ಪಿವಿಎಸ್ ಜಂಕ್ಷನ್ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಈ ಸಿಗ್ನಲ್ ಇರುವ ಸ್ಥಳ ಏರು-ತಗ್ಗಿನಿಂದ ಕೂಡಿದ್ದು. ಹಾಗಾಗಿ ಪಿವಿಎಸ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ಹೋಗುವ ವಾಹನಗಳ ವೇಗವೂ ಅಧಿಕ. ಇತರೆ ಸಿಗ್ನಲ್‌ಗಳಿಗಿಂತಲೂ ಇಲ್ಲಿ ವಾಹನಗಳು ಅತ್ಯಂತ ವೇಗವಾಗಿ ಸಿಗ್ನಲ್ ದಾಟುತ್ತವೆ. ಮೇಲ್ಭಾಗದಿಂದ ಬರುವ ವಾಹನಗಳು ಇಳಿಜಾರಾದ ಈ ರಸ್ತೆಯಲ್ಲಿ ಸಹಜವಾಗಿಯೇ ಅತೀ ವೇಗದಲ್ಲಿ ಸಾಗುತ್ತವೆ. ಇದು ರಸ್ತೆ ದಾಟುವವರಿಗೆ ಭಾರೀ ಸಮಸ್ಯೆಯನ್ನು ತಂದೊಡ್ಡುತ್ತದೆ. ಈ ಸಿಗ್ನಲ್‌ನ ಯಾವ ಭಾಗದಲ್ಲಿಯೂ ಸುರಕ್ಷಿತವಾಗಿ ರಸ್ತೆ ದಾಟುವುದು ಅಸಾಧ್ಯ ಎಂಬಂತಹ ಸ್ಥಿತಿ ಇದೆ. ರಸ್ತೆ ದಾಟುವವರಿಗೆ ಸಂಚಾರಿ ಪೊಲೀಸರ ನೆರವು ಕೂಡ ಸಿಗುತ್ತಿಲ್ಲ. ಇದರ ಜತೆಗೆ ಇಲ್ಲಿ ಪಾದಚಾರಿಗಳು ರಸ್ತೆ ದಾಟಲು/ ರಸ್ತೆ ದಾಟದಿರಲು ಸೂಚನೆ ನೀಡುವ ದೀಪವೂ ಇಲ್ಲ. ರಸ್ತೆ ದಾಟಬಹುದೇ ಅಥವಾ ದಾಟಬಾರದೇ ಎಂಬ ಗೊಂದಲ, ಆತಂಕದಲ್ಲಿಯೇ ಪಾದಚಾರಿಗಳು ರಸ್ತೆ ದಾಟುತ್ತಿದ್ದಾರೆ. ವಾಹನಗಳಿಗೆ ಸೂಚನೆ ನೀಡುವಂತೆ ಪಾದಚಾರಿಗಳಿಗೂ ಸೂಚನೆ ನೀಡುವ ಸಿಗ್ನಲ್ ವ್ಯವಸ್ಥೆಯನ್ನು ಅಳವಡಿಸಿ. ಈಗ ಕೆಟ್ಟು ಹೋಗಿರುವ ಸೂಚನಾ ಫಲಕವನ್ನು ಸರಿಪಡಿಸಬೇಕು. ಅಗತ್ಯ ಇರುವಲ್ಲಿ ಝೀಬ್ರಾ ಕ್ರಾಸ್‌ಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕು.