ಮೊಹಾಲಿ: ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಗೆ ಕೇರಳದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಶಶಿ ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹರ್ಭಜನ್, ಆಯ್ಕೆ ಸಮಿತಿ ನಿರ್ಧಾರವನ್ನು ಟೀಕಿಸಿದ್ದಾರೆ. ಕೂಡಲೇ ಹೊಸ ಆಯ್ಕೆ ಸಮಿತಿ ರಚಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಒತ್ತಾಯಿಸಿದ್ದಾರೆ.
“ಆಯ್ಕೆ ಸಮಿತಿ ಸಂಜು ಸ್ಯಾಮ್ಸನ್ ಅವರ ಹೃದಯಾಂತರಾಳವನ್ನು ಪರೀಕ್ಷಿಸುತ್ತಿರಬೇಕು ಎನಿಸುತ್ತಿದೆ. ಆಯ್ಕೆ ಸಮಿತಿಗೆ ಬಲಶಾಲಿ ಜನರ ಅಗತ್ಯವಿದೆ. ಸೌರವ್ ಗಂಗೂಲಿಯವರೇ, ಈಗಿರುವ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಮೊದಲು ಬದಲಾಯಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ’ ಎಂದು ಟ್ವಿಟರ್‌ನಲ್ಲಿ ಹರ್ಭಜನ್ ಸಿಂಗ್ ಮನವಿ ಮಾಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ಅವರಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗೆ ಒಂದೂ ಅವಕಾಶ ನೀಡದೆ ಅವರನ್ನು ವಿಂಡೀಸ್ ವಿರುದ್ಧ ಸರಣಿಯಿಂದ ಕೈಬಿಡಲಾಗಿದೆ.
ಹಲವು ಅವಕಾಶ ಹೊರತಾಗಿಯೂ ಭಾರೀ ವೈಫಲ್ಯ ಕಂಡಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಅವಕಾಶ ನೀಡಲಾಗಿದೆ. ಆಯ್ಕೆ ಸಮಿತಿ ಈ ನಿರ್ಧಾರದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.