ರಾಣಿಬೆನ್ನೂರು: ಬೇಸಿಗೆ ಕಾಲ ಕಳೆದು ಮಳೆಗಾಲ ಆರಂಭವಾಗಿದೆ. ಆಕಸ್ಮಾತಾಗಿ ಭಾರಿ ಮಳೆ ಸುರಿದಲ್ಲಿ ಕಾಲುವೆಗಳು ತುಂಬಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ತಾಲೂಕಿನ ತುಂಗಭದ್ರ ನದಿ ತೀರದ ಮುಷ್ಟೂರು, ಹೊಳೆಆನ್ವೇರಿ, ಮಾಕನೂರ, ಐರಣಿ, ಕುದರಿಹಾಳ, ಉದಗಟ್ಟಿ, ನದಿಹರಳಳ್ಳಿ ಸೇರಿದಂತೆ ಅನೇಕ ಗ್ರಾಮಗಳು ಪ್ರವಾಹದಿಂದ ಜಲಾವೃತವಾಗುವುದು ಸಾಮಾನ್ಯವಾಗಿದೆ. ಈ ಕುರಿತು ಸಂಬಂಧಿಸಿದ ಆಡಳಿತ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಗಿಡಗಂಟೆಗಳು ಬೆಳೆದು ನೀರು ಹರಿಯಲು ಸರಿಯಾದ ಮಾರ್ಗ ಇಲ್ಲ. ಹಾಗಾಗಿ ಕಾಲುವೆ ತುಂಬಿ ರೈತರ ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟಾಗುತ್ತಿದೆ. ಆದ ಕಾರಣ ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಮುಂಜಾಗೃತವಾಗಿ ಕಾಲುವೆಗಳನ್ನು ಮರು ದುರಸ್ತಿ ಮಾಡಿಸಿದಲ್ಲಿ ರೈತರಿಗೆ ತೊಂದರೆಯಾಗುವುದಿಲ್ಲ. ಹಲವಾರು ವರ್ಷಗಳಲ್ಲಿ ಈ ತೊಂದರೆ ಎದುರಿಸಿರುವ ಅಧಿಕಾರಿಗಳು ಬೆಂಕಿ ಬಿದ್ದಾಗ ಬಾವಿ ತೋಡಲು ಮುಂದಾಗುವಂತೆ ಸಮಸ್ಯೆ ಎದುರಾದಾಗ ಪರದಾಡುತ್ತಾರೆ. ಅದಕ್ಕಾಗಿ ಮುಂಜಾಗೃತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಕಳೆದ ಸಾಲಿನಲ್ಲಿ ತಾಲೂಕಿನ ಅನೇಕ ಗ್ರಾಮದಲ್ಲಿ ಕಾಲುವೆ ತುಂಬಿ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಗೂ ಹೊಲದ ಸಮತಟ್ಟು ಹಾಳಾದ ಕುರಿತು ಪ್ರತಿಭಟನೆಗಳು ನಡೆದಾಗ ಧಾವಿಸಿದ ಅಧಿಕಾರಿಗಳು ದಿನಗಟ್ಟಲೆ ಸಮಾಧಾನ ಮಾಡಲು ಹರಸಾಹಸಪಟ್ಟಿದ್ದರು ಎಂಬುದು ಇಲ್ಲಿ ಗಮನಾರ್ಹ.
ತಾಲೂಕಿನ ಕುಪ್ಪೆಲೂರು ಬಳಿ ತುಂಗಾ ಕಾಲುವೆಯಲ್ಲಿ ಜಾಲಿ ಗಿಡಗಳು ಬೆಳೆದಿವೆ. ಮಾತ್ರವಲ್ಲದೇ ಕಸ ತುಂಬಿದೆ. ಇದುವರೆಗೆ ಸ್ವಚ್ಛ ಮಾಡಿಲ್ಲ. ಅದರಲ್ಲಿ ನೀರು ಬಿಟ್ಟರೂ ರೈತರ ಜಮೀನಿಗೆ ಬರಲು ಸಾಧ್ಯವಿಲ್ಲ. ಇದುವರೆಗೆ ಯಾವುದೇ ಅಧಿಕಾರಿಗಳು ಈ ಕಡೆ ಗಮನಹರಿಸಿಲ್ಲ. ಮಳೆಗಾಲ ಆರಂಭವಾದಲ್ಲಿ ಕಾಲುವೆ ತುಂಬಿ ಜಮೀನಿಗೆ ಹರಿದು ಹೊಲ ಹಾಳಾಗುತ್ತದೆ. ತಕ್ಷಣ ಗಿಡಗಂಟೆಗಳನ್ನು ತೆಗೆದು ಕಾಲುವೆ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಉದಾಹರಣೆ ಸಹ ಇದೆ.
ಅಲ್ಲದೆ ಕಳೆದ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಾಲೂಕಿನ ಇಟಗಿ ಹಾಗೂ ಮಣಕೂರು ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಉಪ ವಿಭಾಗ 2ರ ವ್ಯಾಪ್ತಿಯ ಕಾಲುವೆ ಸಂಪೂರ್ಣ ಕುಸಿದು ರೈತರ ಹೊಲದಲ್ಲಿನ ಬೆಳೆಗಳು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಎಲ್ಲೆಂದರಲ್ಲಿ ಕಿತ್ತು ಅನೇಕ ರೈತರ ಜಮೀನುಗಳಲ್ಲಿನ ಬೆಳೆಗಳು ಹಾನಿಗೀಡಾಗಿವೆ. ನೀರಿನ ರಭಸಕ್ಕೆ ಜಮೀನುಗಳಲ್ಲಿ ಕೊರಕಲು ಬಿದ್ದಿವೆ. ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬೇಸಿಗೆಯಲ್ಲಿ ಮಳೆ ಕೈಕೊಟ್ಟಾಗ ಯುಟಿಪಿಯಿಂದ ಜಮೀನುಗಳಿಗೆ ಕಾಲುವೆ ನೀರು ಬಿಟ್ಟಿದ್ದರಿಂದ ರೈತರಿಗೆ ವರದಾನವಾಗಿತ್ತು. ಆದರೆ ಕಳೆದ ಸಾಲಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಾಲುವೆ ಒಡೆದ ಪರಿಣಾಮ ಬೆಳೆಗಳು ಹಾಳಾಗಿ ರೈತರಿಗೆ ಶಾಪವಾಗಿ ಪರಿಣಮಿಸಿತ್ತು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದರಿಂದ ಕಾಲುವೆ ಎಲ್ಲ ಕಡೆ ಬಿರುಕು ಬಿಟ್ಟು ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ತಾಲೂಕಿನ ಅನೇಕ ಕಡೆಗಳಲ್ಲಿ ನೀರಿನ ರಭಸಕ್ಕೆ ಕಾಲುವೆ ಕಿತ್ತು ಹೋಗಿದ್ದು, ರೈತರ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಪೀಕುಗಳು ಹಾಳಾಗಿದ್ದವು.
ತುಂಗಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಮತ್ತು ಇಂಜಿನಿಯರ್ ಇಟಗಿ ಮತ್ತು ಮಣಕೂರು ಬಳಿ ಕಾಲುವೆ ಕುಸಿದ್ದರಿಂದ ಬೆಳೆಗಳು ಹಾಳಾಗಿರುವುದನ್ನು ಪರಿಶೀಲಿಸಬೇಕು. ಹಾನಿ ಅನುಭವಿಸಿದ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಎಂದು ರೈತ ನಾಗರಾಜಪ್ಪ ಜಕ್ಕರಡ್ಡಿ ಒತ್ತಾಯಿಸಿದ್ದರು. ಈ ಸಾರಿ ಹಿಂದಿನ ಪರಿಸ್ಥಿತಿ ನಿರ್ಮಾಣವಾಗದಂತೆ ಅಧಿಕಾರಿಗಳು ಎಚ್ಚರ ವಹಿಸುವುದು ಸೂಕ್ತ ಎಂದು ರೈತರು ಆಗ್ರಹಿಸಿದ್ದಾರೆ.
•ಮಂಜುನಾಥ ಎಚ್. ಕುಂಬಳೂರ