ಬೆಂಗಳೂರು: ರೇಣಕಾಸ್ವಾಮಿ ಕೊಲೆ(Renukaswamy Case) ಪ್ರಕರಣದ ದೋಷಾರೋಪ ಪಟ್ಟಿಯನ್ನು (Charge sheet) ತನಿಖಾಧಿಕಾರಿಗಳು ಬುಧವಾರ (ಸೆ.4ರಂದು) ಕೋರ್ಟ್‌ಗೆ ಸಲ್ಲಿಸಿದ್ದಾರೆ.
ತನಿಖಾಧಿಕಾರಿ ಎಸಿಪಿ ಚಂದನ್(ACP Chandan) ಅವರ ನೇತೃತ್ವದಲ್ಲಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಲಾಗಿದೆ. ಸುಮಾರು 3,991 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವುದಾಗಿ ತಿಳಿದುಬಂದಿದೆ.
ಪ್ರಕರಣದಲ್ಲಿ ದರ್ಶನ್(Darshan) ಎ2 ಆಗಿದ್ದು, ಪವಿತ್ರಾ ಗೌಡ(Pavithra Gowda) ಎ1 ಆಗಿದ್ದಾರೆ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಮೊದಲು ದರ್ಶನ್ ಅವರನ್ನು ಎ1 ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಫ್ ಎಲ್‌ನ ಕೆಲವು ವರದಿಗಳು ಬರಲು ಬಾಕಿಯಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ ಎನ್ನಲಾಗಿದೆ.
ಹಲವು ಸಾಕ್ಷ್ಯಗಳ ಉಲ್ಲೇಖ: ಕೋರ್ಟ್‌ಗೆ ಸಲ್ಲಿಕೆ ಮಾಡಿರುವ ದೋಷಾರೋಪಪಟ್ಟಿಯಲ್ಲಿ ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖ ಮಾಡಲಾಗಿದೆ. 3 ಪ್ರತ್ಯಕ್ಷ ಸಾಕ್ಷಿಗಳಿದ್ದು, ಎಫ್ಎಸ್ಎಲ್ ಮತ್ತು ಸಿಎಫ್ಎಸ್ಎಲ್ನಿಂದ 8 ವರದಿಗಳಿವೆ. 27 ಜನರ 164ರ ಅಡಿಯಲ್ಲಿ ಹೇಳಿಕೆ, 161 ಅಡಿಯಲ್ಲಿ 70 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 59 ಜನ ಸಮಕ್ಷಮದಲ್ಲಿ ಮಹಜರು ಮಾಡಲಾಗಿದೆ. 8 ವೈದ್ಯರು, ತಹಶೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಸಾಕ್ಷಿ ಕೂಡ ಉಲ್ಲೇಖ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕಮಿಷನರ್ ಹೇಳಿದ್ದೇನು? : ಪ್ರಕರಣ ಸಂಬಂಧ ಕಮಿಷನರ್ ದಯಾನಂದ್ ಮಾತನಾಡಿ, ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಸಂಪೂರ್ಣವಾಗಿ ಮುಗಿದಿದೆ. ಇಂದು ಅಂತಿಮ ವರದಿ ಸಲ್ಲಿಕೆ ಮಾಡಿದ್ದೇವೆ. ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಸಿಎಫ್ ಎಲ್ ನಿಂದ ಎಲ್ಲಾ ವರದಿಗಳು ಬಂದಿದ್ದು, ಎಸ್ ಎಫ್ ಎಲ್ ನಿಂದ ಕೆಲ ವರದಿಗಳು ಬರಲು ಬಾಕಿಯಿದೆ. 7 ಸಂಪುಟಗಳ,10 ಕಡತಗಳನ್ನು ಒಳಗೊಂಡ 3991 ಪುಟಗಳ ಬೃಹತ್ ಚಾರ್ಜ್ ಶೀಟ್ ಇದು. ಇದರಲ್ಲಿ ಪ್ರತ್ಯಕ್ಷ ಸಾಕ್ಷಿ 3ಗಳಿದ್ದು, 27 ಸಾಕ್ಷಿ ಜನರ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ
. 59 ಜನರ ಪಂಚನಾಮೆ ನಡೆಸಲಾಗಿದೆ. ತಹಶೀಲ್ದಾರು, ಇಂಜಿನಿಯರ್, ವೈದ್ಯರು ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳ ಹೇಳಿಕೆ ಸೇರಿದಂತೆ 231 ಸಾಕ್ಷಿಗಳಿವೆ. ಮುಂದಿನ ತನಿಖೆಯನ್ನು 174ರ ಅಡಿಯಲ್ಲಿ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಆರ್ಪಿಸಿ 173(8) ಅಡಿಯಲ್ಲಿ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶೀಘ್ರದಲ್ಲಿ ಪ್ರಕರಣವನ್ನು ಸೆಷೆನ್ಸ್ ಕೋರ್ಟ್‌ಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ: ನಟ ದರ್ಶನ್ ಅವರಿಗೆ ಆತ್ಮೀಯವಾಗಿರುವ ನಟಿ ಪವಿತ್ರ ಗೌಡ ಅವರ ಫೋಟೋಗಳಿಗೆ ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಆಶ್ಲೀಲವಾಗಿ ಕಮೆಂಟ್ ಮಾಡುತ್ತಿದ್ದ. ಇದಲ್ಲದೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದ.
ಈ ಕಾರಣದಿಂದ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಜೂ. 8ರಂದು ರಾತ್ರಿ ವಿನಯ್ ಎನ್ನುವವರ ಶೆಡ್ ಗೆ ಕರೆತಂದು ಬಲವಾದ ಆಯುಧದಿಂದ ರೇಣುಕಾ ಅವರಿಗೆ ಹೊಡೆದು ಕೊಲೆಗೈದು, ಮೃತದೇಹನ್ನು ಮೋರಿಗೆ ಎಸೆಯಲಾಗಿತ್ತು. ಜೂ. 9ರಂದು ಮೋರಿಯಲ್ಲಿ ಬೀದಿ ನಾಯಿಗಳು ಮೃತದೇಹವನ್ನು ಎಳೆಯುತ್ತಿದ್ದನ್ನು ನೋಡಿ, ಪಕ್ಕದಲ್ಲಿದ್ದ ಅಪಾರ್ಟ್ ಮೆಂಟ್ ಭದ್ರತಾ ಸಿಬ್ಬಂದಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ದೇಹದ ಮೇಲಿನ ಗಾಯಗಳನ್ನು ಗುರುತಿಸಿ ತನಿಖೆಯನ್ನು ಆರಂಭಿಸಲಾಗಿತ್ತು. ಮೊದಲು ವಶಕ್ಕೆ ಪಡೆದ ನಾಲ್ವರು ಆರೋಪಿಗಳು ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆಯಲ್ಲಿ ಹೇಳಿದ್ದರು.
ಈ ಪ್ರಕರಣ ಸಂಬಂಧ ತನಿಖೆ ಪ್ರಕ್ರಿಯೆ ಮುಂದುವರೆದಂತೆ ಒಟ್ಟು 17 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.