ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy case) ನಟ ದರ್ಶನ್ (Actor Darshan) ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ನ್ಯಾಯಾಲಯ ಗುರುವಾರ(ಆ.1ರಂದು) ಆದೇಶಿಸಿದೆ.
ನಟ ದರ್ಶನ್, ಪವಿತ್ರಾ ಗೌಡ (Pavitra Gowda) ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು.
ಈ ಸಂಬಂಧ ಪೊಲೀಸರು ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯ ವಿಸ್ತರಣೆಯನ್ನು ಕೋರಿ ನ್ಯಾಯಾಧೀಶರ ಮುಂದೆ ರಿಮ್ಯಾಂಡ್ ಕಾಪಿಯನ್ನು ಸಲ್ಲಿಸಿ ಮನವಿ ಮಾಡಿತ್ತು. ನ್ಯಾಯಾಧೀಶರು ನ್ಯಾಯಾಂಗ ಬಂಧನದ ಅವಧಿಯನ್ನು ಕೋರ್ಟ್ ಆಗಸ್ಟ್ 14 ರವರೆಗೆ ವಿಸ್ತರಣೆ ಮಾಡಿ ಆದೇಶ ನೀಡಿದೆ.
ನಟ ದರ್ಶನ್‌ಗೆ ಮನೆಯೂಟ 10 ದಿನದಲ್ಲಿ ವರದಿಗೆ ಸೂಚನೆ:
ಮನೆ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ನಟ ದರ್ಶನ್ ಸಲ್ಲಿಸಿರುವ ಮನವಿಯನ್ನು ಕಾನೂನು ರೀತಿ ಪರಿಶೀಲಿಸಿ 10 ದಿನಗಳಲ್ಲಿ ತೀರ್ಮಾನ ಕೈಗೊಂಡು, ಅದರ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರಕಾರ ಹಾಗೂ ಜೈಲು ಅಧೀಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ(ಜು.31ರಂದು) ವಿಚಾರಣೆ ನಡೆಸಿದ್ದು, ಆಗಸ್ಟ್ 20ಕ್ಕೆ ವಿಚಾರಣೆಯನ್ನು ಮುಂದೂಡಿದೆ.