Advertisement
ದರ್ಶನ್ ಮತ್ತು 13ನೇ ಆರೋಪಿ ದೀಪಕ್‌ನನ್ನು ಪ್ರಕರಣದಿಂದ ಪಾರು ಮಾಡಲು ಆತನ ಕಡೆಯವರು ದೊಡ್ಡ ಮೊತ್ತದ ಡೀಲ್ ನಡೆಸಲು ಮುಂದಾಗಿದ್ದರು ಎನ್ನಲಾಗಿದೆ. ದೀಪಕ್ ಪ್ರಭಾವಿ ರಾಜಕಾರಣಿ ಸಂಬಂಧಿಯಾಗಿರುವುದರಿಂದ ಆತನನ್ನು ಪ್ರಕರಣದಿಂದ ಹೊರಗಿಡಲು ಪ್ರಯತ್ನ ನಡೆದಿರುವ ಗುಮಾನಿ ಹುಟ್ಟಿಕೊಂಡಿದೆ. ದೀಪಕ್ ಫೋಟೋ ಸಹ ಹೊರಬಾರದಂತೆ ನೋಡಿಕೊಳ್ಳಲಾಗಿತ್ತು. ಈತನನ್ನು ಅಪ್ರೂವರ್ ಮಾಡಿಕೊಂಡು ಪ್ರಕರಣದಿಂದ ಕೈ ಬಿಡುವ ಚಿಂತನೆ ನಡೆದಿತ್ತು ಎನ್ನಲಾಗುತ್ತಿದೆ. ಜೊತೆಗೆ ದರ್ಶನ್ ರಕ್ಷಣೆಗೂ ಪ್ರಭಾವಿಗಳಿಂದ ಒತ್ತಡ ಬರಲಾರಂಭಿಸಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.
Related Articles
Advertisement
ರೇಣುಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಬುಧವಾರ ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ಸೇರಿದಂತೆ 13 ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಿದ ಸಂದರ್ಭದಲ್ಲಿ ಆರೋಪಿಯೊಬ್ಬನಿಗೆ ಪೊಲೀಸ್ ಸಿಬ್ಬಂದಿ ಮೊಬೈಲ್ ಕೊಟ್ಟಿದ್ದಾರೆ. ಮಹಜರು ನಡೆಸುತ್ತಿದ್ದಾಗ ಓರ್ವ ಆರೋಪಿ ಮೊಬೈಲ್ ನಲ್ಲಿ ಮಾತಾಡಿದ್ದ ದೃಶ್ಯ ಇದೀಗ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಬಳಿ ಕಾಡಿ ಬೇಡಿ ಆರೋಪಿ ಮೊಬೈಲ್ ಪಡೆದಿದ್ದ. ಕೆಲಕಾಲ ಯಾರೊಂದಿಗೋ ಆರೋಪಿ ಮಾತನಾಡಿದ್ದ. ಇದನ್ನು ಕಂಡೂ ಪೊಲೀಸರು ಸುಮ್ಮನಿದ್ದರು ಎನ್ನಲಾಗಿದೆ.
ಪಿಎಸ್‌ಐ ಸೂಚನೆ ಮೇರೆಗೆ ಶವ ಎಸೆದರೆ?: ರೇಣುಕಾಸ್ವಾಮಿ ಕೊಲೆ ನಂತರ ಆರೋಪಿಗಳು ಪಿಎಸ್‌ಐ ಒಬ್ಬರಿಗೆ ಕರೆ ಮಾಡಿದ್ದರು. ಪಿಎಸ್‌ಐ ಬಳಿ ಚರ್ಚಿಸಿದ ನಂತರವೇ ದರ್ಶನ್ ತಂಡವು ರೇಣುಕಾಸ್ವಾಮಿ ಶವವನ್ನು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಸೇತುವೆ ಬಳಿ ಎಸೆದಿದ್ದರು ಎಂಬ ಆರೋಪ ಕೇಳಿ ಬಂದಿದೆ. ಹತ್ಯೆ ಮಾಡಿ ಶವ ಎಸೆದ ಬಳಿಕ ಪೊಲೀಸ್ ಅಧಿಕಾರಿ ಜತೆಗೂ ಕೊಲೆ ಆರೋಪಿಗಳು ಚರ್ಚೆ ನಡೆಸಿದ್ದಾರೆ. ನಟ ದರ್ಶನ್ ಹೆಸರು ಬರುವುದನ್ನು ತಪ್ಪಿಸಲು ಡೀಲ್ ಗೆ ಮುಂದಾಗಿದ್ದ ಶಂಕೆ ವ್ಯಕ್ತವಾಗಿದೆ.
ದರ್ಶನ್ ವಿರುದ್ಧ ರೌಡಿ ಪಟ್ಟಿ ?:
ನಟ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯುವ ವಿಚಾರವೂ ಮುನ್ನಲೆಗೆ ಬಂದಿದೆ. ದರ್ಶನ್ ವಿರುದ್ಧ ಈ ಹಿಂದೆಯೂ ಹಲವು ಹಲ್ಲೆ, ಬೆದರಿಕೆ ಆರೋಪ ಪ್ರಕರಣಗಳು ಕೇಳಿ ಬಂದಿದ್ದವು. ಇದೀಗ ಕೊಲೆ ಪ್ರಕರಣದಲ್ಲಿ ಮತ್ತೆ ಸಿಕ್ಕಿ ಬಿದ್ದಿದ್ದಾರೆ. ಹೀಗಾಗಿ ದರ್ಶನ್ ವಿರುದ್ಧ ರೌಡಿ ಪಟ್ಟಿ ತೆರೆಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.