ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನ ಹಲವು ಸದಸ್ಯರ ಮನೆಗಳಲ್ಲಿ ರವಿವಾರ ಮಹಜರು ನಡೆಸಿರುವ ಪೊಲೀಸರು, ಕೃತ್ಯ ನಡೆದ ಸಂದರ್ಭದಲ್ಲಿ “ಡಿ’ ಗ್ಯಾಂಗ್ ಸದಸ್ಯರು ಧರಿಸಿದ್ದ ಬಟ್ಟೆ, ಚಪ್ಪಲಿ ಸೇರಿ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಮಹಜರು ವೇಳೆ ಪವಿತ್ರಾ ಗೌಡ ಮುಗುಳು ನಗುತ್ತಿದ್ದುದು ಅಚ್ಚರಿ ಮೂಡಿಸಿದೆ.
ಆರೋಪಿಗಳ ಹೇಳಿಕೆ ದಾಖಲಿಸಿಕೊಂಡಿರುವ ಖಾಕಿ ಪಡೆ, ಕೃತ್ಯ ನಡೆದ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನು ಜಪ್ತಿ ಮಾಡಿ ಸಾಕ್ಷ್ಯವನ್ನಾಗಿ ಪರಿಗಣಿಸಿದೆ. ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅವರ ಮನೆಯಲ್ಲಿ ಕೆಲಸಕ್ಕಿದ್ದ ಪವನ್ ಅವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರ್.ಆರ್. ನಗರದಲ್ಲಿರುವ ಪವಿತ್ರಾ ಗೌಡ ನಿವಾಸಕ್ಕೆ ರವಿವಾರ ಕರೆ ತಂದು ಮಹಜರು ನಡೆಸಿದ್ದಾರೆ. ಮನೆಯ ಇಂಚಿಂಚೂ ಜಾಗವನ್ನೂ ಜಾಲಾಡಿರುವ ಖಾಕಿ, ಪ್ರಕರಣಕ್ಕೆ ಅಗತ್ಯವಿರುವ ಸಾಕ್ಷ್ಯ ಸಂಗ್ರಹಿಸಿದೆ.
ರೇಣುಕಸ್ವಾಮಿ ಕೊಲೆಯಾದ ದಿನ ಪವಿತ್ರಾ ಗೌಡ ಪಟ್ಟಣಗೆರೆ ಶೆಡ್‌ನಿಂದ ಆರ್‌ಆರ್ ನಗರದ ತಮ್ಮ ನಿವಾಸಕ್ಕೆ ಬಂದಿದ್ದರು. ಹೀಗಾಗಿ ಶೆಡ್‌ಗೆ ಹೋದಾಗ ಅವರು ಧರಿಸಿದ್ದ ಬಟ್ಟೆ, ರೇಣುಕಾಸ್ವಾಮಿಗೆ ಹಲ್ಲೆ ನಡೆಸಿದ್ದ ಚಪ್ಪಲಿ ವಶಪಡಿಸಿಕೊಳ್ಳಲಾಗಿದೆ. ಪವಿತ್ರಾ ಗೌಡಗೆ ಸೇರಿದ ವೋಕ್ಸ್‌ವ್ಯಾಗೆನ್ ಹಾಗೂ ರೇಂಜ್ ರೋವರ್ ಕಾರುಗಳನ್ನು ತಪಾಸಣೆ ನಡೆಸಲಾಗಿದೆ. ಇನ್ನು ಪವಿತ್ರಾಳ 3 ಅಂತಸ್ತಿನ ಐಷಾರಾಮಿ ಮನೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಲಾಗಿದೆ. ಪೊಲೀಸರ ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್) ತಂಡವೂ ಇತ್ತು. ಇದೇ ಮನೆಯಲ್ಲಿ ರೇಣುಕಾಸ್ವಾಮಿ ಮೇಲೆ ಪವಿತ್ರಾಗೌಡ ಹಾಗೂ ಪವನ್ ಹಲ್ಲೆ ನಡೆಸಿದ್ದರು. ಸತತ 3 ಗಂಟೆಗಳ ಕಾಲ ಮಹಜರು ನಡೆಸಿದ ಅನಂತರ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಕರೆತರಲಾಯಿತು. ಪವಿತ್ರಾ ಗೌಡ 10 ವರ್ಷದಿಂದ ಆರ್.ಆರ್. ನಗರದ ಮನೆಯಲ್ಲಿ ವಾಸವಾಗಿದ್ದಾರೆ. ಪವಿತ್ರಾ ಗೌಡ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ಆರೋಪಿ ಪವನ್ ತನ್ನ ರೂಂ ಅನ್ನು ಪೊಲೀಸರಿಗೆ ತೋರಿಸಿದ್ದಾನೆ. ಅಲ್ಲಿ ಪವನ್ ಪ್ಯಾಂಟ್, ಶರ್ಟ್ ಹಾಗೂ ಬಿಳಿ ಬಣ್ಣದ ಟವಲ್ ಜಪ್ತಿ ಮಾಡಿದ್ದು, ಅದರ ಮೇಲೆ ರಕ್ತದ ಗುರುತು ಪತ್ತೆಯಾಗಿವೆ ಎನ್ನಲಾಗಿದೆ.
ಕೊಲೆ ನಡೆದ ದಿನ ಆರೋಪಿ ನಂದೀಶ್ ಧರಿಸಿದ್ದ ಶೂ ಅನ್ನು ದರ್ಶನ್ ಮನೆಯಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲಿಂದ ಆರ್‌ಆರ್ ನಗರದಲ್ಲಿರುವ ನಂದೀಶನ ಮನೆಗೆ ತೆರಳಿ ಪರಿಶೀಲಿಸಿದ್ದಾರೆ. ಇನ್ನು ಆರೋಪಿಗಳಾದ ನಾಗರಾಜ್, ದೀಪಕ್, ನಂದೀಶ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆರ್‌ಆರ್ ನಗರದ ನಿವಾಸಿ ಆರೋಪಿ ವಿನಯ್ ಮನೆಯಲ್ಲೂ ಬಟ್ಟೆ, ಚಪ್ಪಲಿ ಜಪ್ತಿ ಮಾಡಲಾಗಿದೆ.
ಪವಿತ್ರಾ ಮ್ಯಾನೇಜರ್ ವಿಚಾರಣೆ
ಶನಿವಾರ ತಡರಾತ್ರಿ ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್‌ನನ್ನು ಮೈಸೂರು ರಸ್ತೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.