Advertisement

ಸದನದಲ್ಲಿ ಧ್ವನಿಸಿದ ಕಸ್ತೂರಿ ರಂಗನ್‌ ವರದಿ

12:19 AM Dec 11, 2020 | mahesh |

ಬೆಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ| ಕಸ್ತೂರಿ ರಂಗನ್‌ ವರದಿ ಮತ್ತೆ ಸದನದಲ್ಲಿ ಪ್ರತಿಧ್ವನಿಸಿದೆ. ಕರಾವಳಿ ಮತ್ತು ಮಲೆನಾಡು ಭಾಗದ ಜನರ ಭಯ ದೂರ ಮಾಡಬೇಕು. ರಾಜ್ಯ ಸರಕಾರವು ಸುಪ್ರೀಂ ಕೋರ್ಟ್‌ ಅಥವಾ ಹಸುರು ಪೀಠ (ಎನ್‌ಜಿಟಿ)ದ ಮೊರೆ ಹೋಗಬೇಕು ಎಂದು ಆ ಭಾಗದ ಶಾಸಕರು ಒಕ್ಕೊರಲ ಒತ್ತಾಯ ಮಾಡಿದ್ದಾರೆ. ವರದಿ ತಿರಸ್ಕರಿಸಲು ಆಗ್ರಹಿಸಿ ಆ ಭಾಗದ ಜನರು ಗ್ರಾ.ಪಂ. ಚುನಾವಣೆ ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ. ಈ ಮಾಸಾಂತ್ಯದೊಳಗೆ ರಾಜ್ಯ ಸರಕಾರವು ಹಸುರು ಪೀಠಕ್ಕೆ ತನ್ನ ನಿಲುವು ತಿಳಿಸಬೇಕಿದೆ. ಇದುಆ ಭಾಗದ ಜನರ ಜೀವನದ ಪ್ರಶ್ನೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.

Advertisement

ಆತಂಕಪಡಬೇಕಿಲ್ಲ
ಸರಕಾರದ ಪರ ಉತ್ತರಿಸಿದ ಸಚಿವ ಸುರೇಶ್‌ ಕುಮಾರ್‌, ವರದಿ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಜನಜೀವನ ಮತ್ತು ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಸರಕಾರ ಕ್ರಮ ಕೈಗೊಳ್ಳಲಿದೆ. ಯಾರನ್ನೂ ಒಕ್ಕಲೆಬ್ಬಿಸುವ ಪ್ರಶ್ನೆ ಇಲ್ಲ, ಅಭಿವೃದ್ಧಿಗೂ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ. ಅರಣ್ಯ ಮತ್ತು ಕಾನೂನು ಇಲಾಖೆ ಜತೆ ಮಾತನಾಡಿ ಹಸುರು ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಅಲ್ಲದೆ ಗ್ರಾ.ಪಂ. ಚುನಾವಣೆ ಬಹಿಷ್ಕಾರ ಇದಕ್ಕೆ ಪರಿಹಾರವಲ್ಲ. ಚುನಾವಣೆಯಲ್ಲಿ ಪಾಲ್ಗೊಂಡು ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದೂ ಹೇಳಿದರು.

ಈ ಹಿಂದೆಯೂ ವರದಿ ತಿರಸ್ಕರಿಸಬೇಕು ಎಂದು ಸರಕಾರ ತನ್ನ ನಿಲುವನ್ನು ತಿಳಿಸಿದೆ. ಆದರೂ ಕೇಂದ್ರ ಸರಕಾರ ಕರಡು ಅಧಿಸೂಚನೆ ಹೊರಡಿಸಿದೆ. ಅದಕ್ಕೂ ಆಕ್ಷೇಪಣೆ ಸಲ್ಲಿಸಲಾಗಿದೆ. ಇತ್ತೀಚೆಗಿನ ಆದೇಶ ಸಂಬಂಧ ಸಂಪುಟ ಉಪ ಸಮಿತಿಯನ್ನೂ ರಚನೆ ಮಾಡಲಾಗಿದೆ. ಆ ಸಮಿತಿ ಮಾಸಾಂತ್ಯದೊಳಗೆ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದೆ ಎಂದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಕಲಾಪ ಬಹಿಷ್ಕರಿಸಿದ್ದರಿಂದ ಚರ್ಚೆಯಲ್ಲಿ ಭಾಗಿಯಾಗಲಿಲ್ಲ.

ಕೇರಳ ಮಾದರಿ ಅನುಸರಿಸಬೇಕಿತ್ತು
ಬಿಜೆಪಿಯ ಅರಗ ಜ್ಞಾನೇಂದ್ರ ಮಾತನಾಡಿ, ಡಾ| ಕಸ್ತೂರಿ ರಂಗನ್‌ ವರದಿ ಮಲೆನಾಡು, ಕರಾವಳಿ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ನಮ್ಮಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೇರಳದಲ್ಲಿ 13,108 ಚದರ ಕಿ.ಮೀ. ಸೂಕ್ಷ್ಮ ವಲಯ ಎಂದು ಗುರುತಿಸಲಾಗಿತ್ತು. ಅಲ್ಲಿನ ಸರಕಾರ ಗ್ರಾಮಗಳಲ್ಲಿ ಸಭೆ ನಡೆಸಿ ವರದಿ ನೀಡಿದ ಅನಂತರ 9 ಸಾವಿರ ಚದರ ಕಿ.ಮೀ. ಕೈ ಬಿಡಲಾಗಿದೆ. ರಾಜ್ಯದಲ್ಲಿ 20,668 ಚದರ ಕಿ.ಮೀ. ಗುರುತಿಸಿದ್ದು, ನಾವು ಕೇರಳದ ರೀತಿ ಸಭೆ ನಡೆಸಿ ಗಡಿ ಗುರುತು ಮಾಡಿ ವರದಿ ಕೊಟ್ಟಿದ್ದರೆ ನಮ್ಮದೂ 13 ಸಾವಿರ ಚದರ ಕಿ.ಮೀ.ಗೆ ಇಳಿಯುತ್ತಿತ್ತು ಎಂದರು.

ಯುಪಿಎ ಸರಕಾರ
ಕಸ್ತೂರಿ ರಂಗನ್‌ ವರದಿ ಜಾರಿಗೆ ಮುಂದಾಗಿತ್ತು. ಆದರೆ ನಮ್ಮ ಪ್ರತಿಭಟನೆಯಿಂದ ಸಾಧ್ಯವಾಗಲಿಲ್ಲ. ಕೃಷಿ, ಜನಜೀವನ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಾರದು ಎಂಬುದು ನಮ್ಮ ಕಾಳಜಿ. ಗ್ರಾಮಗಳಲ್ಲಿ ಮನೆ ನಿರ್ಮಿಸಲು ಅಗತ್ಯವಾದ ಮರಳು ತೆಗೆಯುವುದು, ಕೆಂಪು ಕಲ್ಲು ತೆಗೆಯಬಾರದು ಎಂದು ಹೇಳಿದರೆ ಅಲ್ಲಿನ ಜನ ಎಲ್ಲಿಗೆ ಹೋಗಬೇಕು?
-ವಿ. ಸುನಿಲ್‌ಕುಮಾರ್‌, ಕಾರ್ಕಳ ಶಾಸಕ

Advertisement

ಕೇರಳದಲ್ಲಿ ಪ್ರಾದೇಶಿಕ ಪಕ್ಷವು ಅಲ್ಲಿನ ಜನರ ಹಿತಾಸಕ್ತಿ ಕಾಪಾಡುತ್ತದೆ, ನಮ್ಮಲ್ಲಿ ರಾಷ್ಟ್ರೀಯ ಪಕ್ಷಗಳಿದ್ದೂ ಹಿತಾಸಕ್ತಿ ಕಾಪಾಡಿಲ್ಲ ಎಂದು ನಮ್ಮ ಕ್ಷೇತ್ರಗಳಲ್ಲಿ ಜನ ಹೇಳುತ್ತಾರೆ.
-ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ಶಾಸಕ

ವಿದೇಶಗಳಿಂದ ಹಣ ಪಡೆಯುವ ಗೋವಾ ಫೌಂಡೇಶನ್‌ ಹಸುರು ಪೀಠಕ್ಕೆ ಹೋದದ್ದರಿಂದ ನಮಗೆ ತೊಂದರೆಯಾಗಿದೆ. ಆ ಫೌಂಡೇಶನ್‌ನಲ್ಲಿ ಇರುವವರು ಪರಿಸರವಾದಿಗಳಲ್ಲ, “ವ್ಯಾಧಿ’ಗಳು.
ಕೆ.ಜೆ. ಬೋಪಯ್ಯ, ಬಿಜೆಪಿ ಶಾಸಕ

ಸರಕಾರ ಈ ವಿಚಾರದಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಕೆಲವರು ಇದನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕಾದರೆ ಸ್ಪಷ್ಟತೆ ಇರಬೇಕು.
ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾ ಸ್ಪೀಕರ್‌

Advertisement

Udayavani is now on Telegram. Click here to join our channel and stay updated with the latest news.

Next