Advertisement

CM, ಡಿಸಿಎಂ ಭೇಟಿ ಮಾಡಿದ ರೇಣುಕಾಚಾರ್ಯ

09:40 PM Aug 25, 2023 | Team Udayavani |

ಬೆಂಗಳೂರು: ಆಪರೇಷನ್‌ ಹಸ್ತದ ಚರ್ಚೆ ತೀವ್ರವಾಗಿರುವ ಹೊತ್ತಿನಲ್ಲೇ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುಮಾರು 20 ನಿಮಿಷ ಚರ್ಚೆ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಮನವಿ ಸಲ್ಲಿಸಲು ಭೇಟಿ ಮಾಡಲಾಗಿತ್ತು ಎಂಬ ಕಾರಣ ನೀಡಲಾಗಿದೆ. ಜತೆಗೆ ಸದಾಶಿವ ನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿ 15ರಿಂದ 20 ನಿಮಿಷ ಮಾತುಕತೆ ನಡೆಸಿದ್ದಾರೆ.

ರೇಣುಕಾಚಾರ್ಯ ಬಿಜೆಪಿ ಬಿಡುವ ಬಗ್ಗೆ ಈವರೆಗೂ ನಿರ್ಧಾರ ಮಾಡಿಲ್ಲವಾದರೂ ವಿಧಾನಸಭಾ ಚುನಾವಣೆ ಬಳಿಕ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನದಿಂದ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ಅವರನ್ನು ಕಾಂಗ್ರೆಸ್‌ ತನ್ನತ್ತ ಸೆಳೆದುಕೊಳ್ಳಲು ಮುಂದಾಗಿದೆ. ಕಾಂಗ್ರೆಸ್‌ ಸೇರಿದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

ಒಂದು ವೇಳೆ ಬಿಜೆಪಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರಿಗೆ ಪುನಃ ಟಿಕೆಟ್‌ ನೀಡಿದರೆ, ರೇಣುಕಾಚಾರ್ಯ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್‌ ಕಡೆ ಮುಖ ಮಾಡುವುದು ಖಚಿತ ಎನ್ನಲಾಗುತ್ತಿದೆ.
ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಇದೊಂದು ರಾಜಕೀಯ ರಹಿತ ಭೇಟಿ. ನಾನು ಬಿಜೆಪಿಯಲ್ಲಿ ಇದ್ದರೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ಈ ಹಿಂದೆ ನಾನು ಹೊನ್ನಾಳಿಯಲ್ಲಿ ರಾಜ್ಯಮಟ್ಟದ ಕೃಷಿ ಸಮ್ಮೇಳನ ನಡೆಸಿದ್ದಾಗ ಇಬ್ಬರನ್ನೂ ಭೇಟಿಯಾಗಿ ಆಹ್ವಾನ ಕೊಟ್ಟಿದ್ದೆ . ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಭೇಟಿ
ಇದಕ್ಕೂ ಮುನ್ನ ರೇಣುಕಾಚಾರ್ಯ ಡಾಲರ್ಸ್‌ ಕಾಲನಿಯ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next