ಗಂಗಾವತಿ: ನಗರದಲ್ಲಿ 2011ರಲ್ಲಿ ಜರುಗಿದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ರಾಯಚೂರು ರಸ್ತೆ ವಿದ್ಯಾನಗರದಲ್ಲಿ ಸುಮಾರು 5 ಲಕ್ಷ ರೂ.ಗಳಲ್ಲಿ ನಿರ್ಮಿಸಿದ್ದ ಸ್ವಾಗತ ಕೋರುವ ಕಮಾನು ಬಿದ್ದು ಎರಡು ವರ್ಷ ಕಳೆದರೂ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು,ನಗರಸಭೆ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿರುವುದು ಕಂಡು ಬರುತ್ತಿದೆ.
2011ರ ಡಿ. 9, 10 ಮತ್ತು 11ರಂದು ನಗರದಲ್ಲಿ ವಿಜೃಂಭಣೆಯಿಂದ ಜರುಗಿದ 78 ನೇ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಸ್ವಾಗತ ಕೋರಲು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕನಕಗಿರಿ ರಸ್ತೆ ಶರಣಬಸವೇಶ್ವರ ನಗರ ಮತ್ತು ರಾಯಚೂರು ರಸ್ತೆ ವಿದ್ಯಾನಗರದಲ್ಲಿ ಬೃಹತ್ ಗಾತ್ರದ “ಭತ್ತದ ನಾಡು ಗಂಗಾವತಿಗೆ ಸ್ವಾಗತ’ ಎಂದು ಬರೆದ ಕಮಾನು ಲೋಕೋಪಯೋಗಿ ಇಲಾಖೆಯ ವತಿಯಿಂದ ನಿರ್ಮಿಸಲಾಗಿತ್ತು.
ಶರಣಬಸವೇಶ್ವರ ನಗರದಲ್ಲಿರುವ ಕಮಾನಿಗೆ ಯಾವುದೇ ಹಾನಿಯಾಗಿಲ್ಲ. ವಿದ್ಯಾನಗರದಲ್ಲಿರುವ ಕಮಾನಿಗೆ ಎರಡು ವರ್ಷಗಳ ಹಿಂದೆ ಬೃಹತ್ ಗಾತ್ರದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಮಾನು ಸಂಪೂರ್ಣ ಜಖಂಗೊಂಡು ಮುರಿದು ಬಿದಿದ್ದೆ. ಯಾವ ಪ್ರಾಣ ಹಾನಿಯೂ ಆಗಿಲ್ಲ. ಸ್ಥಳೀಯರು ಕಮಾನ್ ದುರಸ್ತಿ ಮಾಡಿಸುವಂತೆ ಹಲವು ಭಾರಿ ಶಾಸಕರು, ಸಂಸದರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ದೇಶದಲ್ಲಿ ಗಂಗಾವತಿ ಭತ್ತದ ನಾಡು ಹಾಗೂ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ ಸೇರಿ ಹತ್ತು ಹಲವು ಪ್ರವಾಸಿ ತಾಣಗಳ ಮೂಲಕ ಖ್ಯಾತಿ ಪಡೆದಿದ್ದು, ಪ್ರತಿವಾರ ಹೈದ್ರಾಬಾದ್ ಹಾಗೂ ಇತರೆ ನಗರಗಳಿಂದ ರಾಯಚೂರು ಮಾರ್ಗದ ಮೂಲಕ ಸಾವಿರಾರು ಜನ ಗಂಗಾವತಿಗೆ ಆಗಮಿಸುವುದರಿಂದ ಪ್ರವಾಸಿಗರನ್ನು ಸ್ವಾಗತ ಕೋರಲು ಕಮಾನು ಅಗತ್ಯವಿದ್ದು, 78ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ವಿಜೃಂಭಣೆಯಿಂದ ನೆರವೇರಿಸಿದ ಕೀರ್ತಿ ಸಮಸ್ತ ಗಂಗಾವತಿ ಹಾಗೂ ಸುತ್ತಲಿನ ಊರುಗಳ ಜನರಿಗೆ ಸಲ್ಲುತ್ತದೆ. ಇಂತಹ ಸವಿ ನೆನಪು ಇರುವ ಸಮ್ಮೇಳನದ ಸಂದರ್ಭದಲ್ಲಿ ನಿರ್ಮಿಸಿದ್ದ ಸ್ವಾಗತ ಕಮಾನು ಇರುವುದು ಎಲ್ಲರಿಗೂ ಪ್ರತಿಷ್ಠೆಯ ಸಂಗತಿಯಾಗದ್ದು, ಕೂಡಲೇ ಲೋಕೋಪಯೋಗಿ ಇಲಾಖೆ ಅ ಧಿಕಾರಿಗಳು ಹಾಗೂ ನಗರಸಭೆ ಆಡಳಿತ ಮಂಡಳಿಯವರು ಅಗತ್ಯ ಹಣ ನೀಡುವ ಮೂಲಕ ದುರಸ್ತಿ ಮಾಡಿಸಬೇಕಿದೆ.