Advertisement

ಇನ್ನೂ ಸಿದ್ಧವಾಗಿಲ್ಲ ಶಿಥಿಲ ಕಟ್ಟಡಗಳ ವರದಿ

12:36 AM Oct 10, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ಕಟ್ಟಡ ದುರಂತಗಳು ಸಂಭವಿಸುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತರು ನೀಡುವ ಆದೇಶ ಆ ಸಮಯಕ್ಕೆ ಮಾತ್ರ ಸೀಮಿತವಾಗುತ್ತಿದೆ. ಪ್ರತಿ ಬಾರಿ ಕಟ್ಟಡ ದುರಂತ ಸಂಭವಿಸಿದಾಗಲೂ ಬಿಬಿಎಂಪಿಯ ಆಯುಕ್ತರು ಶಾಸ್ತ್ರದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದು, ಶಿಥಿಲ ಕಟ್ಟಡಗಳ ಬಗ್ಗೆ ವರದಿ ನೀಡಿ ಎಂದು ಆದೇಶಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.

Advertisement

ರಚನೆಯಾಗದ ತಂಡ: ಸೆ.8ರ ಸಂಜೆ ಬನಶಂಕರಿಯ 7ನೇ ಹಂತದ ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತವಾದಾಗ ಬಿಬಿಎಂಪಿ ಆಯುಕ್ತ ಬಿ.ಎಚ್‌ ಅನಿಲ್‌ಕುಮಾರ್‌ “ಬಿಬಿಎಂಪಿ ಎಲ್ಲ ಎಂಟು ವಲಯಗಳಲ್ಲಿರುವ ಶಿಥಿಲ ಕಟ್ಟಡಗಳ ಬಗ್ಗೆ ಪರಿಶೀಲಿಸಲು ನಗರ ಯೋಜನಾ ಹಾಗೂ ವಲಯ ಮಟ್ಟದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ತಂಡ ರಚಿಸುವಂತೆ ಸೂಚಿಸಿದ್ದರು. ಆದರೆ, ಒಂದು ತಿಂಗಳಾದರೂ ಶಿಥಿಲ ಕಟ್ಟಡಗಳ ಪರಿಶೀಲನೆಗೆ ತಂಡ ರಚಿಸಿಲ್ಲ. ಶಿಥಿಲ ಕಟ್ಟಡಗಳನ್ನು ಗುರುತಿಸಿರುವ ಬಗ್ಗೆಯಾಗಲಿ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಅಧಿಕಾರಿಗಳ ಈ ಧೋರಣೆ ಬಿಬಿಎಂಪಿ ಆಯುಕ್ತರ ಆದೇಶಕ್ಕೆ ಬೆಲೆನೇ ಇಲ್ವಾ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಆಯುಕ್ತರ ಮಾತಿಗೆ ಬೆಲೆಯಿಲ್ಲ: ಈ ಹಿಂದಿನ ಬಿಬಿಎಂಪಿ ಆಯುಕ್ತರಾದ ಮಂಜುನಾಥ ಪ್ರಸಾದ್‌ ಅವರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ವರದಿ ನೀಡುವಂತೆ ಮೂರು ಬಾರಿ ಆದೇಶ ಮಾಡಿದ್ದರೂ, ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಅದೇ ರೀತಿ ಸೆ.8ರಂದು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರಾದ ಅನಿಲ್‌ ಕುಮಾರ್‌ ಸೆ.9ರಂದು “ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಪ್ರತ್ಯೇಕ ತಂಡ ರಚಿಸಿ ಅವಧಿ ಮೀರಿದ, ಭಾಗಶಃ ಕುಸಿತ ಉಂಟಾಗಿರುವ ಕಟ್ಟಡ ಹಾಗೂ ಶಿಥಿಲಗೊಂಡ ಸ್ಥಿತಿಯಲ್ಲಿರುವ ಕಟ್ಟಡಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದರು.

ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ವಾಸಿಸುತ್ತಿರುವವರು ಮತ್ತು ಕಟ್ಟಡಗಳ ಮಾಲೀಕರಿಗೆ ಸೂಚನೆ ನೀಡಿ, ಕಟ್ಟಡಗಳ ಸುರಕ್ಷತೆ ಕುರಿತು ತಜ್ಞರಿಂದ ತಪಾಸಣೆ ವರದಿ ಸಿದ್ಧಪಡಿಸಿಕೊಂಡು ಹಾಗೂ ದುರಸ್ತಿಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಶಿಥಿಲಾ ವಸ್ಥೆಯಲ್ಲಿರುವ ಕಟ್ಟಡಗಳು° ದುರಸ್ತಿ ಮಾಡಲು ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲು ಹಾಗೂ ತೀರಾ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಲು ಕಟ್ಟಡದಲ್ಲಿ ವಾಸ ಇರುವವರಿಗೆ ಹಾಗೂ ಕಟ್ಟಡದ ಮಾಲಿಕರಿಗೆ ನೋಟಿಸ್‌ ಜಾರಿ ಮಾಡುವಂತೆ ಅಥವಾ ಕೆಎಂಸಿ ಕಾಯ್ದೆಯನ್ವಯ ಅವರನ್ನು ಕಟ್ಟಡದಿಂದ ತೆರವುಗೊಳಿಸಿ, ಮಾಲೀಕರ ಖರ್ಚಿನಲ್ಲೇ ಕಟ್ಟಡವನ್ನು ನೆಲಸಮಗೊಳಿಸಲು ಕ್ರಮವಹಿಸುವಂತೆಯೂ ಆದೇಶ ಮಾಡಿದ್ದರು. ಆದರೆ, ಯಾವ ಆದೇಶವೂ ಕಾರ್ಯರೂಪಕ್ಕೆ ಬಂದಿಲ್ಲ.

ಕ್ಯಾರೇ ಎನ್ನದ ಅಧಿಕಾರಿಗಳು!: ಕಟ್ಟಡ ದುರಂತಗಳು ಸಂಭವಿಸುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ. ಅಧಿಕಾರಿಗಳಿಗೆ ಶಿಕ್ಷೆ ನೀಡುವಂತಾಗಬೇಕಾದರೆ, ಕೆಎಂಸಿ (ಬೈಲಾ)ಕಾಯ್ದೆಗೆ ತಿದ್ದುಪಡಿ ತರಬೇಕು. ಕಟ್ಟಡ ದುರಂತ ಸಂಭವಿಸಿದರೆ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ವಕೀಲರಾದ ಉಮಾಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದು, (ಸೆ.10) ಇಂದು ಮತ್ತೂಮ್ಮೆ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಈಗ ಕಾಯ್ದೆಯ ಅನ್ವಯ ಅಧಿಕಾರಿಗಳಿಗೆ ಶಿಕ್ಷೆಯಾಗದೆ ಇರುವುದರಿಂದ ಹಾಗೂ ಬಿಬಿಎಂಪಿ ಆಯುಕ್ತರೂ ಕಠಿಣ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟಡ ದುರಂತ ಸಂಭವಿಸಿದರೂ, ಕ್ಯಾರೇ ಎನ್ನುತ್ತಿಲ್ಲ.

Advertisement

ವಿನ್ಯಾಸ ಪರಿಶೀಲಿಸುವಲ್ಲಿ ವಿಫ‌ಲ: ಕಟ್ಟಡ ನಿರ್ಮಾಣದಲ್ಲಿ ಎರಡು ರೀತಿಯ ಅನುಮತಿಗಳನ್ನು ನೀಡಲಾಗುತ್ತದೆ. 15 ಮೀಟರ್‌ ಅಥವಾ ಅದಕ್ಕಿಂತಲೂ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ ಕಚೇರಿಯಿಂದ ಮತ್ತು 15 ಮೀಟರ್‌ಗಿಂತಲೂ ಚಿಕ್ಕ ಕಟ್ಟಡಗಳಿಗೆ ವಲಯದ ಕಾರ್ಯಾಲಯದಲ್ಲಿ ನಗರ ಯೋಜನಾಧಿಕಾರಿ ಮತ್ತು ಜಂಟಿ ಆಯುಕ್ತರು ಅನುಮತಿ ನೀಡುತ್ತಾರೆ. ಈ ಎರಡೂ ಅನುಮತಿ ಪ್ರಕ್ರಿಯೆಯಲ್ಲಿ ಕಟ್ಟಡ ಮಾಲೀಕ ಮತ್ತು ಸ್ಟ್ರಕ್ಚರಲ್‌ ವಿನ್ಯಾಸಕಾರರಿಂದ ಕಾನೂನು ಪ್ರಕಾರ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಬಗ್ಗೆ ಬಾಂಡ್‌ ಪಡೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತದೆ. ಈ ಹಂತದಲ್ಲಿ ನಿಯಮಾನುಸಾರ ಕಟ್ಟಡ ನಿರ್ಮಾಣವಾಗುತ್ತಿದೆಯೇ, ಇಲ್ಲವೇ ಎಂಬ ಬಗ್ಗೆ ಬಿಬಿಎಂಪಿ ಎಂಜಿನಿಯರ್‌ಗಳು ಪರಿಶೀಲಿಸಬೇಕು. ಆದರೆ, ಇದು ಸರ್ಮಪಕವಾಗಿ ಆಗುತ್ತಿದೆಯೇ ಎನ್ನುವ ಪ್ರಶ್ನೆ, ಪ್ರತಿ ಬಾರಿ ಕಟ್ಟಡ ದುರಂತ ಸಂಭವಿಸಿದಾಗಲೂ ಮುನ್ನೆಲೆಗೆ ಬರುತ್ತಿದೆ.

ಶಿಥಿಲ, ದುರಸ್ತಿ ಹಂತದ ಕಟ್ಟಡಗಳ ವರದಿ ಬಗ್ಗೆ ಸಾಧ್ಯವಾದಷ್ಟು ಬೇಗ ಮಾಹಿತಿ ನೀಡಲಾಗುವುದು.
-ಬಿ.ಎಚ್‌. ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಕೆಪಿಎಂಸಿ ಕಾಯ್ದೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸಬೇಕು ಎಂದಿದೆ. ಆದರೆ, ಅಧಿಕಾರಿಗಳಿಗೆ ಯಾವ ರೀತಿಯ ಶಿಕ್ಷೆಯನ್ನು ನೀಡಬೇಕು ಎಂಬ ಸ್ಪಷ್ಟತೆ ಇಲ್ಲ. ಇದರಿಂದ ಅಧಿಕಾರಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಶಿಕ್ಷೆಯಾದರೆ ಮಾತ್ರ ನಗರದಲ್ಲಿ ಕಟ್ಟಡ ದುರಂತಗಳಿಗೆ ಮುಕ್ತಿ ಸಿಗಲಿದೆ.
-ಉಮಾಪತಿ ಎಸ್‌, ಅರ್ಜಿದಾರ ವಕೀಲ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next