Advertisement

ಸುಗಮ ಸಂಚಾರಕ್ಕೆ ರಸ್ತೆ ದುರಸ್ತಿಗೊಳಿಸಿ

03:10 PM Aug 27, 2019 | Team Udayavani |

ಯಾದಗಿರಿ: ಕಾರ್ಮಿಕ ಇಲಾಖೆ ಶಿಫಾರಸು ಮಾಡಿದ 14 ಮಾರ್ಗಗಳಲ್ಲಿ ರಸ್ತೆಗಳು ಹದಗೆಟ್ಟಿರುವುದರಿಂದ, ಜಾಲಿಕಂಟಿ ಬೆಳೆದಿರುವುದರಿಂದ ಮತ್ತು ವಿದ್ಯುತ್‌ ತಂತಿಗಳು ಜೋತು ಬಿದ್ದಿರುವ ಕಾರಣ ಬಸ್‌ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು ವರದಿ ನೀಡಿದ್ದಾರೆ. ಈ ಮಾರ್ಗಗಳಲ್ಲಿ ಬಸ್‌ಗಳು ಸುಗಮ ಸಂಚಾರ ಮಾಡುವ ನಿಟ್ಟಿನಲ್ಲಿ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕಾರ್ಖಾನೆ ಮತ್ತು ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸುರಕ್ಷಿತವಲ್ಲದ ವಾಹನಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಖಾನೆ ಮಾಲೀಕರು ಹಾಗೂ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸಿ, ಅಗತ್ಯವಿರುವ ಕಡೆಗಳಲ್ಲಿ ಕಾರ್ಮಿಕರ ಸುರಕ್ಷಿತ ಪ್ರಯಾಣಕ್ಕಾಗಿ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಬಸ್‌ ವ್ಯವಸ್ಥೆ ಮಾಡಿಸುವಂತೆ ಕಾರ್ಮಿಕ ಇಲಾಖೆಗೆ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು 14 ಮಾರ್ಗಗಳಲ್ಲಿ ಕಾರ್ಮಿಕರ ಅನುಕೂಲಕ್ಕಾಗಿ ಬಸ್‌ ಸಂಚರಿಸಬೇಕು ಎಂದು ವರದಿ ನೀಡಿದ್ದಾರೆ. ಅದರನ್ವಯ ಸಾರಿಗೆ ಸಂಸ್ಥೆಯವರು ಈ ಮಾರ್ಗಗಳನ್ನು ವೀಕ್ಷಣೆ ಮಾಡಿ, ರಸ್ತೆ ಹದಗೆಟ್ಟಿರುವ ಕಾರಣ ಬಸ್‌ ಸಂಚರಿಸಲು ಯೋಗ್ಯವಲ್ಲ ಎಂದು ಮಾಹಿತಿ ನೀಡಿದ್ದಾರೆ. ಇವುಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂದು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಇಇ ಮಲ್ಲಿಕಾರ್ಜುನ ಎಚ್. ಅವರಿಗೆ ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಆಟೋರಿಕ್ಷಾ, ಕ್ಯಾಬ್‌ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಶಾಲಾ ಮಕ್ಕಳ ಸಾಗಣೆ ತಡೆಗಾಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಅಧಿಕಾರಿಗಳನ್ನಾಗಿ ನೇಮಕ ಮಾಡಿದ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಾರದೊಳಗೆ ತಾಲೂಕುವಾರು ತರಬೇತಿ ಕಾರ್ಯಾಗಾರ ಆಯೋಜಿಸಬೇಕು. ಪ್ರತಿಯೊಂದು ಶಾಲೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರಗೆ ಸೂಚಿಸಿದರು.

ಯಾದಗಿರಿ ನಗರದ ಡಾನ್‌ ಬಾಸ್ಕೊ ಶಾಲೆ ಮಕ್ಕಳು ರಾಷ್ಟ್ರೀಯ ಹೆದ್ದಾರಿ ಮೇಲೆ ಗುಂಪು ಗುಂಪಾಗಿ ನಿಲ್ಲುತ್ತಾರೆ. ಇದರಿಂದ ಅಪಘಾತ ಸಂಭವಿಸಬಹುದು. ಹಾಗಾಗಿ, ಶಾಲೆ ಆವರಣದಲ್ಲಿಯೇ ಆಟೋ ನಿಲುಗಡೆಗೆ ವ್ಯವಸ್ಥೆ ಮಾಡಿ, ಅಲ್ಲಿಂದಲೇ ಮಕ್ಕಳನ್ನು ವಾಹನಗಳಲ್ಲಿ ಕೂರಿಸಿಕೊಂಡು ಹೋಗುವಂತೆ ಆಡಳಿತ ಮಂಡಳಿಗೆ ಸೂಚಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ಇನ್ನಿತರೆ ಪ್ರಯಾಣಿಕರನ್ನು ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಸುರಕ್ಷಿತವಲ್ಲದ ರೀತಿಯಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವವರಿಗೆ ದಂಡ ವಿಧಿಸುವುದನ್ನು ಮುಂದುವರೆಸಬೇಕು. ಯಾದಗಿರಿ ನಗರದಲ್ಲಿ ಆಟೋ ನಿಲ್ದಾಣಗಳನ್ನು ಗುರುತಿಸಬೇಕು. ಗಾಂಧಿ ಚೌಕ್‌ನಲ್ಲಿ ಬಸ್‌ ನಿಲುಗಡೆಗೆ ಸ್ಥಳ ಗುರುತಿಸಬೇಕು. ಹಳೆ ಬಸ್‌ ನಿಲ್ದಾಣದ ಹತ್ತಿರದ ರಸ್ತೆ ಬದಿ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಸೂಚಿಸಿದರು.

Advertisement

ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ವಿವಿಧ ರೀತಿಯ ಸೂಚನಾ ಫಲಕಗಳು, ಅವಶ್ಯವಿರುವ ಕಡೆ ಸಿಗ್ನಲ್, ಝಿಬ್ರಾ ಕ್ರಾಸಿಂಗ್‌, ರಿಪ್ಲೆಕ್ಟರ್‌ಗಳನ್ನು ಕಟ್ಟುನಿಟ್ಟಾಗಿ ಅಳವಡಿಸಬೇಕು. ಯಾದಗಿರಿ ನಗರ ಸಮೀಪದ ಗುರಸುಣಗಿ ಬ್ರಿಡ್ಜ್ ಬೈಪಾಸ್‌ ರಸ್ತೆ ಮತ್ತು ಮುದ್ನಾಳ ರಸ್ತೆ ಎದುರಿನ ಬೈಪಾಸ್‌ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇವುಗಳನ್ನು ದುರಸ್ತಿಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ಚನ್ನಬಸಪ್ಪ ಮೇಕಾಲೆಗೆ ನಿರ್ದೇಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ.ರಜಪೂತ, ಡಿವೈಎಸ್‌ಪಿ ಯು. ಶರಣಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ಪೌರಾಯುಕ್ತ ರಮೇಶ ಸುಣಗಾರ, ಬಸವರಾಜ ಶಿವಪೂಜೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಎಇಇ ಸಿದ್ದಲಿಂಗಪ್ಪ ಐರೆಡ್ಡಿ, ಕಾರ್ಮಿಕ ಇಲಾಖೆಯ ಯಾದಗಿರಿ ವೃತ್ತ ನಿರೀಕ್ಷಕ ಶಿವಶಂಕರ ಬಿ.ತಳವಾರ, ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಿದವರಿಗೆ ಸಾವಿರ ರೂ. ದಂಡ ವಿಧಿಸಲಾಗುವುದು. ನಗರದಲ್ಲಿನ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆಯನ್ನು ತಪ್ಪಿಸಲು ಒಂದು ದಿನ ರಸ್ತೆಯ ಬಲಬದಿ ಮತ್ತೂಂದು ದಿನ ರಸ್ತೆಯ ಎಡಬದಿ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next