Advertisement
ಬಳ್ಳಾರಿ ಜೈಲಿನಲ್ಲಿ ಪತಿ ದರ್ಶನ್‌ನನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮೀ, ಮೈಸೂರು ಚಾಮುಂಡೇಶ್ವರೀ ದೇವಿಯ ಕುಂಕುಮ, ಅಕ್ಷತೆ ಮತ್ತು ಪ್ರಸಾದ ನೀಡಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಸುದೀರ್ಘವಾಗಿ ಪತಿ ದರ್ಶನ್ ಜತೆಗೆ ಮಾತನಾಡಿರುವ ಪತ್ನಿ ವಿಜಯಲಕ್ಷ್ಮೀ, ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ಮಾಡಿದ್ದಾರೆ. ನಾಲ್ಕನೇ ದಿನವಾದ ರವಿವಾರ ಬೆಳಗ್ಗೆ ನಿದ್ದೆಯಿಂದ ಎದ್ದು, ವಿಶೇಷ ಭದ್ರತಾ ವಿಭಾಗದ ಆವರಣದಲ್ಲೇ ವಾಕಿಂಗ್ ಮಾಡಿದ್ದಾರೆ. ಜೈಲು ಮೆನು ಪ್ರಕಾರ ನೀಡಿದ್ದ ಬೆಳಗಿನ ಉಪಾಹಾರ ಪಲಾವ್ ಸೇವಿಸಿದ್ದಾರೆ.
ಎರಡು ತಿಂಗಳಿಂದ ಬೆಂಗಳೂರು, ಬಳ್ಳಾರಿ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿರುವ ದರ್ಶನ್, ಮಾನಸಿಕವಾಗಿ ಕುಗ್ಗಿರುವುದು ಮಾತ್ರವಲ್ಲದೇ, ದೇಹದ ತೂಕವನ್ನು ಸಹ ಕಳೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ದರ್ಶನ್, ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವುದರಿಂದ ಮಾನಸಿಕವಾಗಿ ಕುಗ್ಗಿ ಒಂದಷ್ಟು ತೂಕ ಕಡಿಮೆಯಾಗಿರಬಹುದು. ಮೇಲಾಗಿ ಬೆನ್ನು ನೋವಿನ ಸಮಸ್ಯೆಯಿಂದ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಕೇಳಿದ್ದಾರೆ. ಟಾಯ್ಲೆಟ್‌ಗೆ ಹೋಗಬೇಕಾಗುತ್ತದೆ ಎಂದು ಊಟವನ್ನೂ ಕಡಿಮೆ ಮಾಡುತ್ತಿರುವುದಾಗಿ ಬೆಳಗಾವಿ ಉತ್ತರ ವಲಯ ಕಾರಾಗೃಹ ಡಿಐಜಿ ಟಿ.ಪಿ. ಶೇಷ ಬಳಿ ಹೇಳಿಕೊಂಡಿದ್ದಾರೆ. ಹಾಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಸೇರುವ ಮುನ್ನ 117 ಕೆ.ಜಿ. ತೂಕ ಇದ್ದ ದರ್ಶನ್, ಇದೀಗ 10 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಬಳ್ಳಾರಿ: ಬೆನ್ನು ನೋವಿನ ಸಮಸ್ಯೆಯಿಂದಾಗಿ ಸರ್ಜಿಕಲ್ ಚೇರ್ ಕೇಳಿದ್ದ ನಟ ದರ್ಶನ್, ಜೈಲು ಅಧಿಕಾರಿಗಳ ಸೂಚನೆಯಂತೆ ಮೆಡಿಕಲ್ ರಿಪೋರ್ಟ್ ನೀಡಿದ್ದಾರೆ. ಇದರಿಂದ ಜೈಲು ಅಧಿಕಾರಿಗಳು ದರ್ಶನ್ ಅವರ ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾರೆ.
Advertisement
ಬೆನ್ನು ನೋವಿನಿಂದಾಗಿ ಇಂಡಿಯನ್ ಟಾಯ್ಲೆಟ್ ಸಮಸ್ಯೆಯಾಗುತ್ತಿದೆ ಎಂದಿದ್ದ ದರ್ಶನ್, ಸರ್ಜಿಕಲ್ ಚೇರ್ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಜೈಲು ಅಧಿಕಾರಿಗಳು ಮೆಡಿಕಲ್ ರಿಪೋರ್ಟ್ ನೀಡುವಂತೆ ಸೂಚಿಸಿದ್ದು, ಅದರಂತೆ ದರ್ಶನ್ ಕುಟುಂಬಸ್ಥರು ಮೆಡಿಕಲ್ ರಿಪೋರ್ಟ್ ಅನ್ನು ಸಲ್ಲಿಸಿದ್ದಾರೆ.
ಜೈಲಿನ ವೈದ್ಯರು, ದರ್ಶನ್ ವೈದ್ಯಕೀಯ ವರದಿ ಪರಿಶೀಲಿಸುತ್ತಿದ್ದು, ಅನಿವಾರ್ಯವೆನಿಸಿದಲ್ಲಿ ನೀಡುವ ಸಾಧ್ಯತೆಯಿದೆ. ಅಲ್ಲದೇ, ಸದ್ಯ ವರದಿಯನ್ನು ಪರಿಶೀಲಿಸಿರುವ ಜೈಲಿನ ವೈದ್ಯರು, ದರ್ಶನ್‌ನನ್ನು ತಪಾಸಣೆ ಮಾಡಿಲ್ಲ. ಸೋಮವಾರ ಮಾಡುವ ಸಾಧ್ಯತೆಯಿದೆ. ಜೈಲಿನಲ್ಲಿ ಸಾಮಾನ್ಯ ಕೈದಿಯಂತೆ ದರ್ಶನ್‌ನನ್ನು ಸಹ ನೋಡಿಕೊಳ್ಳಲಾಗುತ್ತಿದ್ದು, ಕೆಲವೊಂದು ಮಾತ್ರೆಗಳನ್ನು ನೀಡಲು ಮನವಿ ಮಾಡಿಕೊಂಡಿದ್ದು, ಸರಕಾರಿ ಮಾತ್ರೆಗಳನ್ನು ಮಾತ್ರ ಬಳಸುವಂತೆ ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ದರ್ಶನ್ ಸ್ಥಳಾಂತರ?ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ಕೊಲೆ ಆರೋಪಿ ದರ್ಶನ್‌ಗೆ ಬಳ್ಳಾರಿ ಜೈಲಿನ ಸೆರೆವಾಸ ನರಕ ದರ್ಶನವಾಗುತ್ತಿದ್ದು, ವಾಪಸ್ ಬೆಂಗಳೂರಿಗೆ ಸ್ಥಳಾಂತರವಾಗಲು ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗಿರುವ ದರ್ಶನ್‌ಗೆ ಇಲ್ಲಿನ ವಿಶೇಷ ಭದ್ರತಾ ವಿಭಾಗದ 10/10 ಅಡಿ ಸೆಲ್‌ನಲ್ಲಿ ಅಕ್ಷರಶಃ ಜೈಲಿನ ನಿಜ ದರ್ಶನವಾಗುತ್ತಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದ್ದಂತೆ ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಆರಾಮವಾಗಿ ಇರಲು ಆಗುತ್ತಿಲ್ಲ. ಸೊಳ್ಳೆಗಳ ಕಾಟಕ್ಕೆ ನಿದ್ದೆ ಬರುತ್ತಿಲ್ಲ. ಬೆನ್ನು ನೋವಿನಿಂದ ಇಂಡಿಯನ್ ಟಾಯ್ಲೆಟ್ ಸಮಸ್ಯೆಯಿಂದಾಗಿ ಸರಿಯಾಗಿ ಊಟ ಮಾಡಲಾಗುತ್ತಿಲ್ಲ. ಇದರಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ಶನಿವಾರ ಭೇಟಿಯಾದ ಪತ್ನಿ ವಿಜಯಲಕ್ಷ್ಮೀ ಮತ್ತವರ ಸಂಬಂ ಧಿಕರ ಬಳಿ ಬಳ್ಳಾರಿ ಜೈಲಿನಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಹೇಳಿಕೊಂಡಿರುವ ಆರೋಪಿ ದರ್ಶನ್, ಬೆನ್ನು ನೋವು, ಕೈ ನೋವು, ಇಂಡಿಯನ್ ಟಾಯ್ಲೆಟ್‌ನಲ್ಲಿ ವ್ಯವಸ್ಥೆ ಸರಿಯಾಗುತ್ತಿಲ್ಲ. ಹೀಗಾಗಿ ಆರೋಗ್ಯದ ನೆಪವೊಡ್ಡಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಮತ್ತೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಲು ಸದ್ದಿಲ್ಲದೇ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಸ್ಥಳಾಂತರಕ್ಕೂ ನನಗೂ ಸಂಬಂಧವಿಲ್ಲ: ಸಚಿವ ಜಮೀರ್
ಹುಬ್ಬಳ್ಳಿ: ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವುದಕ್ಕೂ ನನಗೂ ಸಂಬಂಧವಿಲ್ಲ. ಆತ ನನ್ನ ಸ್ನೇಹಿತ ಇರಬಹುದು. ನಾನು ಬಳ್ಳಾರಿ ಉಸ್ತುವಾರಿ ಸಚಿವ ಇರಬಹುದು. ಆದರೆ ನಾನು ಡಿಜಿ ಅಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಜೈಲಿನಲ್ಲಿನ ರಾಜಾತಿಥ್ಯದ ಫೋಟೋ ಮಾಧ್ಯಮದಲ್ಲೇ ಬಂದಿದೆ. ಈ ಹಿನ್ನೆಲೆಯಲ್ಲಿ ಬೇರೆ ಜೈಲಿಗೆ ದರ್ಶನ್‌ನನ್ನು ವರ್ಗಾಯಿಸಲಾಗಿದೆ. ಇದನ್ನು ಪೊಲೀಸ್ ಇಲಾಖೆ ತೀರ್ಮಾನ ಮಾಡಿದ್ದು ಹೊರತು ನಾನಲ್ಲ ಎಂದರು.