Advertisement

Renukaswamy Case: ಪರಪ್ಪನ ಅಗ್ರಹಾರ ಜೈಲಲ್ಲಿ ದರ್ಶನ್‌ಗೆ ರಾಜಾತಿಥ್ಯ: ಸಿಎಂ ಗರಂ

11:22 PM Aug 27, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿಯ ಕೊಲೆ ಆರೋಪದಡಿ ಜೈಲು ಸೇರಿರುವ ನಟ ದರ್ಶನ್‌ಗೆ ವಿಶೇಷ ಆತಿಥ್ಯ ಕೊಟ್ಟ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.

Advertisement

ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಸಮ್ಮುಖದಲ್ಲಿಯೇ ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಎಂ, ಈ ವಿಚಾರದಲ್ಲಿ ಯಾರಿಗೂ ಕ್ಷಮೆ ಇಲ್ಲ. ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗುತ್ತದೆ. ಮೊದಲು ಕ್ರಮ ಕೈಗೊಂಡು ಅನಂತರ ವಿವರಣೆ ಕೊಡಿ ಎಂದು ತಾಕೀತು ಮಾಡಿದರು. ಕೂಡಲೇ ದರ್ಶನ್‌ ಹಾಗೂ ಜತೆಗಿರುವವರನ್ನು ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.

18 ಕೈದಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದೇವೆ, ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಕಳುಹಿಸಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

“ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ 9 ಜನರನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೊಂಡಿದ್ದು, ವರದಿ ಆಧಾರದ ಮೇಲೆ ತಪ್ಪೆಸಗಿರುವ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು.” – ಸಿದ್ದರಾಮಯ್ಯ, ಮುಖ್ಯಮಂತ್ರಿ

“ವಿಐಪಿಗಳು ಜೈಲು ಪಾಲಾದಾಗ ಇಂತಹ ವಿಷಯಗಳು ಸುದ್ದಿಯಾಗುತ್ತವೆ. ಇಂತಹ ಲೋಪಗಳಿಂದ ಜನರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಜೈಲು ಅಧಿಕಾರಿಗಳು ಲೋಪಗಳಿಗೆ ಅವಕಾಶ ನೀಡಬಾರದು.” – ಡಾ| ಶರಣ ಪ್ರಕಾಶ್‌ ಪಾಟೀಲ್‌, ಸಚಿವ

Advertisement

“ದರ್ಶನ್‌ ಏನು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವನೇ. ಅವನೊಬ್ಬ ಕ್ರಿಮಿನಲ್‌. ಒಬ್ಬರನ್ನು ಕೊಂದು ಜೈಲಿಗೆ ಹೋದಾತ. ವಿಶೇಷ ಆತಿಥ್ಯ ಸರಿಯಲ್ಲ. ಪರೋಕ್ಷವಾಗಿ ಸಹಾಯ ಮಾಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು.” – ಎಚ್‌. ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ

“ಜೈಲಿನ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಕಾಂಗ್ರೆಸ್‌ ಸರಕಾರದಲ್ಲಿ ಕಾಸು, ಪ್ರಭಾವ ಇದ್ದರೆ ಏನು ಬೇಕಿದ್ದರೂ ಎಲ್ಲಿ ಬೇಕಿದ್ದರೂ ಸಿಗುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನ. ಸೆರೆಮನೆಯೂ ಅರಮನೆ ಆಗಬಲ್ಲದು.”
– ಸಿ.ಟಿ. ರವಿ, ಮೇಲ್ಮನೆ ಸದಸ್ಯ


ದರ್ಶನ್‌ಗೆ ಆತಿಥ್ಯ: ಡಿಐಜಿ ಎತ್ತಂಗಡಿ

ಬೆಂಗಳೂರು: ನಟ ದರ್ಶನ್‌, ರೌಡಿಶೀಟರ್‌ ವಿಲ್ಸನ್‌ಗಾರ್ಡನ್‌ ನಾಗ ಹಾಗೂ ಇತರರಿಗೆ ವಿಶೇಷ ಆತಿಥ್ಯಕ್ಕೆ ಅವಕಾಶ ನೀಡಿದ ಆರೋಪದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸುಧಾರಣೆಗೆ ಮಹತ್ವದ ಹೆಜ್ಜೆಯಿಟ್ಟಿರುವ ಸರಕಾರ, ಕಾರಾಗೃಹದ ಡಿಐಜಿ ಸೋಮಶೇಖರ್‌ ಅವರನ್ನು ಎತ್ತಂಗಡಿ ಮಾಡಿ ಅವರ ಸ್ಥಾನಕ್ಕೆ ಮೈಸೂರಿನ ಕಾರಾಗೃಹ ಅಕಾಡೆಮಿ ಮಹಿಳಾ ಡಿಐಜಿ ದಿವ್ಯಾಶ್ರೀ ಅವರನ್ನು ವರ್ಗಾವಣೆ ಮಾಡಿದೆ.

ಅದೇ ರೀತಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅಮಾನತಿನ ಬೆನ್ನಲ್ಲೇ  ಜೈಲಿನ ಮುಖ್ಯ ಅಧೀಕ್ಷಕರಾಗಿ ಕೆ. ಸುರೇಶ್‌ ಅವರನ್ನು ನೇಮಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ. ದರ್ಶನ್‌ಗೆ ವಿಶೇಷ ಆತಿಥ್ಯ ಪ್ರಕರಣ ಬಯಲಾದ ಬೆನ್ನಲ್ಲೇ ಶೇಷಮೂರ್ತಿ ಸೇರಿ 9 ಮಂದಿಯನ್ನು ಸರಕಾರ ಅಮಾನತುಗೊಳಿಸಿತ್ತು.

ಕೆಐಎಸ್‌ಎಫ್‌ ಭದ್ರತೆ
ಪರಪ್ಪನ ಅಗ್ರಹಾರದಲ್ಲಿನ ಕೈದಿಗಳ ಹಾಗೂ ಅಧಿಕಾರಿಗಳ ರಾಜಾತಿಥ್ಯದ ಕಳ್ಳಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ಕೈಗಾರಿಕಾ ಭದ್ರತಾ ದಳದ (ಕೆಐಎಸ್‌ಎಫ್‌) ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿಯನ್ನು ಮತ್ತಷ್ಟು ಹೆಚ್ಚಿಸಲು ಇಲಾಖೆ ಮುಂದಾಗಿದೆ. ಸಹಾಯಕ ಕಮಾಂಡೆಂಟ್‌, ಇಬ್ಬರು ಇನ್‌ಸ್ಪೆಕ್ಟರ್‌ಗಳು ಸೇರಿ ನೂರಕ್ಕೂ ಹೆಚ್ಚು ಕೆಐಎಸ್‌ಎಫ್‌ ಸಿಬಂದಿಯನ್ನು ಜೈಲಿಗೆ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next