Advertisement

Renukaswamy Case:ದರ್ಶನ್‌ ಜಾಮೀನಿಗೆ ಆಕ್ಷೇಪ-SPPಯಿಂದ ಪ್ರಬಲ ವಾದ; ವಿಚಾರಣೆ ಮುಂದೂಡಿಕೆ

05:24 PM Oct 09, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy case) ಬಳ್ಳಾರಿ  ಜೈಲಿನಲ್ಲಿರುವ(ಎ2) ದರ್ಶನ್‌‌ (Darshan) ಜಾಮೀನು ಅರ್ಜಿ ವಿಚಾರಣೆ ಬುಧವಾರ (ಅ.9ರಂದು) ಮತ್ತೆ ನಡೆದಿದೆ.

Advertisement

57ನೇ ಸಿಸಿಹೆಚ್‌ ಕೋರ್ಟ್ ನಲ್ಲಿ ದರ್ಶನ್‌ ಪರ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿದ ಬಳಿಕ ಅವರು ಮಂಡಿಸಿದ್ದ ವಾದಕ್ಕೆ ಪ್ರಬಲವಾಗಿಯೇ ಎಸ್‌ ಪಿಪಿ ಪ್ರಸನ್ನ ಕುಮಾರ್ ಅವರು ಪ್ರತಿವಾದವನ್ನು ಮಾಡಿದ್ದಾರೆ.

ದೋಷಾರೋಪ ಪಟ್ಟಿಯ ನ್ಯೂನತೆ ಉಲ್ಲೇಖಿಸಿ ದರ್ಶನ್‌ ಪರ ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ಪೊಲೀಸರ ಪರವಾಗಿ ವಾದ ಮಂಡಿಸಿರುವ ಪ್ರಸನ್ನ ಕುಮಾರ್ ಪ್ರಬಲವಾಗಿಯೇ ಕೋರ್ಟಿನ ಮುಂದೆ ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.

ಸಾಕ್ಷಿಗಳ ಹೇಳಿಕೆ ಉಲ್ಲೇಖ.. ಪ್ರಕರಣ ಸಂಬಂಧ ಸಾಕ್ಷಿ ಸಂಖ್ಯೆ 76ರ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಸನ್ನ ಕುಮಾರ್, ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ದರ್ಶನ್, ಪವಿತ್ರಾ ಗೌಡ ಬರುತ್ತಾರೆ. ದರ್ಶನ್ ರೇಣುಕಾಸ್ವಾಮಿ ಎದೆಗೆ ಹಾಗೂ ಮರ್ಮಾಂಗಕ್ಕೂ ಒದ್ದಿರುವುದಾಗಿ ‘ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದವನ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಕೃತ್ಯ ನಡೆದ ಸಂದರ್ಭದಲ್ಲಿ ಸಾಕ್ಷಿಗಳಾದ 76, 77, 78, 79 ಶೆಡ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ವಿಚಾರಣೆ ವೇಳೆ ಇವರೆಲ್ಲರ ಮೊಬೈಲ್ ಟವರ್ ಲೊಕೇಷನ್ ಇದೇ ಶೆಡ್‌ ಬಳಿ ಸಿಕ್ಕಿದೆ. ಕಾಲ್ ವಿವರ, ರೆಕಾರ್ಡ್ಸ್​ನಲ್ಲಿ ಇವರೆಲ್ಲಾ ಅಲ್ಲೇ ಇದ್ದಿದ್ದಕ್ಕೆ ಪುರಾವೆ ಸಿಕ್ಕಿದೆ. ಕೃತ್ಯ ನಡೆಯುವ ವೇಳೆ ದರ್ಶನ್ ಸೇರಿ ಆರೋಪಿಗಳು, ಸಾಕ್ಷಿಗಳು ಅಲ್ಲಿಯೇ ಇದ್ದರು ಎಂಬುದಾಗಿ ಪ್ರಸನ್ನ ಕುಮಾರ್ ಪ್ರಬಲ ವಾದ ಮಂಡಿಸಿದ್ದಾರೆ.

Advertisement

ರಕ್ತದ ಕಲೆಯ ವಾದಕ್ಕೆ ಕೌಂಟರ್‌ ಕೊಟ್ಟ ಎಸ್‌ ಪಿಪಿ..

ಪ್ರಕರಣದಲ್ಲಿ ಪೊಲೀಸರು ದರ್ಶನ್‌ ವಿರುದ್ಧ ನೀಡಿರುವ ಸಾಕ್ಷಿಗಳು ಸೂಕ್ತವಾಗಿಲ್ಲ. ಪಂಚನಾಮೆಯಲ್ಲಿ ರಕ್ತದ ಕಲೆ ಇದೆ ಎಂದಿದ್ದಾರೆ. ಆದರೆ ಎಫ್‌ ಎಸ್‌ ಎಲ್ ವರದಿಯಲ್ಲಿ ರಕ್ತದ ಕಲೆಯೇ ಇಲ್ಲ ಎಂದಿದೆ. ಹಾಗಿದ್ರೆ ಯಾರು ಇಲ್ಲಿ ಸಾಕ್ಷಿಗಳನ್ನು ಪ್ಲಾಂಟ್ ಮಾಡಿದ್ದು? ಇಂತಹ ಸಾಕ್ಷಿಗಳ ಸೃಷ್ಟಿಗೂ ಮಿತಿ ಇರಬೇಕು. ಇಲ್ಲಿ ನ್ಯಾಯದ ಕಗ್ಗೊಲೆಯಾಗಿದೆ‌ ಎಂದು ತನ್ನ ವಾದದಲ್ಲಿ ನಾಗೇಶ್‌ ಉಲ್ಲೇಖಿಸಿದ್ದರು.

ಇದಕ್ಕೆ ಕೌಂಟರ್‌ ನೀಡಿರುವ ಪ್ರಸನ್ನ ಕುಮಾರ್‌, ‘ಪಟ್ಟಣಗೆರೆ ಶೆಡ್‌ ಸುಮಾರು 6 ಎಕರೆ ವಿಸ್ತೀರ್ಣದಲ್ಲಿದೆ. ನೂರಾರು ವಾಹನಗಳನ್ನು ಅಲ್ಲಿ ಪಾರ್ಕ್ ಮಾಡಲಾಗಿದೆ. ಕೃತ್ಯದ ಸ್ಥಳದಿಂದ 96 ವಸ್ತುಗಳನ್ನು ಎಫ್ಎಸ್ಎಲ್‌ಗೆ ಕಳುಹಿಸಲಾಗಿತ್ತು. ಒಂದೆರಡು ವಸ್ತುಗಳಲ್ಲಿ ರಕ್ತದ ಕಲೆ ಇಲ್ಲವಾದರೆ ಮಹಜರು ಅನರ್ಹವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಜಾಮೀನು ಅರ್ಜಿ ಬಗ್ಗೆಯಷ್ಟೇ ತೀರ್ಮಾನ..

ಆರೋಪಿಯ ಮೇಲಿನ ಅಪರಾಧ ಸಾಬೀತಾಗುತ್ತದೆಯೇ ಎಂಬುದನ್ನು ಈಗ ತೀರ್ಮಾನಿಸುತ್ತಿಲ್ಲ. ಕೇವಲ ಜಾಮೀನು ಅರ್ಜಿಯ ಬಗ್ಗೆಯಷ್ಟೇ ಕೋರ್ಟ್ ತೀರ್ಮಾನಿಸುತ್ತಿದೆ. ಹೀಗಾಗಿ ಕೂದಲು ಸೀಳಿದಂತೆ ಸಾಕ್ಷ್ಯಗಳ ವಿಶ್ಲೇಷಣೆ ಮಾಡಬೇಕಿಲ್ಲ’ ಎಂದು ನಾಗೇಶ್‌ ಅವರ ವಾದಕ್ಕೆ ಪ್ರತಿವಾದವಾಗಿ ಪ್ರಸನ್ನ ಕುಮಾರ್‌ ಹೇಳಿದ್ದಾರೆ.

ಪಿಎಸ್‌ಐ ವಿನಯ್‌ಗೆ ಮೊದಲು ಕೃತ್ಯದ ಬಗ್ಗೆ ಗೊತ್ತಿರಲಿಲ್ಲ.

ಪಿಎಸ್ಐ ವಿನಯ್ ಕುರಿತು ದರ್ಶನ್‌ ಪರ ವಕೀಲ ನಾಗೇಶ್‌ ತಮ್ಮ ವಾದದಲ್ಲಿ ‘ಜೂನ್ 8ರಂದೇ ಪಿಎಸ್ಐ ವಿನಯ್​ಗೆ ಘಟನೆ ಬಗ್ಗೆ ಗೊತ್ತಿತ್ತು. ಜೂನ್ 9ರಂದು ಪಿಎಸ್ಐ ವಿನಯ್​ಗೆ ಕೃತ್ಯದ ಸ್ಥಳದ ವಿಡಿಯೋ ಕಳಿಸಿದ್ದರೆಂದುʼ ವಾದಿಸಿದ್ದರು.

ಈ ಕುರಿತು ಪಿಎಸ್ಐ ವಿನಯ್ ಹೇಳಿಕೆಯನ್ನು ಪ್ರಸನ್ನ ಕುಮಾರ್‌ ಇಲ್ಲಿ ಉಲ್ಲೇಖಿಸಿದ್ದಾರೆ. “ನನ​ಗೆ ಕರೆ ಮಾಡುವ ಪ್ರದೋಷ್ ಸಲಹೆ ಕೊಡಿ ಎಂದು ಹೇಳಿರುತ್ತಾನೆ. ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿ ಸಮಸ್ಯೆ ಆಗಿದೆ‌ ಎಂದಿದ್ದಾನೆ. ಏರಿಯಾ, ಸ್ಥಳದ ಬಗ್ಗೆ ಗೊತ್ತಿಲ್ಲ ಎಂದು ಪ್ರದೋಷ್ ಹೇಳಿದ್ದ. ಸ್ಥಳೀಯ ಠಾಣೆಯಲ್ಲಿ ಸರೆಂಡರ್ ಆಗಲು ಸೂಚಿಸಿದ್ದೆ’ ಎಂದು ವಿನಯ್ ಹೇಳಿಕೆಯನ್ನು ಪ್ರಸನ್ನ ಕುಮಾರ್ ಓದಿದ್ದಾರೆ.

ಘಟನೆ ನಡೆದ ಮರುದಿನ ಪ್ರದೋಷ್‌ ಪಿಎಸ್‌ ಐಗೆ ಕರೆ ಮಾಡಿ ಕೃತ್ಯ ನಡೆದ ಸ್ಥಳದ ಬಗ್ಗೆ ಹೇಳಿದ್ದ. ಇಲ್ಲಿ ಪಿಎಸ್‌ ಐಗೆ ಸಿಸಿಟಿವಿ ದೃಶ್ಯದ ವಿಡಿಯೋ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ಪಿಎಸ್‌ ಐಗೆ ಕಳುಹಿಸಿರುವುದು ಶವ ಸಿಕ್ಕ ಸ್ಥಳದ ವಿಡಿಯೋ. ಅಪಾರ್ಟ್‌ ಮೆಂಟ್‌ ಬಳಿ ಬಂದ ಸ್ಕಾರ್ಪಿಯೋ ಕಾರಿನ ವಿಡಿಯೋ ಇದಾಗಿದೆ. ಪಟ್ಟಣಗೆರೆ ಶೆಡ್‌ನಲ್ಲೇ ಕೃತ್ಯವಾಗಿದೆ ಎಂದು ವಿನಯ್​ಗೆ ಮೊದಲು ತಿಳಿದಿರಲಿಲ್ಲ’ ಎಂದು ಪ್ರಸನ್ನ ಕುಮಾರ್‌ ಉಲ್ಲೇಖಿಸಿದ್ದಾರೆ.

ಪ್ರದೋಷ್‌  ಮೊಬೈಲ್‌ ಶವದ ಮತ್ತೊಂದು ಫೋಟೋವಿದೆ. ಇದನ್ನು ಸ್ವತಃ ಪ್ರದೋಷ್‌ ತೆಗದುಕೊಂಡಿದ್ದಾನೆಯೇ ವಿನಃ ಬೇರಯವರು ಆತನಿಗೆ ಕಳುಹಿಸಿಲ್ಲ. ಎಫ್ಐಆರ್ ದಾಖಲಾದ ಬಳಿಕ ಎ15, 16, 17 ಠಾಣೆಗೆ ಸರೆಂಡರ್ ಆಗಿದ್ದರು. ಜೂನ್ 10ರಂದು ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಆ ದಿನ ರಾತ್ರಿ 10 ಗಂಟೆಗೆ ಕೊಂದವರು ಇವರಲ್ಲ ಎಂಬುದು ತಿಳಿದಿದೆ. ಮರುದಿನವೇ ಬೆಳಗ್ಗೆ ಮೈಸೂರಿಗೆ ತೆರಳಿ 8 ಗಂಟೆಗೆ ದರ್ಶನ್ ಬಂಧಿಸಲಾಗಿದೆ ಎಂದು ಪ್ರಸನ್ನ ಕುಮಾರ್ ಹೇಳಿದ್ದಾರೆ.

ದರ್ಶನ್‌ ಅವರಿಗೆ ಜಾಮೀನು ನೀಡಬಾರದೆಂದು ಹಲವು ಸಾಕ್ಷ್ಯಗಳನ್ನು ಉಲ್ಲೇಖಿಸಿ ಪ್ರಸನ್ನ ಕುಮಾರ್ ಅವರು ತಮ್ಮ ವಾದವನ್ನು ಮುಗಿಸಿದ್ದಾರೆ.

ಎರಡೂ ಕಡೆಯ ವಾದ – ಪ್ರತಿವಾದವನ್ನು ಆಲಿಸಿದ ಕೋರ್ಟ್ ದರ್ಶನ್‌ ಅವರ ವಾದ ಮಂಡನೆಗೆ ಕಾಲಾವಕಾಶ ನೀಡಿದ್ದು, ನಾಳೆ (ಗುರುವಾರ, ಅ.10ರಂದು) ದರ್ಶನ್‌ ಪರ ವಕೀಲ ನಾಗೇಶ್‌ ಅವರು ವಾದ ಮಂಡನೆ ಮಾಡಲಿದ್ದಾರೆ.

ಇನ್ನು ಎ1 (ಪವಿತ್ರಾ ಗೌಡ) ಎ8, ಎ11,  12, ಎ13 ಇವರ ಜಾಮೀನು ಅರ್ಜಿಯ ವಿಚಾರಣೆ ಅಕ್ಟೋಬರ್‌ 14ಕ್ಕೆ ಮುಂದೂಡಿಕೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next