Advertisement

Renukaswamy Case: ಶರಣಾಗಲು ಆಪ್ತರಿಗೆ ತಿಳಿಸಿದ್ದ ದರ್ಶನ್‌

11:54 AM Jun 21, 2024 | Team Udayavani |

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೊದಲಿಗೆ ಠಾಣೆಗೆ ಹೋಗಿ ಕೆಲವರನ್ನು ಶರಣಾಗಿಸಲು ಮೈಸೂರಿನ ರ್ಯಾಡಿಸನ್‌ ಹೋಟೆಲ್‌ನಲ್ಲೇ ಸಂಚು ರೂಪಿ ಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಜೂನ್‌ 9ರಂದು ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಸ್ವಾಮಿ ಮೃತ ದೇಹ ಪತ್ತೆಯಾಗುತ್ತಿದ್ದಂತೆ ಗಾಬರಿಗೊಂಡು ದರ್ಶನ್‌, ವಿನಯ್‌ ಹಾಗೂ ಇತರರು, ಪ್ರಕರಣದಲ್ಲೇ ಯಾರನ್ನಾ ದರೂ ಶರಣಾಗುವಂತೆ ಸೂಚಿಸಲು ಯೋಚನೆ ರೂಪಿಸಿದ್ದರು. ಆಗ ದರ್ಶನ್‌, ಮೈಸೂರಿನ ರಾಡಿಸನ್‌ ಹೋಟೆಲ್‌ನಲ್ಲಿ ವಾಸವಾಗಿದ್ದ. ಅಲ್ಲಿಂದಲೇ ದರ್ಶನ್‌, ತನ್ನ ಗೆಳತಿ ಆಪ್ತ ಪವನ್‌, ನಂದೀಶ್‌, ವಿನಯ್‌, ದೀಪಕ್‌ ಮತ್ತು ಪ್ರದೂಶ್‌ ಜತೆ ಚರ್ಚಿಸಿ, ರಾಘ ವೇಂದ್ರ, ನಂದೀಶ್‌, ದೀಪಕ್‌, ಕಾರ್ತಿಕ್‌, ಕೇಶವ ಮೂರ್ತಿ ಹಾಗೂ ನಿಖೀಲ್‌ ನಾಯಕ್‌ ಅವರನ್ನು ಪೊಲೀಸ್‌ ಠಾಣೆಗೆ ಹೋಗಿ ಶರಣಾಗಲು ಸೂಚಿಸಿದ್ದ. ಕೆಲ ಹೊತ್ತಿನ ಬಳಿಕ ರಾಘವೇಂದ್ರ, ಕಾರ್ತಿಕ್‌, ಕೇಶವಮೂರ್ತಿ ಮತ್ತು ನಿಖೀಲ್‌ ನಾಯಕ್‌ಗೆ ಪೊಲೀಸ್‌ ಠಾಣೆಗೆ ಹೋಗಿ ಕೊಲೆ ಮಾಡಿದ್ದಾಗಿ ಶರಣಾಗುವಂತೆ ಸೂಚಿಸಿದ್ದ ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಚಾಲಕ ರವಿಗೆ ಒತ್ತಾಯಿಸಿದ್ದ ಆರೋಪಿಗಳು: ಇನ್ನು ರೇಣುಕಸ್ವಾಮಿಯನ್ನು ಚಿತ್ರದುರ್ಗದಿಂದ ರಾಘ ವೇಂದ್ರನ ಸೂಚನೆ ಮೇರೆಗೆ ಕರೆತಂದಿದ್ದ ಕಾರು ಚಾಲಕ ರವಿಗೆ ಕೊಲೆ ಕೃತ್ಯ ಒಪ್ಪಿಕೊಂಡು, ಪೊಲೀಸ್‌ ಠಾಣೆಗೆ ಶರಣಾಗುವಂತೆ ಆರೋಪಿಗಳ ಪೈಕಿ ವಿನಯ್‌, ಪ್ರದೂಶ್‌ ಹಾಗೂ ಇತರರು ಕೇಳಿಕೊಂಡಿದ್ದರು. ಆದರೆ, ರವಿ ಅದಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿ ನೇರ ವಾಗಿ ಚಿತ್ರದುರ್ಗಕ್ಕೆ ತೆರಳಿದ್ದ. ಬಳಿಕ ತನ್ನ ಪರಿಚಯಸ್ಥರ ಬಳಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಮೋಹನ್‌ರಾಜ್‌ ಎಂಬಾತನಿಂದ 40 ಲಕ್ಷ ರೂ. ಪಡೆದಿದ್ದ ದರ್ಶನ್‌

ತನ್ನ ವಿರುದ್ಧ ಎದುರಾಗುವ ವ್ಯತಿರಿಕ್ತ ಕಾನೂನು ಕ್ರಮಗಳಿಂದ ಪಾರಾಗಲು ಹಾಗೂ ಆರೋಪಿಗಳ ಒಳಸಂಚು ಮತ್ತು ಸಾಕ್ಷ್ಯ ನಾಶದ ವಿಷಯ ಮುಚ್ಚಿ ಹಾಕಲು ನಟ ದರ್ಶನ್‌, ತನ್ನ ಸ್ನೇಹಿತ ಮೋಹನ್‌ರಾಜ್‌ ಎಂಬಾತನಿಂದ 40 ಲಕ್ಷ ರೂ. ಪಡೆದುಕೊಂಡಿದ್ದ. ಈ ಪೈಕಿ 3 ಲಕ್ಷ ರೂ. ಅನ್ನು ಪತ್ನಿ ವಿಜಯಲಕ್ಷ್ಮಿ ಮನೆಗೆ ತನ್ನ ಆಪ್ತರ ಮೂಲಕ ಕಳುಹಿಸಿದ್ದ. ಇದೀಗ 40 ಲಕ್ಷ ರೂ. ಅನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ದರ್ಶನ್‌ ಹಿಂದಿನ ಕೇಸ್‌ಗಳ ಬಗ್ಗೆಯೂ ಕೋರ್ಟ್‌ಗೆ ಮಾಹಿತಿ

ಇದೇ ವೇಳೆ ದರ್ಶನ್‌ ವಿರುದ್ಧ ಈ ಹಿಂದೆ ದಾಖಲಾಗಿದ್ದ ಕೆಲ ಪ್ರಕರಣಗಳ ಬಗ್ಗೆಯೂ ತನಿಖಾಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ. 2021ರಲ್ಲಿ ವಿಜಯನಗರ ಠಾಣೆಯಲ್ಲಿ ವರದಕ್ಷಿಣಿ ಕಿರುಕುಳ, 2024ರಲ್ಲಿ ಆರ್‌.ಆರ್‌. ನಗರ ಠಾಣೆಯಲ್ಲಿ ಮಹಿಳೆಯೊಬ್ಬರಿಗೆ ತನ್ನ ಮನೆಯ ನಾಯಿ ಕಚ್ಚಿದ ಪ್ರಕರಣ ದಾಖಲಾಗಿತ್ತು. ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ದರ್ಶನ್‌ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ.

ದರ್ಶನ್‌ ಗ್ಯಾಂಗ್‌ ವಿರುದ್ಧ ಕೋಕಾಸ್ತ್ರ?

ಬೆಂಗಳೂರು: ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ವಿರುದ್ಧ ಪೊಲೀಸರು ಕೋಕಾ ಕಾಯ್ದೆ(ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ಅಳವಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ತಮ್ಮದೇ ತಂಡ ಕಟ್ಟಿಕೊಂಡು ಪದೇ ಪದೇ ಅಪರಾಧ ಎಸಗುವ ರೂಢಿಗತ ಅಪರಾಧಿಗಳ ವಿರುದ್ಧ ಕೋಕಾ ಆಸ್ತ್ರ ಪ್ರಯೋಗಿಸಲಾಗುತ್ತದೆ. ನಿರ್ದಿಷ್ಟ ತಂಡದ ಒಬ್ಬ ವ್ಯಕ್ತಿ ವಿರುದ್ಧ ಕನಿಷ್ಠ ಎರಡು ಪ್ರಕರಣವಾದರೂ ದಾಖಲಾಗಿ, ಆರೋಪ ಪಟ್ಟಿ ಸಲ್ಲಿಸಿರಬೇಕಾಗುತ್ತದೆ. ಆದರೆ, ನಟ ದರ್ಶನ್‌ ರೂಢಿಗತ ಅಪರಾಧಿ ಅಲ್ಲ. ಆದರೆ, ಅದೇ ಮಾದರಿಯಲ್ಲಿ ನಟ ದರ್ಶನ್‌ ತನ್ನದೇ ತಂಡ ಕಟ್ಟಿಕೊಂಡು ರೇಣುಕಸ್ವಾಮಿ ಹತ್ಯೆಗೈದಿದ್ದಾನೆ. ಜತೆಗೆ, ಈ ಹಿಂದೆ ದರ್ಶನ್‌ ವಿರುದ್ಧ ದಾಖಲಾಗಿರುವ ಕೆಲ ಪ್ರಕರಣಗಳಲ್ಲಿ ಆತ ಮತ್ತು ಆತನ ತಂಡದ ಪಾತ್ರಗಳೇನು ಎಂಬ ಬಗ್ಗೆ ಪರಿಶೀಲಿಸಿಕೊಂಡು ಕೋಕಾ ಕಾಯ್ದೆ ಅಳವಡಿಸುವ ಬಗ್ಗೆ ತನಿಖಾಧಿಕಾರಿಗಳು ಕಾನೂನು ತಜ್ಞರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಕೋಕಾ ಕಾಯ್ದೆ ಅಳವಡಿಸಿದರೆ, ಆರೋಪಿಗಳಿಗೆ ಜಾಮೀನು ಕಷ್ಟ ಸಾಧ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next