ವಾಷಿಂಗ್ಟನ್: ಕಳೆದ ಕೆಲದಿನಗಳಿಂದ ಅನ್ಯ ಗ್ಯಾಲಕ್ಸಿಯಿಂದ ನಿಗೂಢ ಸಂದೇಶಗಳು ಭೂಮಿಗೆ ಬರಲು ಶುರುವಾಗಿವೆ. ಈ ಸಿಗ್ನಲ್‌ಗಳು ಏನು ಎಂದು ಅರಿಯದೆ ಇದೀಗ ವಿಜ್ಞಾನಿಗಳು ತಲೆಕೆರೆದುಕೊಳ್ಳುವಂತಾಗಿದೆ.
ಶಕ್ತಿಯ ಸ್ಫೋಟ ಅಥವಾ ಫಾಸ್ಟ್ ರೇಡಿಯೋ ಬರ್ಸ್ಡ್- ಎಫ್ಆರ್‌ಬಿ ಎಂದು ಕರೆಯಲಾಗುವ ಇಂತಹ 8 ಸಂದೇಶಗಳು ಭೂಮಿಯಲ್ಲಿರುವ ರೇಡಿಯೋ ಟೆಲಿಸ್ಕೋಪ್‌ಗ್ಳಿಗೆ ಬಂದಿವೆ. ಆದರೆ ಇವುಗಳು ಎಲ್ಲಿಂದ ಬಂದಿವೆ ಮತ್ತು ಏನು ಎಂಬುದನ್ನು ಪತ್ತೆಹಚ್ಚಲು ವಿಜ್ಞಾನಿಗಳು ಮುಂದಾಗಿದ್ದಾರೆ.
2007ರಲ್ಲಿ ಮೊದಲ ಬಾರಿಗೆ ಇಂತಹ ಸಂದೇಶಗಳು ಬಂದಿದ್ದು, ಬಳಿಕ 12ರಷ್ಟು ಸಿಗ್ನಲ್‌ಗಳನ್ನು ಸ್ವೀಕರಿಸಲಾಗಿದೆ. ಆದರೆ ಇದು ಅಂದು ಬಂದಿದ್ದ ಸಿಗ್ನಲ್ ರೀತಿಯದ್ದೇ, ಏನಾದರೂ ವ್ಯತ್ಯಾಸವಿದೆಯೇ ಎಂದು ನೋಡಬೇಕಿದೆ. ಪದೇ ಪದೇ ಎಫ್ಆರ್‌ಬಿ ಸಿಗ್ನಲ್‌ಗಳು ಬರುತ್ತಿರುವುದರಿಂದ ಅವುಗಳು ಎಲ್ಲಿನವು ಎಂಬ ಕುತೂಹಲ ಹೆಚ್ಚಾಗಿದೆ. ವಿಜ್ಞಾನಿಗಳ ಪ್ರಕಾರ ಬ್ರಹ್ಮಾಂಡದಲ್ಲಿ ಭೂಮಿಗೆ ಅತಿ ಸನಿಹದಿಂದಲೇ ಈ ಸಿಗ್ನಲ್‌ಗಳು ಬರುತ್ತಿವೆ. ನಾವಿರುವ ಮಿಲ್ಕಿ ವೇ ಗ್ಯಾಲೆಕ್ಸಿಗೆ ಸನಿಹದ ಗ್ಯಾಲೆಕ್ಸಿಯಿಂದಲೇ ಬಂದಿರಬಹುದು ಎಂದೂ ಊಹಿಸಲಾಗಿದೆ.
ಕೆನಡಾದ ಹೈಡ್ರೋಜನ್ ಇಂಟೆನ್ಸಿಟಿ ಮ್ಯಾಪಿಂಗ್ ಎಕ್ಸರಿಮೆಂಟ್‌ನ ಟೆಲಿಸ್ಕೋಪ್‌ಗೆ ಹೊಸ ಸಂದೇಶಗಳು ಸಿಕ್ಕಿವೆ. ಈವರೆಗೆ ಎಫ್ಆರ್‌ಬಿಗಳು ಎಲ್ಲಿಂದ ಬರುತ್ತಿವೆ ಮತ್ತು ಅವುಗಳು ಏನು ಎಂಬುದು ಜಗತ್ತಿನ ಯಾವ ವಿಜ್ಞಾನಿಗಳಿಗೂ ತಿಳಿದಿಲ್ಲ. ಇವುಗಳು ನಕ್ಷತ್ರಗಳು ಕಪ್ಪುರಂಧ್ರಗಳಾಗುವುದು ಅಥವಾ ಅನ್ಯಗ್ರಹ ಜೀವಿಗಳು ಕಳುಹಿಸುತ್ತಿರುವ ಸಂದೇಶಗಳಾಗಿರಬಹುದೇ ಎಂಬ ಪ್ರಶ್ನೆ ಕಾಡಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ವಿಜ್ಞಾನಿಗಳು ಇಂತಹುದೇ ಸಂದೇಶಗಳ ಬಗ್ಗೆ ಶೋಧನೆ ನಡೆಸಿದ್ದಾರೆ.