Advertisement

Renukaswamy Case; ದರ್ಶನ್‌ ಗ್ಯಾಂಗ್‌ ಸ್ಥಳಾಂತರ: ಜೈಲುಗಳಲ್ಲಿ ಕಟ್ಟೆಚ್ಚರ

12:47 AM Aug 29, 2024 | Team Udayavani |

ಬೆಂಗಳೂರು:ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಗಳಾದ ನಟ ದರ್ಶನ್‌ ಆ್ಯಂಡ್‌ ಟೀಂಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ರಾಜ್ಯದ ಬೇರೆ ಬೇರೆ ಕೇಂದ್ರ ಕಾರಾಗೃಹಗಳಿಗೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು, ಬಳ್ಳಾರಿ, ಬೆಳಗಾವಿ, ಧಾರವಾಡ, ವಿಜಯಪುರ, ಶಿವಮೊಗ್ಗ, ಕಲಬುರಗಿ ಜಿಲ್ಲಾ ಕಾರಾಗೃಹಗಳಲ್ಲಿ ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ, ಕಾರಾಗೃಹಗಳ ಸ್ಥಿತಿಗತಿ ಏನು ಎಂಬ ಮಾಹಿತಿ ಇಲ್ಲಿದೆ.

Advertisement

ಮೈಸೂರು: ಪ್ರತ್ಯೇಕ ಬ್ಯಾರಕ್‌
ಮೈಸೂರು: ಮೈಸೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾಗುತ್ತಿರುವ ಪವನ್‌, ರಾಘವೇಂದ್ರ, ನಂದೀಶ್‌ ಎಂಬ ಮೂವರು ವಿಚಾರಣಾಧೀನ ಕೈದಿಗಳನ್ನು ಪ್ರತ್ಯೇಕ ಬ್ಯಾರಕ್‌ನಲ್ಲಿಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದ ಆದೇಶದಂತೆ ಮೂವರು ಆರೋಪಿಗಳನ್ನು ಪ್ರತ್ಯೇಕವಾಗಿಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹಿಂಡಲಗಾ ಜೈಲು
ಬೆಳಗಾವಿ: ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಗೊಂಡಿರುವ ಹಿಂಡಲಗಾ ಜೈಲಿನಲ್ಲಿ 15 ಅಂಧೇರಿ ಸೆಲ್‌ (ಕತ್ತಲು ಕೋಣೆ)ಗಳು ಇದ್ದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪ್ರದೋಷ ಬರುವ ಹಿನ್ನೆಲೆಯಲ್ಲಿ ಅಂತಹ ವಿಶೇಷ ಸಿದ್ಧತೆ ಮಾಡಿಕೊಂಡಿಲ್ಲ. ಪ್ರದೋಷ ಬಂದರೆ ಇಲ್ಲಿ ಒಬ್ಬ ಸಿಬಂದಿ ನಿಯೋಜಿಸಲಾಗುವುದು. ಈ ಸೆಲ್‌ನಲ್ಲಿ ಇರುವವರು ಯಾರ ಸಂಪರ್ಕಕ್ಕೂ ಬರುವುದಿಲ್ಲ. ಅಧಿಕಾರಿಗಳು ಹಾಗೂ ಜೈಲು ಸಿಬಂದಿ ಮಾತ್ರ ಈ ಕಡೆಗೆ ಸುಳಿಯಬಹುದು. ಹಿಂಡಲಗಾ ಜೈಲಿನಲ್ಲಿ ಈಗಾಗಲೇ ವೀರಪ್ಪನ್‌ ಸಹಚರರು, ದಂಡುಪಾಳ್ಯ ಗ್ಯಾಂಗ್‌, ಭೂಗತ ಪಾತಕಿ ಬನ್ನಂಜೆ ರಾಜಾ, ವಿಕೃತಕಾಮಿ ಉಮೇಶ ರೆಡ್ಡಿ ಸೇರಿದಂತೆ ಅನೇಕರು ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ.

ವಿಜಯಪುರದ ಜೈಲು
ವಿಜಯಪುರ: ಬೆಂಗಳೂರಿನ ಪರಪ್ಪನ ಅಗ್ರಹಾರದಂತೆ ದರ್ಗಾ ಜೈಲೂ ಆಗಾಗ ತನ್ನ ನಕಾರಾತ್ಮಕತೆಯಿಂದ ಸುದ್ದಿಯಾದದ್ದೂ ಇದೆ. 1983ರಲ್ಲಿ ರಾಜ್ಯ ಸರಕಾರ ವಿಜಯಪುರ ಜೈಲಿಗೆ ಕೇಂದ್ರ ಕಾರಾಗೃಹದ ಮಾನ್ಯತೆ ನೀಡಿದೆ. 10 ಬ್ಯಾರಕ್‌ಗಳಿರುವ ಈ ಜೈಲಿನ ಒಂದೊಂದು ಬ್ಯಾರಕ್‌ನಲ್ಲಿ 40 ಕೈದಿಗಳನ್ನು ಬಂಧಿಸಿ ಇರಿಸಲು ಸಾಧ್ಯವಿದೆ.

ಧಾರವಾಡ: ಜೈಲಿನಲ್ಲಿಲ್ಲ ವಿಐಪಿ ಕೊಠಡಿಗಳು

ಧಾರವಾಡ: ಪ್ರಕರಣದ ಎ-9 ಆರೋಪಿ ಧನರಾಜ್‌ನನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಹಿನ್ನೆಲೆಯಲ್ಲಿ ಕಾರಾ ಗೃಹದಲ್ಲಿ 13 ಭದ್ರತಾ ಸೆಲ್‌ಗ‌ಳ ಪೈಕಿ ಒಂದರಲ್ಲಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೈಲು ಒಳಗಡೆಯೇ ವೈದ್ಯಾಧಿಕಾರಿ ಇದ್ದು, ಅವರೇ ತಪಾಸಣೆ ಮಾಡಲಿದ್ದಾರೆ. ಯಾವುದೇ ವಿಐಪಿ ಕೊಠಡಿಗಳು ಈ ಜೈಲಿನಲ್ಲಿಲ್ಲ ಸಿಸಿ ಕೆಮರಾಗಳಿದ್ದು, 24 ಗಂಟೆ ಕಾರ್ಯ ನಿರ್ವಹಿಸುತ್ತವೆ.

ಬಳ್ಳಾರಿ ಜೈಲಿನಲ್ಲಿ ಕಡಿಮೆ ಸಾಮರ್ಥ್ಯ ಜಾಮರ್‌
ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಮೊದಲಿನಿಂದಲೂ ಮೊಬೈಲ್‌ ಜಾಮರ್‌ ಅಳವಡಿಸಿದ್ದರೂ ಕಡಿಮೆ ಸಾಮರ್ಥ್ಯ ಹೊಂದಿದೆ. ಏಕೆಂದರೆ ಪಕ್ಕದಲ್ಲೇ ಎಸ್‌ಪಿ ಕಚೇರಿ ಇರುವ ಕಾರಣ ಅದರ ಸಾಮರ್ಥ್ಯವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ. ಕೊಲೆ ಕೇಸ್‌ ಆರೋಪಿ ದರ್ಶನ್‌ನ್ನು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಶಿಫ್ಟ್‌ ಮಾಡುತ್ತಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಅಗತ್ಯ ಭದ್ರತೆಯೊಂದಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ಸಿಸಿ ಕೆಮೆರಾ, ಭದ್ರತೆ ಒದಗಿಸಲಾಗಿದೆ.

Advertisement

ಶಿವಮೊಗ್ಗ ಜೈಲಿಗಿಲ್ಲ ನೆಟ್‌ವರ್ಕ್‌ ಜಾಮರ್‌
ಶಿವಮೊಗ್ಗ: ಶಿವಮೊಗ್ಗ ಜೈಲಿನಲ್ಲೂ ಮೊಬೈಲ್‌ ನೆಟ್‌ವರ್ಕ್‌ ಜಾಮರ್‌ ಇಲ್ಲ. ಆದರೆ ವಿಮಾನ ನಿಲ್ದಾಣ ಪಕ್ಕದಲ್ಲೇ ಇರುವುದರಿಂದ ಇಲ್ಲಿ ಜಾಮರ್‌ ಹಾಕಲು ಅವಕಾಶ ಸಿಕ್ಕಿಲ್ಲ. ಏರ್‌ಪೋರ್ಟ್‌ ಸಿಗ್ನಲ್‌ನಲ್ಲಿ ವ್ಯತ್ಯಾಸವಾದರೆ ವಿಮಾನಗಳ ಓಡಾಟಕ್ಕೆ ಇದು ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಜಾಮರ್‌ ಹಾಕಲು ಸಾಧ್ಯವಾಗಿಲ್ಲ. ಇಡೀ ಜೈಲಿಗೆ ಜಾಮರ್‌ ಹಾಕುವುದು ಅಸಾಧ್ಯವಾದ್ದರಿಂದ ಸೆಲ್‌ಗ‌ಳಿಗೆ ಸೀಮಿತವಾಗಿ ಜಾಮರ್‌ ಹಾಕುವ ಚಿಂತನೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next