ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಮೇಲೆ ಮಾತನಾಡುತ್ತಿದ್ದ ಬಿಜೆಪಿಯ ವೇದವ್ಯಾಸ ಕಾಮತ್ ಅವರ ಭಾಷಣಕ್ಕೆ ಆಡಳಿತ ಪಕ್ಷದ ಶಾಸಕರು ಪದೇ ಪದೆ ಅಡ್ಡಿಪಡಿಸಿದ ಪ್ರಸಂಗ ನಡೆಯಿತು.
ಆಡಳಿತಾರೂಢ ಶಾಸಕರಿಗೆ ಬುದ್ಧಿ ಮಾತು ಹೇಳಿದ ಸ್ಪೀಕರ್ ಖಾದರ್, ನೀವಿಲ್ಲಿ ಶಾಸಕರು ಆಡುವ ಮಾತಗಳನ್ನೇ ಕೇಳಿಸಿಕೊಳ್ಳದಿದ್ದರೆ ನಿಮ್ಮ ಕ್ಷೇತ್ರದ ಜನರ ಮಾತು ಕೇಳುವ ತಾಳ್ಮೆ ವಹಿಸುತ್ತೀರಾ? ಮೊದಲು ಕೇಳುಗರಾಗಿ, ಅನಂತರ ಉತ್ತಮ ನಾಯಕರಾಗುತ್ತೀರಿ ಎಂದು ಸಲಹೆ ನೀಡಿದರು.
ಸುಮಾರು 135 ಪುಟಗಳಿರುವ ಈ ಬಾರಿಯ ಬಜೆಟ್‌ನ 37 ಕಡೆಗಳಲ್ಲಿ ಕೇಂದ್ರ ಸರಕಾರ ಏನೂ ಮಾಡಿಲ್ಲ, ಹಿಂದಿನ ಸರಕಾರ ಏನೂ ಮಾಡಿಲ್ಲ ಎಂದು ಟೀಕಿಸಲಾಗಿದೆ. ಆದರೆ, 9 ವರ್ಷದಲ್ಲಿ ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಏನೇನು ಕೊಡುಗೆ ಕೊಟ್ಟಿದೆ ಎಂಬುದನ್ನು ನಾನಿಲ್ಲಿ ಹೇಳಲೇಬೇಕಿದೆ ಎನ್ನುತ್ತಾ ವೇದವ್ಯಾಸ ಕಾಮತ್ ಭಾಷಣ ಆರಂಭಿಸಿದರು. 9 ವರ್ಷದಲ್ಲಿ 26 ಸಾವಿರ ಕಿ.ಮೀ. ಇದ್ದ ರಾಷ್ಟ್ರೀಯ ಹೆದ್ದಾರಿಯು 54 ಸಾವಿರ ಕಿ.ಮೀ.ನಷ್ಟಾಗಿದೆ. 3.8 ಲಕ್ಷ ಕಿ.ಮೀ. ಇದ್ದ ಗ್ರಾಮೀಣ ರಸ್ತೆಗಳು 7.30 ಲಕ್ಷ ಕಿ.ಮೀ. ಗೆ ಏರಿಕೆಯಾಗಿದೆ ಎನ್ನುತ್ತಿದ್ದಂತೆ ಸಚಿವ ಶಿವರಾಜ್ ತಂಗಡಗಿ, ಕಾಂಗ್ರೆಸ್‌ನ ಕೃಷ್ಣಾರೆಡ್ಡಿ, ನರೇಂದ್ರಸ್ವಾಮಿ ಆಕ್ಷೇಪಿಸಲು ಆರಂಭಿಸಿದರು. ಇದು ಕೇಂದ್ರ ಸರಕಾರದ ಬಜೆಟ್ ಭಾಷಣವೋ, ರಾಜ್ಯ ಸರಕಾರ ಮಂಡಿಸಿದ ಬಜೆಟ್ ಮೇಲಿನ ಚರ್ಚೆಯೋ ಎಂದು ಪ್ರಶ್ನಿಸಿದರು.
ಅಷ್ಟೇ ತೀವ್ರವಾಗಿ ಮಾತು ಮುಂದುವರಿಸಿದ ಕಾಮತ್, ಪಿಎಂ ಏನೂ ಮಾಡಿಲ್ಲ ಎಂದು ಹೇಳಲು ರಾಜ್ಯ ಬಜೆಟ್‌ನಲ್ಲಿ ಅವಕಾಶ ಇದೆ ಎಂದಾದರೆ, ಪಿಎಂ ಏನು ಮಾಡಿದ್ದಾರೆ ಎಂಬುದನ್ನು ಹೇಳಲು ಅವಕಾಶ ಇಲ್ಲವೇ? 74 ರಷ್ಟಿದ್ದ ವಿಮಾನ ನಿಲ್ದಾಣಗಳು ಈಗ 148 ರಷ್ಟಾಗಿವೆ. 16 ರಷ್ಟಿದ್ದ ಐಐಟಿಗಳು 23 ಆಗಿವೆ. 614 ರಷ್ಟಿದ್ದ ವೈದ್ಯಕೀಯ ಕಾಲೇಜುಗಳು 1,341 ರಷ್ಟಾಗಿವೆ ಎನ್ನುತ್ತಿದ್ದಂತೆ ಕಾಂಗ್ರೆಸ್‌ನ ನರೇಂದ್ರಸ್ವಾಮಿ, ನಯನಾ ಮೋಟಮ್ಮ ಮತ್ತೆ ಆಕ್ಷೇಪಿಸಿದರು. ಜಿಎಸ್‌ಟಿ ಬಾಕಿ ಎಷ್ಟಿದೆ? ಎಲ್ಲವನ್ನೂ ಖಾಸಗೀಕರಣ ಮಾಡಿದ್ದಾರೆ, ಯಾರನ್ನೋ ಹೊಗಳಲು ಇರುವ ಸದನವಲ್ಲ ಇದು ಎನ್ನುತ್ತಿದ್ದಂತೆ, ಬಿಜೆಪಿಯ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಅಂಕಿ-ಅಂಶ ಸಹಿತವಾಗಿ ಅಭಿವೃದ್ಧಿ ಚಟುವಟಿಕೆಗಳನ್ನು ಅವರು ವಿವರಿಸುತ್ತಿದ್ದಾರೆ.
ಅದನ್ನು ಕೇಳುವ ತಾಳ್ಮೆಯೂ ನಿಮಗಿಲ್ಲವೇ ? ಕೇಂದ್ರ ಸರಕಾರದ ವಿರುದ್ಧ ಪುಟಗಟ್ಟಲೇ ಮುದ್ರಿಸಿ ಬಜೆಟ್ ಭಾಷಣ ಮಾಡಿದಾಗ ನಾವು ಸುಮ್ಮನಿರಲಿಲ್ಲವೇ? ನೀವೆಲ್ಲ ಸತ್ಯ ಹರಿಶ್ಚಂದ್ರರ ತುಂಡುಗಳಾ? ಬಜೆಟ್‌ನಲ್ಲಿ ಹೇಳಿರುವುದೆಲ್ಲಾ ಸತ್ಯವೇ ಎಂದು ತಿರುಗೇಟು ನೀಡಿದರು.
ನರೇಂದ್ರಸ್ವಾಮಿ ವರ್ತನೆಗೆ ಸ್ಪೀಕರ್ ಗರಂ
ನಾನು ಒಂದು ಪುಟ ಓದಿದ್ದಕ್ಕೇ ಕಾಂಗ್ರೆಸಿಗರು ಇಷ್ಟು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಬಜೆಟ್ ಭಾಷಣದಲ್ಲಿ 37 ಕಡೆ ನಮ್ಮನ್ನು ಟೀಕಿಸುವಾಗ ನಮಗೆ ಏನನ್ನಿಸಿರಬೇಡ ಎನ್ನುತ್ತಾ ವೇದವ್ಯಾಸ ಕಾಮತ್ ಭಾಷಣ ಮಾಡುತ್ತಿರುವಾಗ, ಆಡಳಿತಾರೂಢ ಕಾಂಗ್ರೆಸ್‌ನ ನರೇಂದ್ರ ಸ್ವಾಮಿ, ಕುಳಿತಲ್ಲೇ ಮೈಕ್ ಆನ್ ಮಾಡಿಕೊಂಡು, ಮೊದಲ ಪುಟಕೂ ಕೊನೆಯ ಪುಟಕೂ ಎಂದು ಹಾಡುತ್ತಾ ಲೇವಡಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಸದಸ್ಯ ಸುರೇಶ್ ಕುಮಾರ್, ಕೂತು ಮಾತನಾಡುವುದು ಒಂದು ಚಾಳಿಯಾಗಿದೆ. ಇದನ್ನು ತಪ್ಪಿಸಬೇಕು ಎಂದು ಸ್ಪೀಕರ್ ಗಮನಕ್ಕೆ ತಂದರು. ಗರಂ ಆದ ಸ್ಪೀಕರ್, ನರೇಂದ್ರ ಸ್ವಾಮಿ ಅವರೇ ನೀವೊಬ್ಬ ಹಿರಿಯ ಶಾಸಕರಿದ್ದೀರಿ, ಮಾಜಿ ಮಂತ್ರಿಗಳಿದ್ದೀರಿ. ಮೊದಲ ಬಾರಿ ಗೆದ್ದವರಿಗಿಂತ ಕೆಟ್ಟದಾಗಿ ವರ್ತಿಸಿದರೆ ಹೇಗೆ ಎಂದು ಗಂಭೀರವಾಗಿ ಪ್ರಶ್ನಿಸಿದರು.
ಮಂಗಳೂರಿನಲ್ಲಿ ಸರಕಾರವು ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಿದಾಗಿನಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ. ವಿನಾಕಾರಣ ಮಧ್ಯರಾತ್ರಿಯಲ್ಲಿ ಮನೆ ಬಾಗಿಲು ತಟ್ಟಿ ಎಬ್ಬಿಸುತ್ತಿರುವ ಈ ವಿಂಗ್ ಅತಿರೇಕದಿಂದ ವರ್ತಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲೇಬೇಕು.
– ವೇದವ್ಯಾಸ ಕಾಮತ್, ಮಂಗಳೂರು ದಕ್ಷಿಣ ಬಿಜೆಪಿ ಶಾಸಕ