Advertisement

ಖ್ಯಾತ ಜಾನಪದ ವಿದ್ವಾಂಸ ಪ್ರೊ. ಜ್ಯೋತಿ ಹೊಸೂರ ನಿಧನ

04:28 PM Nov 01, 2021 | Team Udayavani |

ಬೆಳಗಾವಿ: ನಾಡಿನ ಖ್ಯಾತ ಜಾನಪದ ವಿದ್ವಾಂಸರು ಹಾಗೂ ಸಾಹಿತಿಗಳಾದ ಪ್ರೋ. ಜ್ಯೋತಿ ಹೊಸರ ಅವರು ಸೋಮವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

Advertisement

ಮೂಲತಃ ರಾಯಬಾಗದವರಾದ ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಮಾಡಿದವರು. ‘ಗಾದೆ, ಒಡಪು, ಗ್ರಾಮದೇವತೆ ‘ಅವರು ಮಾಡಿದ ಸಂಶೋಧನೆಗಳು ವಿದ್ವತ್ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿಧ್ಯಾಲಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು.

ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಜ್ಯೋತಿ ಹೊಸೂರ ಅವರು ಕಾಲಗತಿ ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಶಂಬಾ ಜೋಶಿಯವರ ಸಮಗ್ರ ಸಾಹಿತ್ಯ ವನ್ನು ಪ್ರಕಟಿಸಿದ್ದರು. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ‘ಕನಕದಾಸ, ವಚನ ಸಾಹಿತ್ಯ ಕುರಿತು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಕನ್ನಡ ನಾಡಿಗೆ ಅರಸು ಸಮುದಾಯದ ಕೊಡುಗೆ ಅಪಾರ

ಜ್ಯೋತಿ ಹೊಸೂರ ಅವರ ಸಂಪಾದಿತ ಪ್ರಸಿದ್ಧ ಜನಪದ ಒಡಪುಗಳನ್ನು ಒಳಗೊಂಡ ‘ಹೆಸರ ಹೇಳ್ತೇನಿ ಒಡಪಕಟ್ಟಿ’ ಜನಪದ ತಿಪದಿಗಳ ಸಂಪಾದನೆಯ  ‘ ಬೆರಸಿಯಿಟ್ಟೇನ ಬೆಲ್ಲ ನೆನಗಡಲಿ’ ಕೃತಿಗಳು ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ.

Advertisement

ಜಾನಪದ ಉಪಾಸನೆ, ಜಾತಕರ ಜಾತಕ, ಜಾನಪದ ಕುರವಿದ್ವಾಂಸದಾಸರ ಜೀವನ ವಿಚಾರ ಕುರಿತು, ಸಂಗೊಳ್ಳಿ ರಾಯಣ್ಣ ಚರಿತ್ರೆ ಸಂಶೋಧನೆ, ಸತ್ಯಾನ್ವೇಷಕ ಶಂ.ಬಾ. ಜ್ಯೋಶಿ, ಪ್ರಜ್ಞಾ ಪ್ರವಾಹದ ಬೆಳಕಿನಲ್ಲಿ, ಶರಣರ ಕ್ರಾಂತಿಕಾರಕ ವಚನಗಳು ಸೇರಿದಂತೆ 30ಕ್ಕೂ ಅಧಿಕ ಸಂಖ್ಯೆಯ ಪುಸ್ತಕಗಳನ್ನು ಪ್ರಕಟಿಸಿದ್ದು, ನಾಡಿನ ಅನೇಕ ಪತ್ರಿಕೆ , ನಿಯತಕಾಲಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳು ಪ್ರಕಟಗೊಂಡಿವೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ’ ಬೆಟ್ಟಗೇರಿ ಕೃಷ್ಣ ಶರ್ಮಾ ಸಂಶೋಧಕ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಸಾಹಿತಿಗಳಾದ ಡಾ. ಎಚ್.ಐ. ತಿಮ್ಮಾಪುರ, ಡಾ. ಎಚ್.ಬಿ. ಕೋಲ್ಕಾರ್, ಡಾ. ಕೆ.ಎನ್. ದೊಡ್ಡಮನಿ, ಬಿ.ಎ. ಸನದಿ, ರಾಮಕೃಷ್ಣ ಮರಾಠೆ, ಕೆ.ಪಿ.ಶಿವರಾಯಿ, ಸರಜೂ ಕಾಟ್ಕರ, ಮಂಗಲಾ ಮೆಟಗುಡ್ಡ, ಮೋಹನ ಪಾಟೀಲ, ಡಾ. ಎ ಎಲ್ ಪಾಟೀಲ ಮುಂತಾದವರು ಅಂತಿಮ ನಮನ ಸಲ್ಲಿಸಿದರು.

ಪ್ರೊ. ಜ್ಯೋತಿ ಹೊಸೂರ ಅವರು ತಮ್ಮ ಮರಣದ ನಂತರ ದೇಹದಾನಕ್ಕೆ ಸೂಚಿಸಿದ್ದರಿಂದ, ಅವರ ಪ್ರಾರ್ಥಿವ ಶರೀರವನ್ನು ಜೆ.ಎನ್.ಎಂ.ಸಿ ವೈದ್ಯಕೀಯ ಸಂಸ್ಥೆ ಗೆ ಒಪ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next