Advertisement

“ಬಾಡಿಗೆಗಿದೆ’ಜಾಹೀರಾತು ನೀಡಿ ವಂಚನೆ: ಬಂಧನ

06:15 AM Mar 15, 2019 | Team Udayavani |

ಬೆಂಗಳೂರು: ಫ್ಲ್ಯಾಟ್‌ ಬಾಡಿಗೆ ಹಾಗೂ ಭೋಗ್ಯಕ್ಕೆ ಕೊಡುವುದಾಗಿ ವೈಬ್‌ಸೈಟ್‌ಗಳಲ್ಲಿ ಜಾಹೀರಾತು ನೀಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಮಾರತ್ತಹಳ್ಳಿ ನಿವಾಸಿ ಮೊಹಮ್ಮದ್‌ ಅಬ್ದುಲ್‌ ರಹೀಂ ಅಲಿಯಾಸ್‌ ಯಾಸೀರ್‌ (46) ಬಂಧಿತ. ಆರೋಪಿ ವಿರುದ್ಧ 2017ರಿಂದ ಇದುವರೆಗೂ ಮಾರತ್ತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಂಟು ವಂಚನೆ ಪ್ರಕರಣಗಳು ದಾಖಲಾಗಿದ್ದು, ಸುಮಾರು 25 ಲಕ್ಷ ರೂ.ಗೂ ಹೆಚ್ಚು ವಂಚನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.

ಆಂಧ್ರಪ್ರದೇಶ ಮೂಲದ ಅಬ್ದುಲ್‌ ರಹೀಂ ನಾಲ್ಕೈದು ವರ್ಷಗಳಿಂದ ಮಾರತ್ತಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮನೆಗಳ ಬಾಡಿಗೆ ಹಾಗೂ ಭೋಗ್ಯಕ್ಕೆ ಕೊಡಿಸುವ ಮಧ್ಯವರ್ತಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ “99 ಎಕರ್ಸ್‌’, “ಕಾಮನ್‌ ಫ್ಲೋರ್‌ ಡಾಟ್‌ ಕಾಂ’, “ಮ್ಯಾಜಿಕ್‌ ಬ್ರಿಕ್ಸ್‌’ ರೀತಿಯ ರಿಯಲ್‌ ಎಸ್ಟೇಟ್‌ ಸಂಬಂಧಿ ವೈಬ್‌ಸೈಟ್‌ಗಳಲ್ಲಿ ನಗರ ಹಾಗೂ ನಗರದ ಹೊರವಲಯದ ವಿವಿಧೆಡೆ ತನ್ನ ಮಾಲೀಕತ್ವದಲ್ಲಿ ಹತ್ತಾರು ಅಪಾರ್ಟ್‌ಮೆಂಟ್‌ಗಳಿವೆ.

ನೂರಾರು ಫ್ಲಾಟ್‌ಗಳಿವೆ. ಅವುಗಳನ್ನು ಬಾಡಿಗೆ ಹಾಗೂ ಭೋಗ್ಯಕ್ಕೆ ಕೊಡುತ್ತಿದ್ದೇವೆ ಎಂದು ಜಾಹೀರಾತು ಕೊಡುತ್ತಿದ್ದ. ಇದನ್ನು ಗಮನಿಸಿ ಆರೋಪಿಯನ್ನು ಸಂಪರ್ಕಿಸುತ್ತಿದ್ದ ಸಾರ್ವಜನಿಕರಿಗೆ ಕೆಲ ಫ್ಲಾಟ್‌ಗಳನ್ನು ತೋರಿಸಿ ಮುಂಗಡ ಹಣ ಎಂದು ಲಕ್ಷಾಂತರ ರೂ. ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ತಾನೇ ಮಾಲೀಕ ಎಂದು ಸುಳ್ಳು ಹೇಳುತ್ತಿದ್ದ: ಜಾಹೀರಾತು ನೋಡಿ ಆರೋಪಿಯನ್ನು ಸಂಪರ್ಕಿಸುತ್ತಿದ್ದ ಗ್ರಾಹಕರು ಫ್ಲ್ಯಾಟ್‌ ತೋರಿಸುವಂತೆ ಆರೋಪಿಗೆ ದುಂಬಾಲು ಬಿಳುತ್ತಿದ್ದರು. ಹೀಗಾಗಿ ಆರೋಪಿ, ನಗರ ಅಥವಾ ನಗರದ ಹೊರವಲಯದಲ್ಲಿರುವ ಕೆಲ ಅಪಾರ್ಟ್‌ಮೆಂಟ್‌ಗಳ ಮಾಲೀಕರನ್ನು ಸಂಪರ್ಕಿಸಿ, “ತನಗೆ ಪರಿಚಯ ಇರುವ ಕೆಲ ವ್ಯಕ್ತಿಗಳು ಫ್ಲ್ಯಾಟ್‌ಗಳನ್ನು ಬಾಡಿಗೆ ಪಡೆಯಲು ಮುಂದಾಗಿದ್ದು, ತಾವು ಒಪ್ಪಿದರೆ, ಕರೆ ತರುತ್ತೇನೆ’ ಎಂದು ಮೊದಲೇ ಮನೆಯ ಕೀಗಳನ್ನು ಪಡೆದುಕೊಳ್ಳುತ್ತಿದ್ದ. ನಂತರ ತನ್ನ ಗ್ರಾಹಕರನ್ನು ಕರೆದೊಯ್ದು ಈ ಫ್ಲ್ಯಾಟ್‌ಗಳು ತನ್ನ ಹೆಸರಿನಲ್ಲೇ ಇವೆ ಎಂದು ನಂಬಿಸುತ್ತಿದ್ದ.

Advertisement

ಫ್ಲ್ಯಾಟ್‌ ಒಪ್ಪಿಕೊಳ್ಳುತ್ತಿದ್ದ ವ್ಯಕ್ತಿಗಳು ಆರೋಪಿ ಖಾತೆಗೆ ಮುಂಗಡ ಹಣ ಎಂದು ಒಂದರಿಂದ ಮೂರು ಲಕ್ಷ ರೂ.ವರೆಗೆ ವರ್ಗಾವಣೆ ಮಾಡುತ್ತಿದ್ದರು. ನಂತರ ಫ್ಲ್ಯಾಟ್‌ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು. ಆರೋಪಿಯ ವಿರುದ್ಧ ಸುಮಾರು ಎಂಟು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಆರೋಪಿಯ ಮೊಬೈಲ್‌ ನಂಬರ್‌ ಹಾಗೂ ಬ್ಯಾಂಕ್‌ ಖಾತೆಯ ವಿವರ ಪಡೆದು ಬಂಧಿಸಿದ್ದಾರೆ.

ವಿವಿಧ ಹೆಸರುಗಳಲ್ಲಿ ವಂಚನೆ: ಆರೋಪಿಯ ತನ್ನ ಹೆಸರನ್ನು ಮೊಹಮ್ಮದ್‌ ಅಬ್ದುಲ್‌ ರಹೀಂ ಅಲಿಯಾಸ್‌ ಯಾಸೀರ್‌, ರಾಹುಲ್‌ ರಾಹೀಲ್‌, ಎಂ.ಎ.ಆರ್‌.ನೌಮಾನ್‌ ಸಲ್ಮಾನ್‌, ಎಂ.ಎ.ಆರ್‌.ಸಾರೀಕ್‌, ರಾಕೀಬ್‌, ರಿಶಾನ್‌, ಫೈಜೀ ಎಂಬ ಹೆಸರುಗಳಿಂದ ಗ್ರಾಹಕರನ್ನು ಪರಿಚಯಿಸಿಕೊಳ್ಳುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಆರೋಪಿಯ ವಿರುದ್ಧ ಬೇರೆ ಬೇರೆ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇದ್ದು, ವಂಚನೆಗೊಳಗಾದ ಸಾರ್ವಜನಿಕರು ಮಾರತ್ತಹಳ್ಳಿ ಠಾಣೆ-080-25639999, 9480801615 ಅಥವಾ ವೈಟ್‌ಫೀಲ್ಡ್‌ ಪೊಲೀಸ್‌ ನಿಯಂತ್ರಣ ಕೊಠಡಿ-080-22942959 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next