ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯ ಕೊನೆಯ ಹಂತಕ್ಕೆ ತಲುಪಿರುವ ಪೊಲೀಸರು, ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳ ವಿರುದ್ಧ 200ಕ್ಕೂ ಹೆಚ್ಚು ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಕೊಲೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ರಂಗಕ್ಕಿಳಿದ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಮತ್ತು ತಂಡ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿನ ಶಿಕ್ಷೆಗೆ ಅಗತ್ಯವಿರುವ ಎಲ್ಲ ರೀತಿಯ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಇದುವರೆಗೂ 80ಕ್ಕೂ ಅಧಿಕ ವಸ್ತುಗಳು (ಕೃತ್ಯಕ್ಕೆ ಬಳಸಿದ್ದ ದೊಣ್ಣೆ, ಮರದ ಪಟ್ಟಿಗಳು ಸೇರಿ ಎಲ್ಲ ರೀತಿಯ) ಮತ್ತು ಪಟ್ಟಣಗೆರೆಯ ಶೆಡ್‌ನ ಭದ್ರತಾ ಸಿಬಂದಿ, ಮೃತದೇಹ ಕಂಡ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬಂದಿ, ಫುಡ್ ಡೆಲಿವರಿ ಬಾಯ್, ದರ್ಶನ್‌ಗೆ ಹಣ ಸರಬರಾಜು ಮಾಡಿದ ಆತನ ಸ್ನೇಹಿತ ಮೋಹನ್ ರಾಜ್, ಹಾಸ್ಯ ನಟ ಚಿಕ್ಕಣ್ಣ ಹಾಗೂ ಹತ್ಯೆಗೂ ಮುನ್ನ ಪಾರ್ಟಿ ಮಾಡಿದ ಬಾರ್ ಆ್ಯಂಡ್ ರೆಸ್ಟೋರೆಂಟ್‌ನ ಮಾಲೀಕರು, ಸಿಬಂದಿ, ಚಿತ್ರದುರ್ಗದಲ್ಲಿ ರಾಘವೇಂದ್ರ ಕುಟುಂಬ, ರೇಣುಕಾಸ್ವಾಮಿ ಕುಟುಂಬ ಸದಸ್ಯರು, ದರ್ಶನ್ ಪತ್ನಿ ವಿಜಯಲಕ್ಷ್ಮೀ, ಡೇವಿಲ್ ನಿರ್ದೇಶಕ ಮಿಲನಾ ಪ್ರಕಾಶ್ ಸೇರಿ ಅಂದಾಜು 70ಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ. ಈ ಪೈಕಿ ಕೆಲ ಪ್ರಮುಖ ಸಾಕ್ಷಿಗಳ ಹೇಳಿಕೆಯನ್ನು ಸಿಆರ್‌ಪಿಸಿ(ಈಗ ಬಿಎನ್‌ಎಸ್‌ಎಸ್)164 ಅಡಿಯಲ್ಲಿ ನ್ಯಾಯಾಧೀಶರ ಎದುರು ಸಂಗ್ರಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರದೋಷ್ ಸ್ನೇಹಿತನ ಹೇಳಿಕೆ ದಾಖಲು:
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಶನಿವಾರ ಬಸವೇಶ್ವರನಗರ ಪೊಲೀಸ್ ಠಾಣೆಗೆ ಪ್ರಕರಣದ ಆರೋಪಿ ಪ್ರದೋಷ್ ಸ್ನೇಹಿತ ಕಾರ್ತಿಕ್ ಪುರೋಹಿತ್ ವಿಚಾರಣೆಗೆ ಹಾಜರಾಗಿದ್ದಾನೆ. ಒಂದೂವರೆ ಗಂಟೆ ಕಾಲ ವಿಚಾರಣೆ ನಡೆಸಲಾಗಿದೆ.
ಮಿಲನ ಪ್ರಕಾಶ್ ಮತ್ತೆ ವಿಚಾರಣೆ
ಪ್ರಕರಣದಲ್ಲಿ ಶುಕ್ರವಾರವಷ್ಟೇ ವಿಚಾರಣೆಗೆ ಹಾಜರಾಗಿದ್ದ ಡೇವಿಲ್ ಸಿನೆಮಾ ನಿರ್ದೇಶಕ ಮಿಲನ ಪ್ರಕಾಶ್ ಶನಿವಾರ ಮತ್ತೂಮ್ಮೆ ಬಸವೇಶ್ವರ ನಗರ ಠಾಣೆಗೆ ವಿಚಾರಣೆಗೆ ಹಾಜರಾಗಿದರು. ಎಸಿಪಿ ಚಂದನ್ ಕುಮಾರ್ 2 ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.