Advertisement

ಮತಗಟ್ಟೆಗಳ ಸುಸ್ಥಿತಿ ಖಾತ್ರಿ ವರದಿ ನೀಡಿ: ಜಿಲ್ಲಾಧಿಕಾರಿ ಸೂಚನೆ

12:30 AM Feb 15, 2019 | Team Udayavani |

ಮಡಿಕೇರಿ: ಸೆಕ್ಟರ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಸುಸ್ಥಿತಿ ಸಂಬಂಧ ಮತ್ತೂಮ್ಮೆ ಪರಿಶೀಲಿಸಿ ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.  
    
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೆಕ್ಟರ್‌ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಈಗಾಗಲೇ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿತ್ತು, ಅದರಂತೆ ವರದಿ ನೀಡಲಾಗಿದೆ. ಆದರೂ ಮತ್ತೂಮ್ಮೆ ಪರಿಶೀಲಿಸಿ ವಲ್ನರಬಲ್‌ ಪ್ರದೇಶ, ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್‌ ಸಂಪರ್ಕ, ರ್‍ಯಾಂಪು ವ್ಯವಸ್ಥೆ ಮತ್ತಿತರ ಸೌಲಭ್ಯಗಳು ಇವೆಯೇ ಎಂಬುದನ್ನು ಮತ್ತೂಮ್ಮೆ ಖಚಿತಪಡಿಸಿಕೊಂಡು ವರದಿ ನೀಡುವಂತೆ ಸೂಚಿಸಿದರು. 
   
ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಮತ್ತಿತರ ಸಂಬಂಧ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.  ಚುನಾವಣಾ ದಿನಾಂಕ ಪ್ರಕಟವಾದ 24 ಗಂಟೆಯೊಳಗೆ ಹೆದ್ದಾರಿ ಫ‌ಲಕಗಳ ಪೋಸ್ಟರ್‌ಗಳನ್ನು ತಹಶೀ ಲ್ದಾರರು ಹಾಗೂ ತಾ.ಪಂ.ಇಒಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. 
     
ಜಿಲ್ಲೆಯಲ್ಲಿ ಯುವ ಮತದಾರರ ಸಂಖ್ಯೆ ಕಡಿಮೆ ಇದೆ ಎಂಬುವುದು ಕೇಳಿ ಬರುತ್ತಿದೆ. ಆದ್ದರಿಂದ ಯುವ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕಾಲೇಜು ಹಂತದಲ್ಲಿ 18 ವರ್ಷ ಪೂರ್ಣಗೊಂಡವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿ ಯುವ ಮತದಾರರ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಣ್ಮಣಿ ಜಾಯ್‌ ಅವರು ತಿಳಿಸಿದರು. 
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪೆನ್ನೇಕರ್‌ ಅವರು ವಲ್ನರಬಲ್‌ ಪ್ರದೇಶಗಳಿಗೆ ಸಂಬಂಧಿಸಿದಂತೆ ಪೊಲೀಸ್‌ ಬೀಟ್‌ ಸಿಬ್ಬಂದಿಗಳನ್ನು ಸಂಪರ್ಕಿಸಿ ನಿಖರ ಮಾಹಿತಿ ಪಡೆಯುವಂತೆ ಅವರು ಸಲಹೆ ಮಾಡಿದರು. 

Advertisement

ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್‌ ಅವರು ಮಾತನಾಡಿ ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಬಿಎಲ್‌ಒಗಳು ನಿಯೋಜನೆಗೊಂಡಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. 01-01-2019 ರ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭೂ ದಾಖಲೆಗಳ ಉಪ ನಿರ್ದೇಶಕ ಶ್ರೀನಿವಾಸ್‌, ತಹಶೀಲ್ದಾರರಾದ ಕುಸುಮಾ, ಗೋವಿಂದರಾಜು, ಸೆಕ್ಟರ್‌ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಬದ್ಧತೆ ಇರಬೇಕು
ಕಚೇರಿಯಲ್ಲಿ ಕುಳಿತು ವರದಿ ನೀಡಿದರೆ ಸಾಲದು. ಪ್ರತೀ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿನ ಸುಸ್ಥಿತಿ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.  ಚುನಾವಣೆ ದಿನಾಂಕ ಪ್ರಕಟವಾದ ನಂತರ ಚುನಾವಣಾ ವೀಕ್ಷಕರು ಆಗಮಿಸಿ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ. ಆದ್ದರಿಂದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆ ಕರ್ತವ್ಯದಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಬದ್ಧತೆಯಿಂದ  ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next