ತಿಪಟೂರು: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರ್‍ನಾಲ್ಕು ತಿಂಗಳಿನಿಂದಲೂ ನೀರಿನ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದ್ದು, ಈ ಬಗ್ಗೆ ನಗರಸಭೆಗೆ ತಿಳಿಸಿದ್ದರೂ ಅಧಿಕಾರಿಗಳು ಮಾತ್ರ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ರಾಷ್ಟ್ರೀಯ ಹೆದ್ದಾರಿ 206ರ ರೇಷ್ಮೆ ಇಲಾಖೆಯ ಮುಂಭಾಗದ ರಸ್ತೆಯ ಮೇಲೆ ಈ ಭೀಕರ ಬರದಲ್ಲಿಯೂ ಜೀವಜಲ ಹರಿದು ಚರಂಡಿ ಪಾಲಾಗುತ್ತಿದೆ. ಸುಮಾರು 3-4 ತಿಂಗಳಿನಿಂದಲೂ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಇದರ ಗೋಜಿಗೆ ಹೋಗದಿರುವುದು ಅಚರ ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ. ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ವಾಹನಗಳು ಅದರ ಮೇಲೆಯೇ ಸಂಚರಿಸುವುದರಿಂದ ರಸ್ತೆ ಹಾಳಾಗಿ ದೊಡ್ಡ ಗುಂಡಿ ಬಿದ್ದಿದೆ. ವಾಹನ ಸವಾರರು ವೇಗವಾಗಿ ಬಂದು ಗುಂಡಿಗೆ ಬೀಳುತ್ತಿದ್ದು, ಪ್ರಾಣಕ್ಕೆ ಸಂಚಾಕಾರ ಕಟ್ಟಿಟ್ಟಬುತ್ತಿಯಾಗಿದೆ. ಈ ನಿಟ್ಟಿನಲ್ಲಿ ನಗರಸಭೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.
ಇಡೀ ರಾಜ್ಯವೇ ಭೀಕರ ಬರಗಾಲ ಎದುರಿಸುತ್ತಿದ್ದು, ಹನಿಹನಿ ನೀರಿಗಾಗಿ ಪರದಾಡುತ್ತಿದ್ದರೂ ತಿಪಟೂರು ನಗರಸಭೆ ವ್ಯಾಪ್ತಿಯಲ್ಲಿ ಕೆಲ ಬಡಾವಣೆಗಳಲ್ಲಿ ಪೈಪ್‌ಲೈನ್ ಒಡೆದು ಅಮೂಲ್ಯ ನೀರು ದಿನನಿತ್ಯ ಪೋಲಾಗುತ್ತಿದೆ. ನೀರು ಸರಬರಾಜು ಜವಾಬ್ದಾರಿ ಹೊತ್ತಿರುವ ನಗರಸಭೆ ಮಾತ್ರ ಜನತೆಯ ಜೀವ ಜಲವಾದ ನೀರು ಮತ್ತು ನಾಗರಿಕರ ಜೊತೆ ಚಲ್ಲಾಟವಾಡುತ್ತಿರುವುದು ನಾಚಿಕೆ ತರುವಂತಿದೆ.
ಈಗಲಾದರೂ ನಗರಸಭೆ ಇತ್ತ ಗಮನ ಹರಿಸಿ ಪೋಲಾಗುತ್ತಿರುವ ನೀರು ತಡೆಗಟ್ಟಿ, ನಗರಕ್ಕೆ ಸಮರ್ಪಕ ಕುಡಿವ ನೀರನ್ನು ಒದಗಿಸುಬೇಕಿದೆ.
● ಸ್ಥಳೀಯರು, ತಿಪಟೂರು