Advertisement

ಏಕಾಂಗಿಯಾಗಿ ರಸ್ತೆ ದುರಸ್ತಿ ಮಾಡಿದ ಹಿರಿ ಜೀವ!

10:22 PM Jul 17, 2019 | mahesh |

ಆಲಂಕಾರು: ತಾನಾಯಿತು ತನ್ನ ಪಾಡಾಯಿತು ಎಂದು ಕೂರುವ ಈ ಸಮಾಜದಲ್ಲಿ ಇಳಿ ವಯಸ್ಸಲ್ಲೂ ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಇರಾದೆಯಿಂದ ಇಲ್ಲೊಬ್ಬರು ಏಕಾಂಗಿಯಾಗಿ ರಸ್ತೆ ನಿರ್ಮಿಸಿ ಮಾದರಿಯಾಗಿದ್ದಾರೆ. ಕಡಬ ತಾಲೂಕು ಆಲಂಕಾರು ಗ್ರಾಮದ ಶರವೂರು ಉಜುರ್ಲಿ ನಿವಾಸಿ ಸುಬ್ರಹ್ಮಣ್ಯ ಉಪಾಧ್ಯಾಯ ಅವರ ಈ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಪ್ರತೀ ಬೇಸಗೆ ಹಾಗೂ ಮಳೆಗಾಲದಲ್ಲಿ ಇವರ ಮನೆಯನ್ನು ಸಂಪರ್ಕಿಸುವ ರಸ್ತೆಯ ಜತೆಗೆ ಗ್ರಾಮವನ್ನು ಸಂಪರ್ಕಿಸುವ ಪಾಂಜೋಡಿ ಕಕ್ವೆ ರಸ್ತೆಯನ್ನು ಯಾವುದೇ ಸಂಭಾವನೆ ಪಡೆಯದೆ ಏಕಾಂಗಿಯಾಗಿ ದುರಸ್ತಿ ಮಾಡುವುದು ಇವರ ಕಾಯಕ. ಬೇಸಗೆ ಅಥವಾ ಮಳೆಗಾಲವೇ ಇರಲಿ ಇವರ ಸೇವೆ ನಿರಂತರವಾಗಿ ನಡೆಯುತ್ತದೆ. ಪ್ರತೀ ದಿನ ಬೆಳಗ್ಗೆ ಕತ್ತಿ ಹಾರೆಯೊಂದಿಗೆ ರಸ್ತೆಯ ಉದ್ದಗಲಕ್ಕೂ ಸಂಚರಿಸಿ ರಸ್ತೆಯಲ್ಲಿ ಮಳೆ ನೀರಿನಿಂದಾಗಿ ಬಿದ್ದಿರುವ ಗುಂಡಿಗಳಿಗೆ ಮಣ್ಣು, ಕಲ್ಲು ತುಂಬಿಸಿ ರಸ್ತೆ ದುರಸ್ತಿಗೊಳಿಸಿ ಸಂಚಾರಕ್ಕೆ ಅಡಚಣೆ ಆಗದಂತೆ ಮಾಡುತ್ತಾರೆ.

ಪರಿಸರ ಪ್ರೇಮ
ರಸ್ತೆ ಬದಿಯಲ್ಲಿ ನೆಟ್ಟಿರುವ ನೆಡುತೋಪುಗಳ ಗಿಡಗಳಿಗೆ ಮಣ್ಣು ಹಾಕಿ ರಕ್ಷಣೆ ಮಾಡುವುದರ ಮೂಲಕ ಪರಿಸರ ಪ್ರೇಮವನ್ನೂ ತೋರ್ಪಡಿಸಿದ್ದಾರೆ. ಉಪಾಧ್ಯಾಯರು 27 ವರ್ಷಗಳಿಂದ ನಿರಂತರ ಎಲೆಮರೆಯ ಕಾಯಿಯಂತೆ ಈ ಸೇವೆಯನ್ನು ಮಾಡುತ್ತಿದ್ದಾರೆ. ಯಾವುದೇ ಸಂಘ ಸಂಸ್ಥೆಯಾಗಲೀ ಸ್ಥಳೀಯಾಡಳಿತವಾಗಲೀ ಅವರ ಸೇವೆಯನ್ನು ಗುರುತಿಸಿಲ್ಲ. ಅಂಥ ಅಪೇಕ್ಷೆಯೂ ಈ ಹಿರಿ ಜೀವಕ್ಕಿಲ್ಲ. ಸುಮಾರು ಮೂರು ಕಿ.ಮೀ. ದೂರದ ರಸ್ತೆಯುದ್ದಕ್ಕೂ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳಿ ಕಾಮಗಾರಿ ನಡೆಸುತ್ತಾರೆ.

ರಸ್ತೆಗಳು ದೇಹದ ನರಗಳಿದ್ದಂತೆ
ಊರನ್ನು ಸಂಪರ್ಕಿಸುವ ರಸ್ತೆಗಳು ಮಾನವನ ದೇಹದ ನರ ನಾಡಿಗಳಿಗೆ ಸಮಾನ. ಒಂದು ನರ ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ದೇಹದ ಆರೋಗ್ಯವೇ ಹದಗೆಡುತ್ತದೆ. ಗ್ರಾಮ ವನ್ನು ಸಂಪರ್ಕಿಸುವ ಒಂದು ರಸ್ತೆ ಸರಿಯಾಗಿ ಇಲ್ಲವಾದರೆ ಆ ಊರು ಎಲ್ಲ ಮೂಲ ಸೌಕರ್ಯಗಳಿಂದ ವಂಚಿತ ವಾಗುತ್ತದೆ. ಈ ಕಾರಣಕ್ಕಾಗಿ ನನ್ನಿಂದಾಗು ವಂತಹ ಅಳಿಲ ಸೇವೆಯನ್ನು ಗ್ರಾಮಕ್ಕೆ ನೀಡುತ್ತಿದ್ದೇನೆ ಎಂದು ಸುಬ್ರಹ್ಮಣ್ಯ ಉಪಾಧ್ಯಾಯ ಹೇಳುತ್ತಾರೆ.

ಮಾದರಿ ಸೇವೆ
ಶ್ರಮದಾನ ಎನ್ನುವುದು ಇಂದಿನ ಕಾಲಘಟ್ಟದಲ್ಲಿ ಮರೀಚಿಕೆಯಾಗಿದೆ. ಸುಬ್ರಹ್ಮಣ್ಯ ಉಪಾಧ್ಯಾಯರ ಸೇವೆ ಮಾದರಿಯಾಗಿದೆ. ರಸ್ತೆಯನ್ನೇ ಕಬಳಿಸುವ ಜನರ ನಡುವೆ ಇಂತಹ ವ್ಯಕ್ತಿ ಇರುವುದೇ ನಮ್ಮೆಲ್ಲರ ಭಾಗ್ಯ. ಇಂತಹ ವ್ಯಕ್ತಿಗಳು ಪ್ರತೀ ವಾರ್ಡಿನಲ್ಲೂ ಇದ್ದರೆ ಗಾಂಧೀಜಿ ಕಂಡ ರಾಮ ರಾಜ್ಯದ ಕನಸು ನನಸಾಗಬಹುದು. ಇಂತಹವರ ಸಾಧನೆಯನ್ನು ಮಾಡಿದ ಸಾಧಕರನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಸಮ್ಮಾನಿಸಲಾಗುವುದು.
– ಕೇಶವ ಗೌಡ ಆಲಡ್ಕ, ವಾರ್ಡ್‌ ಸದಸ್ಯರು.

Advertisement

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next