ಬೀದರ: 4 ಕೋಟಿ ರೂ. ವೆಚ್ಚದಲ್ಲಿ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ ನವೀಕರಣದ ಮುಂದುವರಿದ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.
ಇಲ್ಲಿಯ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೌಕರರ ಒಂದು ದಿನದ ವೇತನದಿಂದ 3 ಕೋಟಿ ರೂ. ಹೊಂದಿಸಲು ಹಾಗೂ ಉಳಿದ 1 ಕೋಟಿ ರೂ.ಯನ್ನು ರಾಜ್ಯ ಸರ್ಕಾರದಿಂದ ಪಡೆಯಲು ಉದ್ದೇಶಿಸಲಾಗಿದೆ. ಮುಂದುವರಿದ ಕಾಮಗಾರಿಯು ಭವನದ ಮುಂಭಾಗದಲ್ಲಿ ಎರಡು ಅಂತಸ್ತಿನ ಕಟ್ಟಡ, 10 ಅತಿಥಿಗೃಹ, ತೆರೆದ ಸಭಾಂಗಣ, ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ, ಅಡುಗೆ ಕೋಣೆ ಮತ್ತಿತರ ಕಾಮಗಾರಿಗಳನ್ನು ಒಳಗೊಂಡಿದೆ ಎಂದರು.
ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರಕ್ಕೆ ಸರಿಸಮಾನ ವೇತನ ನೀಡಲು ಏಳನೇ ವೇತನ ಆಯೋಗ ರಚನೆ, ಎನ್‌ಪಿಎಸ್ ರದ್ದತಿಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಕೆಜಿಐಡಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ನೌಕರರ ವೇತನ ಎಚ್‌ಆರ್‌ಎಂಎಸ್ ಮೂಲಕ ಪಾವತಿಸಲು ಬ್ರಿಮ್ಸ್ ನಿರ್ದೇಶಕರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಘಟಕಗಳ ಅಧ್ಯಕ್ಷರಾದ ರಾಜಪ್ಪ ಪಾಟೀಲ, ಶಿವಕುಮಾರ ಘಾಟೆ, ಮಲ್ಲಿಕಾರ್ಜುನ ಮೇತ್ರೆ ಮಾತನಾಡಿದರು. ಸಭೆಯಲ್ಲಿ ಇಮ್ಯಾನುವೆಲ್ ಭಾಸ್ಕರ್, ಗಜರಾಬಾಯಿ ಶಿವರಾಜ, ಸಂತೋಷ ಚಲುವಾ, ಪ್ರಮೋದ್ ಭೋಸ್ಲೆ ಅವರನ್ನು ಸಂಘಕ್ಕೆ ನಾಮನಿರ್ದೇಶನ ಮಾಡಲಾಯಿತು. ಆರೋಗ್ಯ ಇಲಾಖೆ ಲಿಪಿಕ ನೌಕರರ ಸಂಘಕ್ಕೆ ಆಯ್ಕೆಯಾದ ರಾಜಕುಮಾರ ಬಿರಾದಾರ, ಅನುಸೂಯಾ ಮಾಡಗಿ, ಎಂ.ಎ. ಸತ್ತಾರ್, ಸಿದ್ರಾಮೇಶ ಓತಿ, ರಾಜೇಶ ಗುರು, ಗ್ರೇಸಿ, ಓಂಪ್ರಕಾಶ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪೂರ್ಣಿಮಾ ಪಾಟೀಲ, ಚಂದ್ರಕಾಂತ ತಳವಾಡೆ, ಮಂಜುನಾಥ ಮುದ್ನಾಳ, ಅಭಿಷೇಕ, ಹಾಕಿ ಟೂರ್ನಿಯ ಬೀದರ ರನ್ನರ್ ಅಪ್ ತಂಡದ ಆಟಗಾರರನ್ನು ಸನ್ಮಾನಿಸಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಮಹೇಶ ಬಿರಾದಾರ ಸಭೆಗೆ ಚಾಲನೆ ನೀಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಪ್ರಮುಖರಾದ ಬಕ್ಕಪ್ಪ ನಿರ್ಣಾಕರ್, ಶಿವಶಂಕರ ಟೋಕರೆ, ಪಾಂಡುರಂಗ ಬೆಲ್ದಾರ್, ಶಿವರಾಜ ಕಪಲಾಪುರೆ, ಓಂಕಾರ ಮಲ್ಲಿಗೆ, ಸುಮತಿ ರುದ್ರಾ, ರೂಪಾದೇವಿ, ಸಾವಿತ್ರಮ್ಮ, ಮನೋಹರ ಕಾಶಿ, ಸುಧಾಕರ ಶೇರಿಕಾರ್, ಸಂಜೀವಕುಮಾರ ಸೂರ್ಯವಂಶಿ, ಇಮಾನ್ಯುವೆಲ್, ಸೋಹೆಲ್, ಡಿ. ರಾಜಾ ಇದ್ದರು.