Advertisement

ಉದಯವಾಣಿ ವಿಶೇಷ : ತಿಂಗಳಲ್ಲಿ ಹಿರಿಯಡಕ ಜೈಲಿಗೆ ಕೈದಿಗಳು ವಾಪಸ್‌

03:30 AM Jul 05, 2018 | Karthik A |

ಉಡುಪಿ: ಹಿರಿಯಡಕದಲ್ಲಿರುವ ಜಿಲ್ಲಾ ಕಾರಾಗೃಹದ ದುರಸ್ತಿ ಕಾಮಗಾರಿ ಮುಗಿಯುತ್ತ ಬಂದಿದ್ದು, ಕಾರವಾರ ಜೈಲಿಗೆ ಸ್ಥಳಾಂತರಗೊಂಡಿದ್ದ ಕೈದಿಗಳು ಸದ್ಯದಲ್ಲೇ ಮರಳಲಿದ್ದಾರೆ. ಪೊಲೀಸ್‌ ಗೃಹ ನಿಗಮ ನಿರ್ಮಿಸಿದ ಈ ಕಟ್ಟಡ ಉದ್ಘಾಟನೆಗೊಂಡು ಹತ್ತೇ ವರ್ಷಗಳಲ್ಲಿ ಸೋರುವ ಸ್ಥಿತಿಗೆ ತಲುಪಿತ್ತು. ಈಗ ಲೋಕೋಪಯೋಗಿ ಇಲಾಖೆ ಸುಪರ್ದಿಯಲ್ಲಿ ದುರಸ್ತಿ ಮಾಡಲಾಗುತ್ತಿದೆ. ಮೇಲ್ಭಾಗದಲ್ಲಿ ತಗಡಿನ ಮಾಡು ರಚಿಸಲಾಗಿದೆ.

Advertisement

2009ರಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ಕಾರಾಗೃಹವನ್ನು ನಿರ್ಮಿಸ ಲಾಗಿತ್ತು. ಈಗ 65 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಇದರಲ್ಲಿ 10 ಲಕ್ಷ ರೂ. ವಿದ್ಯುದೀಕರಣಕ್ಕಾಗಿ ಮೀಸಲು. ಸ್ನಾನ ಗೃಹಗಳಿಗೆ ಹೊಸ ಟೈಲ್ಸ್‌ ಹಾಕಲಾಗಿದೆ. ಪ್ಲಂಬಿಂಗ್‌, ನೀರು ಪೂರೈಕೆ, ಶೌಚಾಲಯ, ಅಡುಗೆ ಕೋಣೆ, ಸುಣ್ಣಬಣ್ಣ, ಕುಸಿದ ಗೋಡೆಯ ದುರಸ್ತಿ ಮಾಡಲಾಗಿದೆ. ಇದೆಲ್ಲವೂ ಸಂಪೂರ್ಣ ಹಾಳಾಗಿತ್ತು. ಶೌಚಾಲಯಗಳ ಗೋಡೆಗಳನ್ನು ಸುರಕ್ಷೆ ದೃಷ್ಟಿಯಿಂದ ಅರ್ಧ ತೆಗೆದು ಹಾಕಲಾಗಿದೆ. ಒಳಗಿನಿಂದ ಹೊರಹೋಗುವ ತ್ಯಾಜ್ಯ ನೀರು ಹರಿದು ಹೋಗಲು ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸ ಕಟ್ಟಡಗಳು
ಮುಖ್ಯ ಕಟ್ಟಡದ ಹೊರಭಾಗ ಸಂದರ್ಶಕರಿಗೆ ಕೊಠಡಿ ಮತ್ತು ವಾಹನಗಳನ್ನು ನಿಲ್ಲಿಸಲು ಕಟ್ಟಡ ನಿರ್ಮಿಸಲಾಗುತ್ತಿದೆ. ಇದನ್ನು ಪ್ರತ್ಯೇಕ 20 ಲ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇವೆರಡೂ ಕಟ್ಟಡಗಳ ಒಟ್ಟು ವಿಸ್ತೀರ್ಣ 36 ಚ.ಮೀ. (388 ಚ.ಅಡಿ) ವಾಹನ ನಿಲುಗಡೆ ಕಟ್ಟಡಕ್ಕೆ ಶೀಟುಗಳನ್ನು, ಸಂದರ್ಶಕರ ಕೊಠಡಿಗೆ ಸ್ಲ್ಯಾಬ್‌ ಹಾಕಲಾಗುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಬಿಟ್ಟುಕೊಡುವ ಸಾಧ್ಯತೆ ಇದೆ. ಈಗಾಗಲೇ ಇದ್ದ ಸೌರ ವಿದ್ಯುತ್‌ ಪಾನೆಲ್‌ ಮೇಲೆ ಈಗ ತಗಡಿನ ರೂಫ್ಟಾಪ್‌ ನಿರ್ಮಿಸಿರುವ ಕಾರಣ ಪಾನೆಲ್‌ ನ್ನು ಕಟ್ಟಡದ ಹೊರಭಾಗದಲ್ಲಿ ಜೋಡಿಸಲಾಗುತ್ತದೆ. ಕಾರಾಗೃಹದ ಒಟ್ಟು ವಿಸ್ತೀರ್ಣ 15 ಎಕ್ರೆ. ಇದರಲ್ಲಿ ನಾಲ್ಕು ಎಕ್ರೆ ಜಾಗದಲ್ಲಿ ಜೈಲು ನಿರ್ಮಿಸಿ 2009ರಲ್ಲಿ ಉದ್ಘಾಟಿಸಲಾಗಿತ್ತು.

ನಮ್ಮ ಎಲ್ಲ ಕೆಲಸಗಳು ಮುಗಿಯುತ್ತ ಬಂದಿದೆ. ಜುಲೈ ಕೊನೆಯೊಳಗೆ ಬಿಟ್ಟುಕೊಡಲಿದ್ದೇವೆ. 
– ಸೋಮನಾಥ, ಕಿ. ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಉಡುಪಿ ಉಪವಿಭಾಗ.

ಲೋಕೋಪಯೋಗಿ ಇಲಾಖೆ ಬಿಟ್ಟುಕೊಟ್ಟ ಒಂದೇ ವಾರದಲ್ಲಿ ಜೈಲುವಾಸಿಗಳನ್ನು ಸ್ಥಳಾಂತರಿಸುತ್ತೇವೆ. ಜನವರಿಯಲ್ಲಿ 91 ಕೈದಿಗಳನ್ನು ಕಾರವಾರ ಜೈಲಿಗೆ ಸ್ಥಳಾಂತರಿಸಿದ್ದೆವು. ಕೆಲವರು ಬಿಡುಗಡೆ ಹೊಂದಿದ್ದಾರೆ. ಇನ್ನು ಕೆಲವರು ಸೇರಿದ್ದಾರೆ. 75 ಕೈದಿಗಳು ಸ್ಥಳಾಂತರವಾಗಬಹುದು. 
– ಈರಣ್ಣ, ಜೈಲು ಅಧೀಕ್ಷಕರು, ಕಾರವಾರ ಮತ್ತು ಉಡುಪಿ ಕಾರಾಗೃಹ

Advertisement

— ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next