ಹಳಿಯಾಳ: ಎಪಿಎಂಸಿ ಮತ್ತು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗಳು ಅನ್ನದಾತರಿಗೆ ಮಾರಕವಾಗಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವುಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ಸೆ.28 ರಂದು ಹಳಿಯಾಳ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಿವಿಧ ಸಂಘಟನೆಯವರು ಜಂಟಿ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, ರಾಜ್ಯ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿ ವಿರೋಧಿಸಿ ನೀಡಿರುವ ಕರ್ನಾಟಕ ಬಂದ್‌ಗೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಸೋಮವಾರ ಹಳಿಯಾಳ ಬಂದ್‌ಗೂ ಕರೆ ನೀಡಿರುವುದಾಗಿ ತಿಳಿಸಿದರು.
ಪಟ್ಟಣದ ಮರಾಠಾ ಭವನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಇಲ್ಲಿಯ ಶಿವಾಜಿ ವೃತ್ತಕ್ಕೆ ಆಗಮಿಸಿ ರಸ್ತಾರೊಖೋ, ಮಾನವ ಸರಪಳಿ ನಿರ್ಮಿಸುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದರು.
ರೈತ ಮುಖಂಡ ಕುಮಾರ ಬೋಬಾಟಿ ಮಾತನಾಡಿ, ರೈತರಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಸಹಕರಿಸಬೇಕು. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವುದಿಲ್ಲ. ಆದರೆ ರೈತರ ಕೂಗು ಸರ್ಕಾರದ ಕಿವಿಗೆ ಬೀಳಬೇಕಾದರೆ ಜನರು ಬಂದ್‌ಗೆ ಸಂಪೂರ್ಣ ಸಹಕರಿಸುವುದು ಅತಿ ಮುಖ್ಯವಾಗಿದೆ ಎಂದರು.
ಸಿಐಟಿಯು ಸಂಘಟನೆ ರಾಜ್ಯ ಉಪಾಧ್ಯಕ್ಷ ಹರೀಶ ನಾಯ್ಕ ಮಾತನಾಡಿ ಸದ್ಯ ಇರುವ ಬಿಜೆಪಿ ಸರ್ಕಾರ ಬಡವರ ಪರ ಇಲ್ಲ, ಕಾಯ್ದೆ ಜಾರಿಗೆ ತರದೆ ಇದ್ದರೆ ಯಡಿಯೂರಪ್ಪ ಅವರು ಸಿಎಂ ಕುರ್ಚಿ ಕಳೆದುಕೊಳ್ಳಲಿದ್ದು ಆ ಭಯದಿಂದ ರಾಜ್ಯದಲ್ಲೂ ಅವರು ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿದ್ದು ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ಎಂದ ಅವರು, ಕೃಷಿ ಮಸೂದೆ ಕಾಯ್ದೆಯಿಂದ ಆತ್ಮನಿರ್ಭರ, ಸ್ವಾವಲಂಬಿ ಭಾರತ ನಿರ್ಮಾಣ ಅಸಾಧ್ಯವಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ಸೋಮವಾರದ ಬಂದ್‌ಗೆ ಹಳಿಯಾಳ ತಾಲೂಕಿನ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ತಾಲೂಕಾಧ್ಯಕ್ಷ ಶಿರಾಜ ಮುನವಳ್ಳಿ, ಕಾರ್ಮಿಕ ಸಂಘಟನೆಯವರು, ಭಾರತ ಆಟೋ ಸ್ಟ್ಯಾಂಡಿನ ಅಧ್ಯಕ್ಷ ಅಬ್ದುಲ್ ಶೇಖ, ಭಾರತೀಯ ಮಾಜಿ ಸೈನಿಕರ ಸಂಘದ ಸುರೇಶ ಶಿವಣ್ಣವರ, ಹಿರಿಯ ನಾಗರಿಕರ ವೇದಿಕೆಯ ಜಿಡಿ ಗಂಗಾಧರ, ದಲಿತ ಸಂಘರ್ಷ ಸಮೀತಿ, ಕರ್ನಾಟಕ ರೈತ ಪ್ರಾಂತ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಬೆಂಬಲ ಸೂಚಿಸಿದರು.
ಸುದ್ದಿಗೊಷ್ಠಿಯಲ್ಲಿ ಪ್ರಮುಖರಾದ ಎಂ.ವಿ ಘಾಡಿ, ಅಶೋಕ ಮೇಟಿ, ಗೊಡಿಮಣಿ ಮೊದಲಾದವರು ಇದ್ದರು.