Advertisement

ರಾಜಕಾಲುವೆ, ಕೆರೆಕಟ್ಟೆ, ಕೋಡಿ ದುರಸ್ತಿ ಮಾಡಿ

12:58 PM Jun 23, 2019 | Suhan S |

ಕೋಲಾರ: ತಾಲೂಕಿನ ದೊಡ್ಡ ಕೆರೆಯಾಗಿರುವ ಸೋಮಾಂಬುಧಿ ಅಗ್ರಹಾರ ಕೆರೆಯ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ, ಕೆರೆಯ ಕೋಡಿ, ಕಟ್ಟೆ ದುರಸ್ತಿ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಕೆ.ಸಿ. ವ್ಯಾಲಿ ಕಾಮಗಾರಿ ವಹಿಸಿಕೊಂಡಿರುವ ಮೆಘಾ ಕನ್‌ಸ್ಟ್ರಕ್ಷನ್‌ ಕಂಪನಿ ಎಂಡಿಗೆ ಸ್ವೀಕರ್‌ ರಮೇಶ್‌ಕುಮಾರ್‌ ಸೂಚನೆ ನೀಡಿದರು.

Advertisement

ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಗೆ ಶನಿವಾರ ಅಧಿಕಾರಿಗಳೊಂದಿಗೆ ಆಗಮಿಸಿದ್ದ ರಮೇಶ್‌ಕುಮಾರ್‌, ಈ ಕೆರೆಗೆ ನೀರು ಬಂದು ಹಲವು ವರ್ಷಗಳೇ ಉರುಳಿರುವುದರಿಂದ ಇದರ ಕೋಡಿ ಮತ್ತು ಕಟ್ಟೆ ದುರಸ್ತಿಗೆ ಕ್ರಮವಹಿಸಲು ಸೂಚಿಸಿದರು. ರಾಜಕಾಲುವೆಯನ್ನು ಇಂದೇ ಸರಿಪಡಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿ, ನಂತರ ನೀರು ಹೆಚ್ಚಾದರೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದರು. ರಾಜಕಾಲುವೆಯಲ್ಲಿ ಮರಳಿಗಾಗಿ 15 ಅಡಿ ಆಳದ ಗುಂಡಿಗಳನ್ನು ತೋಡಿರುವುದರಿಂದ ನೀರು ಹರಿಯದೇ ಅಲ್ಲೇ ನಿಲ್ಲುತ್ತಿದ್ದು, ಕೆರೆಯಂಗಳಕ್ಕೆ ಬರುತ್ತಿಲ್ಲ, ಇದನ್ನು ಮೊದಲು ಸರಿಪಡಿಸಲು ಸೂಚಿ ಸಿದ ಅವರು, ನಮ್ಮ ಕಡೆ ನೀರು ಬರಲು ಒಂದು ತಿಂಗಳು ತಡವಾದರೂ ಪರವಾಗಿಲ್ಲ, ಈ ಕೆರೆ ಭರ್ತಿ ಯಾದ ನಂತರ ಕೋಡಿ ಹರಿಯಲಿ, ಈ ದೊಡ್ಡ ಕೆರೆ ತುಂಬಿದರೆ ಈ ಭಾಗದ ಕನಿಷ್ಠ 10 ಕಿ.ಮೀ. ವ್ಯಾಪ್ತಿ ಯಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜಾಲಿಗಿಡ ನಾಶ, ಒತ್ತುವರಿ ತೆರವು: ನೆರಳು, ಹಣ್ಣು ನೀಡಲ್ಲ, ಪ್ರಾಣಿಗಳಿಗೆ ಮೇವು ಆಗಲ್ಲ, ಇಂತಹ ದರಿದ್ರ ಜಾಲಿಯನ್ನು ಕೆರೆಗಳಿಗೆ ಯಾರು ತಂದು ಹಾಕಿದರೋ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯಾರ ಅನು ಮತಿಯೂ ಬೇಕಾಗಿಲ್ಲ. ಜೆಸಿಬಿ ಮೂಲಕ ಒಂದು ಕಡೆ ಎಳೆದು ತಂದು ಬೆಂಕಿ ಹಾಕಿ ಸುಟ್ಟುಬಿಡಿ ಎಂದು ಸೂಚಿಸಿದರು.

ಕೆರೆಯ ಗಡಿ ಗುರುತಿಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಮತ್ತೆ ಒತ್ತುವರಿಯಾಗದಂತೆ ಟ್ರಂಚ್ ಹೊಡೆಯಲು ಸೂಚಿಸಿದರು.ಕೆರೆ ಅಭಿವೃದ್ಧಿ ಕಾಮ ಗಾರಿಗೆ ಸಂಬಂಧಿಸಿದಂತೆ ಯಾರ ಅನುಮತಿಯೂ ಅಗತ್ಯವಿಲ್ಲ, ಮೆಘಾ ಕನ್ಸ್‌ಟ್ರಕ್ಷನ್‌ ಕಂಪನಿ ಎಂಡಿ ಸುಭಾಷ್‌ ಅವರಿಗೆ ಯಾವುದೇ ಸಲಹೆ, ಸಹಕಾರ ಬೇಕಿದ್ದರೆ ಕೆ.ಸಿ. ವ್ಯಾಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಸಹಕರಿಸುವರು ಎಂದರು.

ಕಾಮಗಾರಿಗೆ ಅನುಮತಿ ಅಗತ್ಯವಿಲ್ಲ, ನೀವೇ ಒಪ್ಪಿಗೆ ನೀಡಿ ಅನುದಾನ ನೀಡಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ರಾಜಕಾಲುವೆ ದುರಸ್ತಿ: ಸ್ವೀಕರ್‌ ರಮೇಶ್‌ಕುಮಾರ್‌ ಸೂಚನೆಯಂತೆ ಜೆಸಿಬಿಗಳ ಮೂಲಕ ರಾಜಕಾಲುವೆ ಸರಿಪಡಿಸುತ್ತಿದ್ದಂತೆ ಕೆ.ಸಿ. ವ್ಯಾಲಿ ನೀರು ಅಗ್ರಹಾರ ಕೆರೆಯ ಕಟ್ಟೆ, ಕೋಡಿಯ ಕಡೆಗೆ ಹರಿದಾಗ ಅಲ್ಲಿದ್ದವರ ಸಂತಸಕ್ಕೆ ಪಾರವಿಲ್ಲದಾಯಿತು. ಈ ಸಂದರ್ಭದಲ್ಲಿ ಮೆಘಾ ಕನ್‌ಸ್ಟ್ರಕ್ಷನ್‌ ಕಂಪನಿ ಎಂಡಿ ಸುಭಾಷ್‌, ಕೆ.ಸಿ. ವ್ಯಾಲಿ ಎಇಇ ಕೃಷ್ಣಪ್ಪ, ಸಣ್ಣ ನೀರಾವರಿ ಎಇಇ ಬೈರಾ ರೆಡ್ಡಿ, ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ಹನು ಮೇಶ್‌, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಾದ ಮಂಗಲ ಮಂಜುನಾಥ್‌, ಮುಖಂಡರಾದ ಭೂಪತಿ ಗೌಡ, ನಾಗಪ್ಪ, ಮಂಜು ನಾಥ್‌, ಸಾದೇಗೌಡ, ರಮೇಶ್‌, ಬೈರೇಗೌಡ, ರಾಜಪ್ಪ ಮತ್ತಿತರರಿದ್ದರು.

ತಡೆ ತೆರವಿಗೆ ಜೀವ ಬಿಗಿಹಿಡಿದು ಕಾಯ್ತಿದ್ದೆ:

ಬರ, ಅಂತರ್ಜಲ ಕೊರತೆ, ಕೊಳವೆ ಬಾವಿಗಳು ಬತ್ತಿಹೋಗಿದ್ದು, ನಮ್ಮ ರೈತರ ಬದುಕು ನರಕವಾಗಿತ್ತು. ಇಂತಹ ಸಂದರ್ಭದಲ್ಲಿ ಕೆ.ಸಿ. ವ್ಯಾಲಿಗೆ ಮಹಾನುಭಾವರು ತಡೆ ತಂದಿದ್ದರು ಎಂದು ಸ್ಪೀಕರ್‌ ರಮೇಶ್‌ಕುಮಾರ್‌ ನೊಂದು ನುಡಿದರು. ಸುಪ್ರೀಂಕೋರ್ಟ್‌ನಲ್ಲಿ ನಾನು ಸ್ವೀಕರ್‌ ಎಂದು ಯಾರೂ ಗುರುತಿಸುವುದಿಲ್ಲ, ಅಲ್ಲಿ ವಕೀಲರು, ಸಾಕ್ಷಿಗಳೇ ಅಂತಿಮ. ಇಂತಹ ಸಂದರ್ಭದಲ್ಲಿ ತಡೆಯಾಜ್ಞೆ ತೆರವಿನ ಆದೇಶ ಬರುವವರೆಗೂ ಜೀವ ಬಿಗಿಹಿಡಿದು ಕಾಯುತ್ತಿದ್ದೆ ಎಂದು ಆ ಸಂದರ್ಭವನ್ನು ಸ್ಮರಿಸಿದರು. ಈಗ 240 ಎಂಎಲ್ಡಿ ನೀರು ಹರಿಯುತ್ತಿದ್ದು, ಹೆಚ್ಚುವರಿಯಾಗಿ ನೀರು ಬಿಡಲು ಕ್ರಮವಹಿಸಬೇಕಾಗಿದೆ. ಕೆರೆಗಳು ಭರ್ತಿಯಾದರೆ ಅಂತರ್ಜಲ ವೃದ್ಧಿಯಾಗುತ್ತದೆ, ರೈತರು ಯಾವುದೇ ಕಾರಣಕ್ಕೂ ನೇರವಾಗಿ ಕೃಷಿಗೆ ನೀರು ಬಳಸಬಾರದು ಎಂದು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next