ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಸಂಬಂಧ ದರ್ಶನ್ (Darshan) ಅವರ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ (ನ.27 ರಂದು) ಹೈಕೋರ್ಟ್ನಲ್ಲಿ ನಡೆದಿದೆ.
ನ್ಯಾ. ವಿಶ್ವಜಿತ್ ಶೆಟ್ಟಿ ಅವರಿರುವ ಏಕಸದಸ್ಯ ಪೀಠದಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ.
ರೇಣುಕಾಸ್ವಾಮಿಯ ಕೊಲೆ ನಡೆದ ಜಾಗದಲ್ಲಿ ನಟ ದರ್ಶನ್ ಇರುವ ಫೋಟೋ ಪೊಲೀಸರಿಗೆ ಸಿಕ್ಕಿದೆ. ಅದನ್ನು ಎಫ್ಎಸ್ಎಲ್ ರಿಪೋರ್ಟ್ಗೆ ಹೈದರಾಬಾದ್ಗೆ ಕಳುಹಿಸಲಾಗಿದೆ. ಹೀಗಾಗಿ ಪ್ರಕರಣ ಮಹತ್ವ ಪಡೆದುಕೊಂಡಿದೆ. ಇತ್ತ ಪೊಲೀಸರು ದರ್ಶನ್ ಜಾಮೀನು ರದ್ದತಿಗೆ ಮನವಿ ಮಾಡಲು ಮುಂದಾಗಿದ್ದಾರೆ.
ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ:
ರೇಣುಕಾಸ್ವಾಮಿಗೆ ಮಹಿಳೆಯರ ಬಗ್ಗೆ ಯಾವುದೇ ಗೌರವವಿರಲಿಲ್ಲವೆಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ರೇಣುಕಾಸ್ವಾಮಿಯನ್ನು ಕಿಡ್ಯಾಪ್ ಮಾಡಿ ಕೊಲೆ ಮಾಡಿದ ಆರೋಪವಿದೆ. ಅಪಾರ್ಟ್ ಮೆಂಟ್ ಕಾವಲುಗಾರ ದೂರು ನೀಡಿದ ಮೇಲೆ ಎಫ್ ಐಆರ್ ದಾಖಲು ಮಾಡಲಾಗಿದೆ. ಮೃತದೇಹದ ಮಹಜರು, ಪೋಸ್ಟ್ ಮಾರ್ಟಂನಲ್ಲಿ ವಿಳಂಬ ಮಾಡಲಾಗಿದೆ. ಮೃತದೇಹವನ್ನು ಶೈತ್ಯಾಗಾರದಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ಸಿಕ್ಕಿಲ್ಲ. ಶವದ ಫೋಟೋ ಆಧಾರದಲ್ಲಿ ಸಾವಿನ ಸಮಯವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಶವ ಪರೀಕ್ಷೆ ವರದಿ ಒಂದು ತಿಂಗಳ ವಿಳಂಬವಾಗಿ ಬಂದಿದೆ ಎಂದು ವಾದ ಮಂಡಿಸಿದ್ದಾರೆ.
ಮೋಸದಿಂದ ಅಪಹರಣ ಮಾಡಿಲ್ಲ..
ರೇಣುಕಾಸ್ವಾಮಿಯನ್ನು ಯಾವುದೇ ಮೋಸದಿಂದ ಅಪಹರಣ ಮಾಡಿಲ್ಲ. ಚಿತ್ರದುರ್ಗದಿಂದ ಬೆಂಗಳೂರಿಗೆ ಒತ್ತಾಯದಿಂದ ಕರೆತಂದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಬಲವಂತದಿಂದ ಅಪಹರಣ ಮಾಡಿದ್ದಾರೆ ಎನ್ನುವ ಬಗ್ಗೆ ಸಾಕ್ಷ್ಯಗಳಿಲ್ಲ. ಮೃತ ತಂದೆಯ ಹೇಳಿಕೆಯನ್ನು ಪಡೆಯಲಾಗಿದೆ. ಅದರಲ್ಲಿ ಜೂ.8ರಂದು ಕೆಲಸಕ್ಕೆ ಎಂದಿನಂತೆ ಹೋಗಿದ್ದ. ಹಳೆಯ ನಾಲ್ಕು ಸ್ನೇಹಿತರ ಜತೆ ಹೋಗುತ್ತೇನೆ ಎಂದು ತಾಯಿ ಬಳಿ ಹೇಳಿ ಹೋಗಿದ್ದ. ದಿನನಿತ್ಯದ ಯೂನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲವೆಂದು ಫೋನ್ ಮಾಡಿ ತಿಳಿಸಿರುವ ಅಂಶಗಳಿವೆ. ಇಲ್ಲಿ ಯಾವುದೇ ಒತ್ತಾಯ ಮೋಸ ಆಗಿಲ್ಲ. ಹೀಗಾಗಿ ಇದನ್ನು ಕಿಡ್ನ್ಯಾಪ್ ಎಂದು ಹೇಳಲು ಆಗಲ್ಲವೆಂದು ನಾಗೇಶ್ ವಾದ ಮಂಡಿಸಿದ್ದಾರೆ.
ತಂದೆ – ತಾಯಿ, ಬಾರ್ನವರ ಹೇಳಿಕೆ ಗಮನಿಸಿದರೆ ಇಲ್ಲಿ ಕಿಡ್ನ್ಯಾಪ್ ಆಗಿಲ್ಲವೆನ್ನಿವ ವಿಚಾರ ಗೊತ್ತಾಗುತ್ತದೆ. ರೇಣುಕಾಸ್ವಾಮಿ ಬಾರ್ನಲ್ಲಿ ಪೋನ್ ಪೇ ಮೂಲಕ 640 ರೂಪಾಯಿ ಪಾವತಿಸಿದ್ದ. ಕಿಡ್ನ್ಯಾಪ್ ಆದವನು ಅಪಹರಣಕ್ಕೆ ಒಳಗಾದವನು ಫೋನ್ ಪೇ ಮೂಲಕ ಹಣ ಪಾವತಿಸಲು ಸಾಧ್ಯವೇ? ಎಂದು ಪ್ರಶ್ನೆ ಇಟ್ಟು ವಾದ ಮಂಡಿಸಿದ್ದಾರೆ.
ಕೊಲೆ ಉದ್ದೇಶ ಇರಲಿಲ್ಲ..
ಕೊಲೆ ಆಗಿದೆಯೋ ಇಲ್ಲವೋ ಎನ್ನುವುದು ಬೇರೆ ವಿಚಾರ. 364ರ ಅಡಿಯಲ್ಲಿ ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದು ಕಡೆಯಿಂದ ಇನ್ನೊಂದು ಕಡೆಯಿಂದ ಸಾಗಿಸುವುದು ಸಾಕ್ಷ್ಯ ನಾಶವಲ್ಲ. ಮೃತದೇಹವನ್ನು ಸುಟ್ಟು ಹಾಕಿದ್ದರೆ ಸಾಕ್ಷ್ಯನಾಶವೆಂದು ಪರಿಗಣಿಸಬಹುದಿತ್ತು. ಇಲ್ಲಿ ಶವ ಸುಟ್ಟು ಹಾಕಿಲ್ಲ ಸ್ಥಳಾಂತರ ಮಾಡಲಾಗಿದೆ ಎಂದು ಅಲಹಾಬಾದ್ನ ಕೋರ್ಟಿನ ತೀರ್ಪನ್ನು ಉಲ್ಲೇಖಿಸಿ ವಾದ ಮಂಡಿಸಿದ್ದಾರೆ.
ಕೃತ್ಯದ ಸ್ಥಳದಿಂದ 2 ಮರದ ಕೊಂಬೆ, ನೈಲಾನ್ ಹಗ್ಗವನ್ನು ವಶಕ್ಕೆ ಪಡೆಯಲಾಗಿದೆ. ನೈಲಾನ್ ಹಗ್ಗದಿಂದ ಉಸಿರುಗಟ್ಟಿಸಿ ಕೊಂದ ಆರೋಪವಿಲ್ಲ. ಹೊಡೆದ ಆರೋಪವಿದೆ. ಹೊಡೆದರೆ ಬಾಸುಂಡೆ ಬರುತ್ತದೆ ಅಷ್ಟೇ. ಜೂ.9 ರಂದೇ ಶೆಡ್ ಲಾಕ್ ಮಾಡಿದ್ದರು. ಜೂ.11 ರಂದು ದರ್ಶನ್ ಹೇಳಿಕೆಯನ್ನು ಪಡೆಯಲಾಗಿದೆ. ಮರುದಿನ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಜೂ.9ರಂದು ಸ್ಥಳಕ್ಕೆ ಬಂದರೂ ಪೊಲೀಸರು ಈ ವಸ್ತುಗಳನ್ನು ಯಾಕೆ ವಶಕ್ಕೆ ಪಡೆಯಲಿಲ್ಲ. ಸಾಕ್ಷ್ಯಾಧಾರಗಳನ್ನು ಸೃಷ್ಟಿಸಲು ಪೊಲೀಸರು ಈ ರೀತಿ ಮಾಡಿದ್ದಾರೆ. ದರ್ಶನ್ ಹೇಳಿಕೆ ಆಧಾರದಲ್ಲಿ ಸಾಕ್ಷ್ಯ ತೋರಿಸಲು ಹೀಗೆ ಮಾಡಿದ್ದಾರೆಂದು ನಾಗೇಶ್ ವಾದದಲ್ಲಿ ಉಲ್ಲೇಖಿಸಿದ್ದಾರೆ.
ಪಿಎಸ್ಐ ವಿನಯ್ ಎ 14 , 122 ಕರೆಗಳನ್ನು ಮಾಡಿದ್ದಾರೆ. ಪಿಎಸ್ ವಿನಯ್ ಮೊಬೈಲ್ ನಿಂದ ಫೋಟೋ ರವಾನೆಯಾಗಿದೆ. ಕೃತ್ಯ ನಡೆದ ಸ್ಥಳದ ವಿಡಿಯೋ ಕಳುಹಿಸಿದ್ದೇನೆ. ಕಾಮಾಕ್ಷಿಪಾಳ್ಯ ಪಿಎಸ್ ಐ ವಿನಯ್ ಹೇಳಿಕೆಯಲ್ಲಿದೆ. ಇಲ್ಲಿ ಕೃತ್ಯ ನಡೆದ ಸ್ಥಳವೆಂದರೆ ಶೆಡ್ ಎಂದೇ ಭಾವಿಸಬೇಕು ಎಂದು ವಾದದಲ್ಲೇ ಉಲ್ಲೇಖಿಸಿದ್ದಾರೆ.
ಎಫ್ ಐಆರ್ ವರದಿಯಲ್ಲಿ ಎರಡು ಮರದ ಕೊಂಬೆಗಳನ್ನು ಉಲ್ಲೇಖಿಸಲಾಗಿದೆ. ಆದರೆ ಅದರಲ್ಲಿ ರಕ್ತ ಕಲೆ ಕಂಡು ಬಂದಿಲ್ಲ ಎಂದು ನಾಗೇಶ್ ಹೇಳಿದ್ದಾರೆ.
ಎಷ್ಟು ಜನ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ ಎಂದು ಜಡ್ಜ್ ಪ್ರಶ್ನಿಸಿದ್ದಾರೆ. ಇದಕ್ಕೆ ಇಬ್ಬರು ಸಾಕ್ಷಿಗಳಿದ್ದಾರೆ. ಒಬ್ಬರ ಹೇಳಿಕೆಯನ್ನು 12 ದಿನದ ಬಳಿಕ, ಇನ್ನೊಬ್ಬರ ಹೇಳಿಕೆಯನ್ನು 7 ದಿನದ ಬಳಿಕ ದಾಖಲಿಸಲಾಗಿದೆ ಎಂದು ನಾಗೇಶ್ ಹೇಳಿದ್ದಾರೆ.
ವಾದವನು ಆಲಿಸಿದ ನ್ಯಾಯಾಧೀಶರು ಸಂಜೆ 4 ಗಂಟೆಗೆ ವಿಚಾರಣೆಯನ್ನು ಮುಂದೂಡಿದ್ದಾರೆ.
ಈ ಹಿಂದೆ ನಡೆದಿದ್ದ ವಾದದಲ್ಲಿ ಪೊಲೀಸರ ಪರ ವೈದ್ಯಕೀಯ ವರದಿಯ ಪ್ರತಿ ತಮಗೆ ನೀಡಿಲ್ಲವೆಂದು ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಂಡಿಸಿದ್ದರು. 6 ವಾರಗಳ ಕಾಲ ಷರತ್ತಿನ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ ಸರ್ಜರಿಯ ದಿನಾಂಕವನ್ನು ಇದುವರೆಗೆ ನಿಗದಿಪಡಿಸಿಲ್ಲವೆಂದು ಅವರು ಹೇಳಿದ್ದರು. ದರ್ಶನ್ ಪರ ವಕೀಲರು ವೈದ್ಯಕೀಯ ವರದಿಯ ಪ್ರತಿ ಕೋರ್ಟ್ ಹಾಗೂ ಎಸ್ ಪಿಪಿಗೆ ಸಲ್ಲಿಸಿದ್ದರು.