ಎಚ್.ಡಿ.ಕೋಟೆ: ತಾಲೂಕಿನ ಕಂಡೇಗೌಡನಪುರ ಗ್ರಾಮದಲ್ಲಿರುವ ಕೆರೆ ಏರಿ ಶಿಥಿಲಗೊಂಡು ಕಳೆದ 2 ದಿನಗಳ ಹಿಂದಿನಿಂದ ಬೀಳುತ್ತಿರುವ ಮಳೆಗೆ ಕೆರೆ ಏರಿ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅಷ್ಟೇ ಅಲ್ಲದೆ ಕೆರೆ ಏರಿ ಕುಸಿದರೆ ರಸ್ತೆ ಮಾರ್ಗ ಸಂಪರ್ಕ ಕಳೆದುಕೊಳ್ಳಲಿದ್ದು ದುರಸ್ತಿಗಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಒಂದು ವರ್ಷದ ಹಿಂದಷ್ಟೇ ಜಿಪಂ 5 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ್ದ ಕೆರೆ ಇಷ್ಟು ಬೇಗ ಶಿಥಿಲಗೊಂಡಿದೆ. ಕೆರೆ ಏರಿ ಒಡೆದು ಕೆರೆಯ ನೀರು ತಗ್ಗು ಪ್ರದೇಶದತ್ತ ಹರಿದರೆ ಜನಜಾನು ವಾರುಗಳ ಜೀವಕ್ಕೆ ಸಂಚಕಾರ ಒದಗಲಿದೆ. ತಾಲೂಕಿನ ಹಂಪಾಪುರ ಹೋಬಳಿಗೆ ಸೇರಿದ ಈ ಕೆರೆ 16.16 ಎಕರೆ ವಿಸ್ತೀರ್ಣ ಹೊಂದಿರುವ ಕೆರೆ ಜಾಗದಲ್ಲಿ 1ಎಕರೆ ಸ್ಮಶಾನಕ್ಕೆ ಮಂಜೂರು ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳಿದರು.
ಸಂಚಾರ ಸ್ಥಗಿತವಾದರೆ ತೊಡಕು: ಕಂಡೇಗೌಡನ ಪುರ ಮತ್ತು ಕಾಡಸೂರು ಗ್ರಾಮಗಳಿಗೆ ಕಬ್ಬಿಗೆರೆ ಕೆರೆ ಜೀವನಾಡಿಯಾಗಿದ್ದು, ಅಂತರ್ಜಲ ವೃದ್ಧಿಗೆ ಕಾರಣವಾಗಿದೆ. ಕಂಡೇಗೌಡನ ಪುರ ಸೇರಲು ಈ ಕೆರೆ ಏರಿ ಮಾರ್ಗದ ರಸ್ತೆಯಲ್ಲಿಯೇ ಪ್ರತಿದಿನ ನೂರಾರು ಮಂದಿ ಸಂಚರಿಸುವುದೇ ಅಲ್ಲದೆ ಈ ಮಾರ್ಗವಾಗಿಯೇ ಸರ್ಕಾರಿ ಬಸ್ ಸೇರಿದಂತೆ ಖಾಸಗಿ ವಾಹನಗಳು ಸಂಚರಿಸಬೇಕಿದೆ. ಕೆರೆ ಏರಿ ಶಿಥಿಲವಾಗಿರುವ ಕಾರಣ ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ. ಆಕಸ್ಮಾತ್ ಸಂಚಾರ ಸ್ಥಗಿತಗೊಂಡರೆ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವಯೋವೃದ್ಧರು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ.
ಅನಾಹುತಕ್ಕೆ ಮುನ್ನ ಕ್ರಮವಹಿಸಿ: ಕೆರೆ ಏರಿ ಕಳಪೆ ಕಾಮಗಾರಿ ಕಳಪೆ ಕಾಮಗಾರಿ ಅಥವಾ ಮಳೆ ನೀರಿನ ಅನಾಹುತ ಕಾರಣವೋ ಎಂಬುದನ್ನು ತಜ್ಞರು ಸ್ಥಳ ಪರಿಶೀಲಿಸಬೇಕಿದೆ. ಅಧಿಕಾರಿಗಳು ಬೇಜಬ್ದಾರಿಯಿಂದ ಕೆರೆ ಏರಿ ಒಡೆದು ಅನಾಹುತ ಸಂಭವಿಸಿದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನೇ ಕಾರಣ ಮಾಡ ಬೇಕಾಗುತ್ತದೆ. ಹೀಗಾಗಿ ತೊಂದರೆ ಎದುರಾಗುವ ಮುನ್ನ ಕ್ರಮ ಜರುಗಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.