ಲಿ ಕ್ಯೂಆರ್‌ಕೋಡ್ ಹಾಕಿಕೊಳ್ಳಬೇಕು. ರಾತ್ರಿ 10 ಅಥವಾ 11 ಗಂಟೆಯಿಂದ ಮರು ದಿನ ಮುಂಜಾನೆ 5 ಗಂಟೆ ಅವಧಿಯಲ್ಲಿ ಯಾವುದಾದರೂ ಅವಘಢ ಅಥವಾ ಬೇರೆ ಘಟನೆ ನಡೆಯಬಹುದು. ಈ ಅವಧಿಯಲ್ಲಿ ಅಧಿಕಾರಿಗಳು ವಿಶ್ರಾಂತಿ(ರಾತ್ರಿ ಪಾಳಿ ಹೊರತುಪಡಿಸಿ) ಪಡೆಯುತ್ತಿರುತ್ತಾರೆ. ಆಗ ಡಿಸಿಪಿ ಅಥವಾ ಠಾಣಾಧಿಕಾರಿಯ ಮೊಬೈಲ್ ಡಿಪಿ ಯನ್ನು ಸ್ಕ್ಯಾನ್ ಮಾಡುವ ಮೂಲಕ ದೂರುಗಳು ಅಥವಾ ಘಟನೆಯನ್ನು ಡಿಸಿಪಿಗೆ ಸಲ್ಲಿಸಬಹುದಾಗಿದೆ. ಅದರಿಂದ ಸಾರ್ವಜನಿಕರ ದೂರುಗಳು ಕಾಲ ವಿಳಂಬವಿಲ್ಲದೆ ಸಕಾಲದಲ್ಲಿ ಇತ್ಯರ್ಥವಾಗಲು ಅನುಕೂಲವಾಗುತ್ತದೆ.
6812 ಮಂದಿ ಅಭಿಪ್ರಾಯ ಸಂಗ್ರಹ : ಕಳೆದ ನವೆಂಬರ್‌ನಿಂದ ವಿಭಾಗದ 14 ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕ್ಯೂಆರ್‌ಕೋಡ್ ಅಳವಡಿಸಲಾಗಿತ್ತು. ಇದುವರೆಗೂ 8662 ಮಂದಿ ಠಾಣೆಗಳಿಗೆ ಭೇಟಿ ನೀಡಿದ್ದರು. ಅದರಲ್ಲಿ 6812 ಮಂದಿ ಅಭಿಪ್ರಾಯ ನೀಡಿದ್ದಾರೆ. ಆಡುಗೋಡಿ-438, ಬಂಡೇ ಪಾಳ್ಯ-203, ಬೇಗೂರು-939, ಬೊಮ್ಮನಹಳ್ಳಿ-482, ಎಲೆಕ್ಟ್ರಾನಿಕ್ ಸಿಟಿ-421, ಎಚ್‌ಎಸ್‌ಆರ್ ಲೇಔಟ್- 197, ಹುಳಿಮಾವು-254, ಕೋರಮಂಗಲ-445, ಮಡಿವಾಳ-323, ಮೈಕೋ ಲೇಔಟ್-879, ಪರಪ್ಪನ ಅಗ್ರಹಾರ 422, ಸೆನ್ ಪೊಲೀಸ್ ಠಾಣೆ 787, ಸದ್ದುಗುಂಟೆಪಾಳ್ಯ 470, ತಿಲಕನಗರ 552 ಮಂದಿ ಇದುವರೆಗೂ ಪ್ರತಿಕ್ರಿಯಿಸಿದ್ದಾರೆ.
ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು “ಲೋಕ ಸ್ಪಂದನ’ “ನಿಮ್ಮ ನುಡಿ, ನಮ್ಮ ನಡೆ’ ಎಂಬ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರಿಂದ ಪೊಲೀಸರ ಕಾರ್ಯವೈಖರಿಯನ್ನು ಸಾರ್ವಜನಿಕರು ನೇರವಾಗಿ ಡಿಸಿಪಿ ಕಚೇರಿಗೆ ತಲುಪಿಸಬಹುದು.
– ಸಿ.ಕೆ.ಬಾಬಾ, ಆಗ್ನೇಯ ವಿಭಾಗ ಡಿಸಿಪಿ