Advertisement

ಕೊಳವೆ ಬಾವಿಗಳ ಮರುಪೂರಣ: ಗ್ರಾ.ಪಂ.ಗಳ ನಿರ್ಲಕ್ಷ್ಯ

03:45 AM Jun 30, 2017 | |

ಬೆಳ್ತಂಗಡಿ:  48 ಗ್ರಾಮ ಪಂಚಾಯತ್‌ಗಳನ್ನು ಹೊಂದಿರುವ ಬೆಳ್ತಂಗಡಿ ತಾಲೂಕಿನಲ್ಲಿ ಜಲ ಮರುಪೂರಣ ವ್ಯವಸ್ಥೆ ಕುಂಠಿತವಾಗಿದೆ. ಹೆಚ್ಚಿನ ಗ್ರಾ.ಪಂ.ಗಳಲ್ಲಿ ಯಥೇತ್ಛ ಕೊಳವೆ ಬಾವಿ ಕೊರೆಯಲಾಗಿದ್ದು ಕನಿಷ್ಠ ಜಲ ಮರುಪೂರಣದ ವ್ಯವಸ್ಥೆ  ಮಾಡಿವೆ. ತಾಲೂಕಿನ ಒಟ್ಟು 48 ಗ್ರಾ.ಪಂ.ಗಳಲ್ಲಿ 458 ಸರಕಾರಿ ಕೊಳವೆ ಬಾವಿ ಕಾರ್ಯಚರಿಸುತ್ತಿದ್ದು 106 ಕೊಳವೆ ಬಾವಿಗಳಿಗೆ ಮಾತ್ರ ಜಲ ಮರುಪೂರಣ ಘಟಕ ನಿರ್ಮಿಸಲಾಗಿದೆ.

Advertisement

ಸರಕಾರದ ಮಟ್ಟದಲ್ಲೇ  ಯಶಸ್ಸು ದಕ್ಕಿಲ್ಲ ಜಲ ಮರುಪೂರಣ ಮಾಡಿ ಅಂತರ್ಜಲ ವೃದ್ಧಿಸಿ ಎಂದು ಅರಿವು ಮೂಡಿಸುವ ಕಾರ್ಯ ಸರಕಾರ, ಆಡಳಿತ ವರ್ಗಗಳು ಮಾಡುತ್ತಿವೆಯಾದರೂ ಗ್ರಾ.ಪಂ.ಗಳಲ್ಲಿ ಜಲ ಮರುಪೂರಣ ವ್ಯವಸ್ಥೆಯನ್ನು ಸಮರ್ಪಕ ರೀತಿಯಲ್ಲಿ ಅನುಷ್ಠಾನಿಸಲು ಇನ್ನೂ ಸಾಧ್ಯವಾಗಿಲ್ಲ. ಕೆಲ ಗ್ರಾಮಾಂತರ ಪ್ರದೇಶಗಳಲ್ಲಿ ಜಲ ಮರುಪೂರಣದ ಕಾರ್ಯ ಇನ್ನೂ ಪ್ರಾರಂಭವೇ ಆಗಿಲ್ಲ. ಹತ್ತಿಪ್ಪತ್ತು ಸಾರ್ವಜನಿಕ ಕೊಳವೆ ಬಾವಿ ಹೊಂದಿರುವ ಕೆಲವು ಗ್ರಾ.ಪಂ.ಗಳಲ್ಲಿ ಕೇವಲ ಒಂದೆರಡು ಕೊಳವೆ ಬಾವಿಗಳು ಮಾತ್ರ ಜಲ ಮರುಪೂರಣದ ಭಾಗ್ಯ ಕಂಡಿವೆ.

ಶೂನ್ಯ ಸಂಪಾದಿಸಿದ 9  ಗ್ರಾ.ಪಂ.ಗಳು
ಅರಸಿನಮಕ್ಕಿ, ಬಳಂಜ, ಇಂದಬೆಟ್ಟು, ಮಾಲಾಡಿ, ನಾವುರ, ಮಲವಂತಿಗೆ, ಸುಲ್ಕೇರಿ, ಶಿಶಿಲ, ಶಿಬಾಜೆ ಹೀಗೆ ತಾಲೂಕಿನ ಒಟ್ಟು ಒಂಭತ್ತು ಗ್ರಾ.ಪಂ.ಗಳಲ್ಲಿ ಜಲ ಮರುಪೂರಣದ ವ್ಯವಸ್ಥೆಯನ್ನು ಇನ್ನೂ ಅಳವಡಿಸಿಲ್ಲ. ಹತ್ತಾರು ಕೊಳವೆಬಾವಿ ಹೊಂದಿವೆಯಾದರೂ ಕನಿಷ್ಠ ಒಂದು ಜಲ ಮರುಪೂರಣ ಘಟಕ ಸ್ಥಾಪಿಸಿಲ್ಲ. ಹೆಚ್ಚಿನ ಗ್ರಾ.ಪಂ.ಗಳು ಮುಂದಿನ ಯೋಜನೆಯಾಗಿ ಜಲ ಮರುಪೂರಣ ವ್ಯವಸ್ಥೆಯನ್ನು ಕಾಯ್ದಿರಿಸಿವೆ.

ಅರಿವಿನ ಕೊರತೆ
ಎಲ್ಲೆಲ್ಲೂ ನೀರಿನ ಅಭಾವದಿಂದ ವರುಷದಿಂದ ವರುಷಕ್ಕೆ ಕೊಳವೆ ಬಾವಿಗಳನ್ನು ಹೆಚ್ಚೆಚ್ಚು ಕೊರೆಸಲಾಗುತ್ತಿದೆ ಎಂದು ಪಂಚಾಯತ್‌ಗಳು ತಿಳಿಸುತ್ತವೆ. ಆದರೆ ಜಲ ಮರುಪೂರಣದ ಅರಿವು ಇನ್ನಷ್ಟೇ ಮೂಡಬೇಕಿದೆ. ತುರ್ತಾಗಿ ಆಗ
ಬೇಕಾದ ಕಾರ್ಯ ಎಂಬ ನಿಯಮಕ್ಕೆ ಯಾವ ಗ್ರಾ.ಪಂ.ಗಳೂ ಒಗ್ಗಿಕೊಂಡಂತೆ ಕಾಣುತ್ತಿಲ್ಲ. ಮುಂದೆ ಮಾಡಿದರೆ ಆಯಿತು ಎಂಬ ಧೋರಣೆ ಎದ್ದು ಕಾಣುತ್ತದೆ. ಸರಕಾರದ ಮಟ್ಟದಲ್ಲಿ ಅವಗಣನೆಗೆ ಒಳಪಟ್ಟಿರುವುದರಿಂದ ಖಾಸಗಿಯಾಗಿ ಜಲ ಮರುಪೂರಣದ ವ್ಯವಸ್ಥೆ ತೀರ ವಿರಳವಾಗಿದೆ. 

ಪ್ರತಿ ಗ್ರಾ.ಪಂ.ನಲ್ಲಿ ಅಂದಾಜು ಮೇರೆಗೆ 100-200 ಖಾಸಗಿ ಕೊಳವೆ ಬಾವಿಗಳಿವೆ. ಆದರೆ ಜಲಮರುಪೂರಣ ವ್ಯವಸ್ಥೆ ಅಳವಡಿಸಿಕೊಂಡಿರುವವರು ವಿರಳ.

Advertisement

ಕಟ್ಟುನಿಟ್ಟಿನ ಕ್ರಮ ಅಗತ್ಯ
ಪ್ರಸ್ತುತ ಉದ್ಯೋಗ ಖಾತರಿ ಯೋಜನೆಯಲ್ಲಿ ಜಲ ಮರುಪೂರಣ ಘಟಕ ನಿರ್ಮಾಣ ಕಾರ್ಯವಾಗುತ್ತಿದೆ. ಗ್ರಾ.ಪಂ.ಗಳು ಸ್ವಯಂಪ್ರೇರಿತವಾಗಿ ಘಟಕ ನಿರ್ಮಾಣ ಮಾಡುತ್ತಿವೆ. ಇದರ  ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂಬ ಕಾನೂನಿನಂತೆ ಕೊಳವೆ ಬಾವಿಗಳಿಗೆ ಕಡ್ಡಾಯವಾಗಿ ಇಂಗುಗುಂಡಿ ರಚನೆ ಮಾಡಬೇಕು ಎಂಬ ಕಾನೂನು ತರುವುದು ಅಗತ್ಯವಾಗಿದೆ. 

– ಚಂದ್ರಶೇಖರ್‌ ಎಸ್‌. ಅಂತರ

ಜಲ ಮರುಪೂರಣ
ಅಂಕಿ ಅಂಶ 

ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 7 ಕೊಳವೆ ಬಾವಿಗಳಿವೆ. 1 ಕೊಳವೆ ಬಾವಿಗೆ ಮಾತ್ರ ಜಲ ಮರು
ಪೂರಣ ಅಳವಡಿಸಲಾಗಿದೆ. ಚಾರ್ಮಾಡಿಯಲ್ಲಿ 24 ಇದ್ದು 2 ಕಡೆ ಮಾತ್ರ  ಇದರ ಅನುಷ್ಠಾನ ಆಗಿದೆ. ಬಳಂಜದಲ್ಲಿ 5 ಮತ್ತು ಇಂದಬೆಟ್ಟುವಿನಲ್ಲಿ 12 ಇದೆ. ಆದರೆ ಒಂದೇ ಒಂದು ಕಡೆಯೂ ಮರುಪೂರಣ ಆಗಿಲ್ಲ. ಮಿತ್ತಬಾಗಿಲಿನಲ್ಲಿ 30 ಕೊಳವೆ ಬಾವಿಗಳ ಪೈಕಿ 12ಕ್ಕೆ ಜಲಮರುಪೂರಣ ವ್ಯವಸ್ಥೆ ಮಾಡಲಾಗಿದೆ. ಲಾೖಲದಲ್ಲಿ 11ರಲ್ಲಿ 1 ಕೊಳವೆಬಾವಿಗೆ ಮಾತ್ರ ಇದರ ಅನುಷ್ಠಾನ ಆಗಿದೆ. 

ಪೇಟೆಯಲ್ಲಿ 
ಇಂಗುಗುಂಡಿ ಸಮಸ್ಯೆ

ಗ್ರಾ.ಪಂ. ವ್ಯಾಪ್ತಿಯ ಪ್ರಮುಖ ಪೇಟೆಗಳಲ್ಲಿ ಕೆಲವು ಕೊಳವೆ ಬಾವಿಗಳಿದ್ದು ಅದಕ್ಕೆ ಮರುಪೂರಣ ಘಟಕ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಪೇಟೆ ಪ್ರದೇಶ ಹೊರತುಪಡಿಸಿ ಹೊರವಲಯದಲ್ಲಿರುವ ಕೊಳವೆಬಾವಿಗಳಿಗೆ ಇಂಗುಗುಂಡಿ ರಚಿಸುವ ಕಾರ್ಯ ಹಂತಹಂತವಾಗಿ ಮಾಡಲಾಗುವುದು.
– ಗ್ರಾ.ಪಂ.ಗಳ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next