ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ಶಿಫಾರಸು ಮಾಡಿರುವ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿಯೇ ಇಲ್ಲ, ನಾನು ಆ ವರದಿಯನ್ನು ಓದಿಯೂ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2011ರ ಜಾತಿ ಗಣತಿ ಹಾಗೂ ಸದಾಶಿವ ಆಯೋಗದ ವರದಿಯಲ್ಲಿ ಉಲ್ಲೇಖೀಸಿರುವ ಪರಿಶಿಷ್ಟ ಜಾತಿಗಳ ಜನಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲಾ ಎಂದು ಪ್ರಶ್ನಿಸಿದ್ದಕ್ಕೆ, ವರದಿಯನ್ನು ಸರ್ಕಾರ ಸ್ವೀಕರಿಸಿಲ್ಲ, ನಾನೂ ವರದಿಯಲ್ಲಿ ಏನಿದೆಯೆಂದು ಓದಿಲ್ಲ. ಈಗಷ್ಟೇ ಮುಖ್ಯಮಂತ್ರಿಯವರು ವರದಿಯನ್ನು ತರಿಸಿಕೊಂಡಿದ್ದಾರೆ ಎಂದು ಉತ್ತರಿಸಿದರು.
ವರದಿ ಜಾರಿ ಬಗ್ಗೆ ನಿಮ್ಮ ನಿಲುವು ಏನು ಎಂದು ಕೇಳಿದ್ದಕ್ಕೆ, ಇದರಲ್ಲಿ ನನ್ನ ವೈಯುಕ್ತಿಕ ನಿಲುವು ಮುಖ್ಯ ಅಲ್ಲ. ಮುಖ್ಯಮಂತ್ರಿಯವರೇ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ವರದಿ ಜಾರಿಗೊಳಿಸಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಬೇಡ ಎನ್ನುತ್ತಿದ್ದಾರೆ. ಅದಕ್ಕಾಗಿ ಬೇಕು-ಬೇಡ ಅನ್ನುವ ಎರಡು ಕಡೆಯವರನ್ನು ಕರೆಸಿ ಜ.13ಕ್ಕೆ ಮುಖ್ಯಮಂತ್ರಿಯವರು ಚರ್ಚಿಸಲಿದ್ದಾರೆ. ಸಮಾಜ ಕಲ್ಯಾಣ ಸಚಿವನಾಗಿ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಆದರೆ, ಯಾರಿಗೂ ಅನ್ಯಾಯ ಆಗಬಾರದು ಅನ್ನುವುದು ನನ್ನ ಅಭಿಪ್ರಾಯ ಎಂದರು.
ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ಮರುಪರಿಶೀಲನೆ ನಡೆಯುತ್ತಿದೆ. ಜ.13ರ ನಂತರ ಜಾತಿ ಗಣತಿ ವರದಿಯ ಬಿಡುಗಡೆಗೆ ಮುಖ್ಯಮಂತ್ರಿಯವರೇ “ಮುಹೂರ್ತ’ ನಿಗದಿಪಡಿಸಲಿದ್ದಾರೆ ಎಂದು ಇದೇ ವೇಳೆ ಆಂಜನೇಯ ತಿಳಿಸಿದರು.