ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹಾಗೂ ನೊರೆ ಕಾಣಿಸಿಕೊಂಡು ಹಾಗೂ ವರ್ತೂರು ಕೆರೆಯಲ್ಲೂ ನೊರೆಯ ಅಲೆಗಳಿಂದ ಈ ಕೆರೆಗಳ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಹಸಿರು ನ್ಯಾಯ ಮಂಡಳಿ, ಹೈಕೋರ್ಟ್ ಒತ್ತಡಕ್ಕೆ ಮಣಿದು ಕೆರೆಗಳ ಗತವೈಭವ ಮರುಕಳಿಸುವಂತೆ ಮಾಡುವ ನಿಟ್ಟಿನಲ್ಲಿ ಇದೀಗ ಅಂಬೆಗಾಲಿನ ಪ್ರಯತ್ನಗಳು ಪ್ರಾರಂಭವಾಗಿವೆ. ಎರಡು ಕೆರೆಗಳ ಅಭಿವೃದ್ಧಿ ಕಾರ್ಯ ಯಾವ ರೀತಿ ನಡೆಯುತ್ತಿದೆ. ಯಾವೆಲ್ಲ ಸುಧಾರಣಾ ಕ್ರಮ ಕೈಗೊಳ್ಳಲಾಗಿ ದೆ ಎನ್ನುವ ಮಾಹಿತಿ ಈ ಬಾರಿಯ “ಸುದ್ದಿ ಸುತ್ತಾಟ’ದಲ್ಲಿ…
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಹೈಕೋರ್ಟ್‌ನ ನಿರಂತರ ಚಾಟಿ ಏಟಿನ ನಂತರ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಜೀವಸೆಲೆ ಉಳಿಸಿಕೊಳ್ಳುವ ಪ್ರಯತ್ನ ಶುರುವಾಗಿದೆ. ಮೊದಲ ಹಂತವಾಗಿ ಎರಡು ಕೆರೆಗಳಿಗೆ ಕಲುಷಿತ ಹಾಗೂ ಕೊಳಚೆ ನೀರು ಸೇರುವುದನ್ನು ತಡೆಯಲು ಕೆರೆಯ ಸುತ್ತ ಡೈವರ್ಸನ್ ಚಾನೆಲ್ (ಕೊಳಚೆ ನೀರು ಹೋಗಲು ಪ್ರತ್ಯೇಕ ಮಾರ್ಗ) ನಿರ್ಮಿಸಲಾಗಿದೆ. ಇದರಿಂದ ಎರಡು ಕೆರೆಯ ಸುತ್ತ-ಮುತ್ತಲಿನ ಅಪಾರ್ಟ್‌ಮೆಂಟ್‌ಗಳ ಮಲೀನ ನೀರು, ಕೈಗಾರಿಕೆ ಹಾಗೂ ಕಟ್ಟಡಗಳ ಕಲುಷಿತ ನೀರು ಸೇರುವುದು ಬಹುತೇಕ ಕಡಿಮೆಯಾಗಿದೆ.ಆದರೆ, ಕೆರೆಗಳ ಸುತ್ತ ದುರ್ವಾಸನೆ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ. ಪಾಲಿಕೆಯ ರಾಜಕಾಲುವೆ ಮಾರ್ಗಗಳೂ ಇನ್ನೂ ಶುದ್ಧವಾಗಿಲ್ಲ.
ಎರಡು ಕೆರೆಗಳ ಪುನರುಜ್ಜೀವನಗೊಳಿಸಲು ವಿವಿಧ ಇಲಾಖೆಗಳು ಸ್ಪರ್ಧೆಗೆ ಇಳಿದಂತೆ ಕೆಲಸ ಮಾಡುತ್ತಿವೆ. ಬಿಡಿಎ ಹೂಳು ಎತ್ತುತ್ತಿದ್ದರೆ, ಜಲಮಂಡಳಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುತ್ತಿದೆ. ಮಣ್ಣಿನ ಫಲವತ್ತತೆ ಹಾಗೂ ಗುಣಮಟ್ಟದ ಬಗ್ಗೆ ವಿಜ್ಞಾನಿಗಳ ಸಂಶೋಧನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬೆಂ. ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್
ಎರಡು ಕೆರೆಗಳಲ್ಲಿ ಹೂಳು ತೆಗೆಯುವ ಕಾರ್ಯ ಪ್ರಗತಿ: ಕಳೆದ ಕೆಲವೇ ತಿಂಗಳ ಮುನ್ನ ನೊರೆ ಹಾಗೂ ಜೊಂಡಿನಿಂದ ತುಂಬಿ ಹೋಗಿದ್ದ ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಚಿತ್ರಣ ಬದಲಾಗುತ್ತಿದೆ. ಬಿಡಿಎ ಮೊದಲ ಹಂತದಲ್ಲಿ ಬೆಳ್ಳಂದೂರು ಕೆರೆಯ 158 ಎಕರೆ ವ್ಯಾಪ್ತಿಯಲ್ಲಿ ಹಾಗೂ ವರ್ತೂರು ಕೆರೆಯ 100 ಎಕರೆ ವ್ಯಾಪ್ತಿಯಲ್ಲಿ ಒಂದು ಮೀ. ಆಳದವರೆಗೆ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದೆ. ಈ ಎರಡು ಕೆರೆಯಿಂದ ತೆಗೆಯಲಾದ ಹಾಗೂ ಮರು ಬಳಕೆಗೆ ಯೋಗ್ಯವಲ್ಲದ ಹೂಳು ಮತ್ತು ಮಣ್ಣನ್ನು ಕೆರೆಯಿಂದ ಅಂದಾಜು 16 ಕಿ.ಮೀ. ದೂರದಲ್ಲಿರುವ ವಿಟ್ಲಸಂದ್ರ ಹಾಗೂ ಮೈಲ ಸಂದ್ರ ಹಳ್ಳಿಯ ಕ್ವಾರಿಗಳಲ್ಲಿ ಸುರಿಯಲು ಬಿಡಿಎ ಮುಂದಾಗಿದ್ದು, ಇದಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಕೋರಿದೆ.
ನಿದ್ದೆಗೆಡಿಸಿದ ಪುನಶ್ಚೇತನ ಕಾರ್ಯ: ಈ ಎರಡು ಕೆರೆಗಳನ್ನು ಹೊರಗಿನವರು ಹಾಗೂ ಸ್ಥಳೀಯರು ನೋಡುವ ದೃಷ್ಟಿಕೋನ ಬೇರೆ. ಕೆರೆ ಪುನಶ್ಚೇತನ ಆಗುತ್ತಿದ್ದಂತೆ ಇನ್ನು ಮುಂದೆ ನಮಗೆ ಹುಲ್ಲು ಸಿಗುವುದಿಲ್ಲವೇ ಎಂಬ ಪ್ರಶ್ನೆ ರೈತ ರದ್ದಾದರೆ, ಅಳಿದುಳಿದ ನೀರು ಇರುವ ಜಾಗದಲ್ಲಿ ಇಲ್ಲಿನ ಜನ ಮೀನು ಹಿಡಿಯುತ್ತಿದ್ದಾರೆ. ಹಸುಗಳಿಗೆ ಹುಲ್ಲು (ಮೇವು) ಸಾಗಾಣಿಕೆ ಆಗುತ್ತಿದೆ. ವರ್ತೂರು ಕೆರೆಯ ಮಣ್ಣು ಹಾಗೂ ಹೂಳು ಫಲವತ್ತಾಗಿರು ವುದು ಭಾರ ತೀಯ ವಿಜ್ಞಾನ ಸಂಸ್ಥೆಯ ಸಂಶೋಧನೆಯಲ್ಲಿ ಸಾಬೀತಾಗಿದ್ದು, ರೈತರ ಮಟ್ಟಿಗೆ ಈ ಕೆರೆಗಳು ಇಂದಿಗೂ ಕಾಮಧೇನು ಆಗಿದೆ. “ಕೆರೆ ಹೂಳು ತೆಗೆದ ಮೇಲೆ ರಾಸುಗಳಿಗೆ ಹುಲ್ಲು ಎಲ್ಲಿ ಹುಡುಕುವುದು ಎಂಬ ಚಿಂತೆ ಶುರುವಾಗಿದೆ. ಹಸುಗಳಿಗೆ ಹುಲ್ಲು ಹಾಕುವುದಕ್ಕೆ ಜಾಗ ಬಿಟ್ಟರೆ ಅನುಕೂಲವಾಗಲಿದೆ’ ಎಂದು ಸ್ಥಳೀಯ ರೈತ ವೆಂಕಟ್ಟಪ್ಪ ಅಲವತ್ತುಕೊಳ್ಳುತ್ತಾರೆ.
ಇದನ್ನೂ ಓದಿ: ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!
ಜಲಮಂಡಳಿಯಿಂದ ಎಸ್‌ಟಿಪಿ: ಎರಡು ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆ ಹಿಡಿಯುವ ಉದ್ದೇಶದಿಂದ ಎರಡು ಕೆರೆಗಳ ವ್ಯಾಪ್ತಿಯಲ್ಲಿ ಜಲಮಂಡಳಿ ಕೊಳಚೆ ನೀರು ಶುದ್ಧೀ ಕರಣ ಘಟಕ ನಿರ್ಮಾಣ ಮಾಡುತ್ತಿದೆ. ಬೆಳ್ಳಂದೂರು ಕೆರೆ ವ್ಯಾಪ್ತಿಯಲ್ಲಿ 90ಎಂಎ ಲ್‌ಡಿ, 60,30 ಹಾಗೂ 218 ಎಂಎಲ್‌ಡಿ ಕೊಳಚೆ ನೀರು ಶುದ್ಧೀಕರಣ ಘಟಕ ಇದೆ. ಹೆಚ್ಚುವರಿ ಕೊಳಚೆ ನೀರು ಶುದ್ಧೀಕರಣಕ್ಕೆ 100ಎಂಎಲ್‌ಡಿ ಸಾಮರ್ಥ್ಯದ ಮತ್ತೂಂದು ಎಸ್ ಟಿಪಿ ನಿರ್ಮಾಣವಾಗಬೇಕಿದ್ದು, ಮಾರ್ಚ್ ವೇಳೆಗೆ ಮತ್ತೂಂದು ಎಸ್ ಟಿಪಿ ಸ್ಥಾಪನೆ ಕಾರ್ಯ ಮುಗಿಯಲಿದೆ ಎಂದು ಜಲಮಂಡಳಿ ನಿರ್ವ ಹಣೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎನ್.ಗಂಗಾಧರ್ ತಿಳಿಸಿದರು.
ಇನ್ನು ವರ್ತೂರು ಕೆರೆ ವ್ಯಾಪ್ತಿಯಲ್ಲಿ ಸಹ 124 ಎಂಎ ಲ್‌ಡಿ ಸಾಮರ್ಥ್ಯ ಒಟ್ಟು 14 ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ನಿರ್ಮಿಸಲು ಉದ್ದೇಶಿಸಲಾಗಿದೆ. ಇದರ ಹೊಣೆ ಜೈಕಾಗೆ ನೀಡಲಾಗಿದೆ. ಘಟಕ ನಿರ್ಮಾಣದೊಂದಿಗೆ ಒಳ ಚರಂಡಿ ಮತ್ತು ಕೊಳಚೆ ನೀರು ಎಸ್‌ಟಿಪಿ ಸೇರುವಂತೆ ಮಾಡಲು ಹಾಗೂ 110 ಹಳ್ಳಿಗಳ ಒಳಚರಂಡಿ ನೀರು ಎಸ್‌ಟಿಪಿಗೆ ಸಂಪರ್ಕ ಕಲ್ಪಿಸುವುದಕ್ಕೆ 800 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಭಿಯಾನ: ಬೆಳ್ಳಂದೂರು ಕೆರೆಗೆ ಕೊಳಚೆ ನೀರು ಬಿಡುವವರ ಮೇಲೆ ಕಠಿಣ ಕ್ರಮಕೈಗೊಳ್ಳಲು ಬೆಸ್ಕಾಂ ಹಾಗೂ ಜಲಮಂಡಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ನಿರ್ದೇಶನ ನೀಡಿದೆ. ಕೆರೆಗೆ ಕೊಳಚೆ ನೀರು ಬಿಡುತ್ತಿದ್ದ ಆರೋ ಪದ ಮೇಲೆ 538 ಕಟ್ಟಡಗಳಿಗೆ ನೋಟಿಸ್ ನೀಡಲಾಗಿತ್ತು. ಇದರಲ್ಲಿ 186 ಕಟ್ಟಡಗಳ ಮಾಲೀಕರು ಮುಂದೆ ಬಂದು ಜಲಮಂಡಳಿಯ ಸಂಪರ್ಕ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳ್ಳಂದೂರು ಕೆರೆಗೆ ಕೊಳಚೆ ನೀರು ಬಿಟ್ಟರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಕಾರ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.
ಕೆರೆಯ ಹೂಳು, ಮಣ್ಣು ರೈತರಿಗೆ: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವರ್ತೂರು ಕೆರೆಯಲ್ಲಿ ರುವ ಮಣ್ಣನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಸಾರಜನಕ ಹಾಗೂ ರಂಜಕ ಉತ್ತಮ ಪ್ರಮಾಣದಲ್ಲಿ ಇದೆ ಎನ್ನುವುದು ಸಾಬೀತಾಗಿದೆ. ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಭಾರ ತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ, ವರ್ತೂರು ಕೆರೆಯ ಮಣ್ಣನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು, ಇದರಲ್ಲಿ (ಮ್ಯಾಕ್ರೋ ನ್ಯೂಟ್ರಿಯೆಂಟ್) ಫಲವತ್ತತೆ ಇರುವುದು ಸಾಬೀತಾಗಿದೆ. ಕೆರೆಯ ಮಣ್ಣಲ್ಲಿ ಭಾರೀ ಲೋಹದ ಅಂಶ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯೂ ಸಂಶೋಧನೆಯಲ್ಲೂ ಸಾಬೀತಾಗಿದೆ. ಆನೇ ಕಲ್, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಪೂರ್ವ ತಾಲೂಕಿನ ಭಾಗದ ಮಣ್ಣಿನಲ್ಲಿ ಸತ್ವ ಕಡಿಮೆ ಇರುವುದರಿಂದ ವರ್ತೂರು ಕೆರೆಯ ಮಣ್ಣನ್ನು ಬಳಸಬಹುದು ಎಂದು ಸಲಹೆ ನೀಡಲಾಗಿದೆ. ವರ್ತೂರು ಕೆರೆ ವ್ಯಾಪ್ತಿಯ ಮಣ್ಣು ಹಾಗೂ ಹೂಳು ಬಳಸಲು ಯೋಗ್ಯವಾಗಿದೆ. ಬೆಳ್ಳಂದೂರು ಕೆರೆಯ ಮಣ್ಣಿನ ಫಲವತ್ತತೆಯ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು
ಬೆಳ್ಳಂದೂರು, ವರ್ತೂರು ಮತ್ತು ಕಿತ್ತಗಾನಹಳ್ಳಿ ಕೆರೆ ವ್ಯಾಪ್ತಿಯಲ್ಲಿ ಕೆರೆಗಳಿಗೆ ಕಲುಷಿತ ನೀರು ಬಿಡು ವವರಿಗೆ ನೋಟಿಸ್ ಹಾಗೂ ಕ್ಲೋಸಿಂಗ್ ಆರ್ಡರ್ (ಪರವಾನಗಿ ರದ್ದು) ಮಾಡುವ ನೋಟಿಸ್‌ಗಳನ್ನು ನೀಡುತ್ತಿದ್ದೇವೆ.
ಶ್ರೀನಿವಾಸುಲು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ
ಎನ್‌ಜಿಟಿ ಹಾಗೂ ಸಲಹಾ ಸಮಿತಿ ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ನು ಪಾಲಿಸುತ್ತಿದ್ದೇವೆ. ಕೆರೆ ಮಣ್ಣನ್ನು ಸೈನಿಕರ ತರಬೇತಿ ಕೇಂದ್ರ ವ್ಯಾಪ್ತಿಯಲ್ಲಿ ಸಸಿಗಳ ಗೊಬ್ಬರವಾಗಿ ಕೇಳಿದ್ದಾರೆ. ಇನ್ನಷ್ಟೇ ಇದು ಅಂತಿಮವಾಗಬೇಕಿದೆ.
ಡಾ. ಎಚ್.ಆರ್.ಮಹದೇವ್, ಬಿಡಿಎ ಆಯುಕ್ತ
ಬೆಳ್ಳಂದೂರು ಕೆರೆಯಲ್ಲಿ ಹೂಳು ತೆಗೆಯುವುದು ಹಾಗೂ ಪುನಶ್ಚೇತನದ ಕೆಲಸಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. 40 ವರ್ಷದ ಹಿಂದಿನ ಚಿತ್ರಣ ಬರಬೇಕಾದರೆ ವರ್ಷಗಳೇ ಬೇಕು.
ಎಂ.ಎ ಖಾನ್, ಬೆಳ್ಳಂದೂರು ಸ್ಥಳೀಯ ನಿವಾಸಿ
ಹಿತೇಶ್ ವೈ