Advertisement

ಉದ್ಘಾಟನೆಗೆ ಸಜ್ಜಾಗಿದೆ ನವೀಕೃತ ಈಜುಕೊಳ

10:28 AM Dec 16, 2019 | Suhan S |

ಹುಬ್ಬಳ್ಳಿ: ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿದ್ದ ಬಸವ ವನ ಬಳಿಯಿರುವ ಪಾಲಿಕೆಯ ಈಜುಕೊಳವೀಗ ನವೀಕೃತಗೊಂಡು ಉದ್ಘಾಟನೆಗೆ ಸಜ್ಜಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಈಜುಕೊಳ ನವೀಕರಣಗೊಂಡಿದೆ. ನಿರ್ವಹಣೆ ಸಮಸ್ಯೆಯಿಂದಾಗಿ ಹಲವು ಬಾರಿ ಬಂದ್‌ ಮಾಡಲಾಗುತ್ತಿದ್ದ ಈಜುಕೊಳವನ್ನು ಸರ್ವಸನ್ನದ್ಧಗೊಳಿಸಿ ಮತ್ತೆ ಸೇವೆಗೆ ಮುಕ್ತಗೊಳಿಸಬೇಕೆಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಈಜುಪಟುಗಳು ಖಾಸಗಿ ಈಜುಕೊಳವನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು.

Advertisement

ಈಜುಕೊಳವನ್ನು 3.14 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಫಿಲ್ಟರ್‌ ಕಾರಣದಿಂದಾಗಿಯೇ ಈಜುಕೊಳವನ್ನು ಬಂದ್‌ ಮಾಡಲಾಗುತ್ತಿತ್ತು. ಇದೀಗ ದುಬೈನಿಂದ ಆಮದು ಮಾಡಿಕೊಳ್ಳಲಾದ 45 ಲಕ್ಷ ರೂ. ವೆಚ್ಚದ ಫಿಲ್ಟರ್‌ ವ್ಯವಸ್ಥೆ ಅಳವಡಿಸಲಾಗಿದ್ದು, ಒಟ್ಟು 4 ಫಿಲ್ಟರ್‌ ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ. ಹಿಂದಿನ ಟ್ಯಾಂಕ್‌ಗಳಲ್ಲಿ ರಸ್ಟ್‌ನಿಂದಾಗಿ ಸಮಸ್ಯೆ ಆಗುತ್ತಿತ್ತು. ಈಗ ಫೈಬರ್‌ ಟ್ಯಾಂಕ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಬೋರ್‌ವೆಲ್‌ ನೀರನ್ನು ಬಳಕೆ ಮಾಡಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ. ಅಲ್ಲದೇ ನೀರಿನ ಶುದ್ಧೀಕರಣಕ್ಕಾಗಿ ವಿಶೇಷ ಮರಳು ತರಿಸಲಾಗಿದೆ. 4 ಮೋಟರ್‌ಗಳನ್ನು ಜೋಡಿಸಲಾಗಿದ್ದು, ಕೇವಲ ಒಂದು ಮೋಟರ್‌ ಕಾರ್ಯನಿರ್ವಹಿಸಿದರೂ ಈಜುಕೊಳವನ್ನು ನಡೆಸಲು ಸಾಧ್ಯವಾಗುತ್ತದೆ.

ಅಲ್ಲದೇ ಓವರ್‌ ಫ್ಲೊ ಡ್ರೇನ್‌ ವ್ಯವಸ್ಥೆ ಮಾಡಲಾಗಿದೆ. ಈಜುಕೊಳ ತುಂಬಿದ ನಂತರ ಹೆಚ್ಚಾದ ನೀರು ಹರಿದು ಸಂಗ್ರಹ ಟ್ಯಾಂಕ್‌ಗೆ ಸೇರ್ಪಡೆಗೊಳ್ಳಲಿದೆ. ಅಲ್ಲದೇ ಈಜುಕೊಳದ ಸುತ್ತಲೂ ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕಲಾಗಿದೆ. ಶಾವರ್‌ ಗಳನ್ನು ನವೀಕರಿಸಲಾಗಿದೆ. ಪಾಥ್‌ ವೇ ಹೊಸದಾಗಿ ನಿರ್ಮಿಸಲಾಗಿದೆ. ಒದ್ದೆಗಾಲಿನಿಂದ ನಡೆಯಲು ಅನುಕೂಲವಾಗುವಂತಹ ಟೈಲ್ಸ್‌ಗಳನ್ನು ಜೋಡಿಸಲಾಗಿದೆ.

ಮ್ಯಾನುವಲ್‌ ಅಲ್ಲ ಆಟೋಮ್ಯಾಟಿಕ್‌: ಇಂಗ್ಲಿಷ್‌ “ಎಲ್‌’ ಆಕಾರದ ಅಂತಾರಾಷ್ಟ್ರೀಯ ಮಟ್ಟದ ಡೈವಿಂಗ್‌ ಪೂಲ್‌ ಹೊಂದಿರುವ ಈಜುಕೊಳ ನವೀಕೃತಗೊಂಡು ಸೇವೆಗೆ ಸಜ್ಜಾಗಿದೆ. ನೀರು ಪೂರೈಕೆ ವ್ಯವಸ್ಥೆ ಅಟೋಮೆಟಿಕ್‌ ಆಗಿರುವುದರಿಂದ ಕಡಿಮೆ ಸಿಬ್ಬಂದಿ ಇದರ ನಿರ್ವಹಣೆ ಮಾಡಬಹುದಾಗಿದೆ. ಬಳಕೆಯಾದ ನೀರನ್ನು ಪುನರ್ಬಳಕೆಗೆ ಪೂರೈಸುವ ವ್ಯವಸ್ಥೆ ಸುಧಾರಿತವಾಗಿದೆ. ಮ್ಯಾನುವಲ್‌ ವ್ಯವಸ್ಥೆ ಹೋಗಿ ಅಟೋಮ್ಯಾಟಿಕ್‌ ರೀತಿಯಲ್ಲಿ ನೀರು ಸಂಗ್ರಹ ಟ್ಯಾಂಕಿಗೆ ಹೋಗಿ ಫಿಲ್ಟರ್‌ ಮೂಲಕ ಈಜುಕೊಳಕ್ಕೆ ಬರುತ್ತದೆ.

ಖಾಸಗಿ ಕೊಳಕ್ಕಿಂತ ಕಮ್ಮಿ ಇಲ್ಲ:  ಮಂಗಳೂರಿನ ಮಾಸ್‌ ಕನ್‌ಸ್ಟ್ರಕ್ಷನ್‌ ಕಂಪನಿ ಈಜುಕೊಳ ನವೀಕರಿಸುವ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಪೂರ್ಣಗೊಳಿಸಿದೆ. 2019ರ ಫೆಬ್ರವರಿಯಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಖಾಸಗಿ ಈಜುಕೊಳಗಳಲ್ಲಿ ಬಳಸುವ ನೂತನ ತಂತ್ರಜ್ಞಾನದ ಫಿಲ್ಟರ್‌ ವ್ಯವಸ್ಥೆಯನ್ನೇ ಇಲ್ಲೂ ಅಳವಡಿಸಲಾಗಿದೆ. ಇದರಿಂದ ಬೋರ್‌ ನೀರು ಕೂಡ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಕ್ಲೋರಿನ್‌ ಕಡಿಮೆ ಪ್ರಮಾಣದಲ್ಲಿ ಬಳಸಬಹುದು.

Advertisement

42 ವರ್ಷ ಬಳಿಕ ನವೀಕರಣ! :  1977ರ ಜೂ. 26ರಂದು ದೇವರಾಜ ಅರಸ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಈಜುಕೊಳ ಉದ್ಘಾಟಿಸಲಾಗಿತ್ತು. ಆಗ ಪೌರಾಡಳಿತ ಸಚಿವರಾಗಿದ್ದ ಡಿ.ಕೆ. ನಾಯ್ಕರ್‌ ಕೂಡ ಉಪಸ್ಥಿತರಿದ್ದರು. ನಂತರ ಸಣ್ಣ ಪ್ರಮಾಣದಲ್ಲಿ ಇದರ ದುರಸ್ತಿ ಕಾರ್ಯ ನಡೆದಿತ್ತಷ್ಟೆ. 42 ವರ್ಷಗಳ ನಂತರ ಈಗ ಸ್ಮಾರ್ಟ್‌ಸಿಟಿ ಯೋಜನೆಯಡಿ ನವೀಕರಣ ಕಾರ್ಯ ಮಾಡಲಾಗಿದೆ. ಅಂದು 15.6 ಲಕ್ಷ ರೂ.ಗಳಲ್ಲಿ ನಿರ್ಮಿಸಲಾಗಿದ್ದ ಈಜುಕೊಳ 6 ಲಕ್ಷ ಗ್ಯಾಲನ್‌ ಸಾಮರ್ಥ್ಯ ಹೊಂದಿದೆ. 1272 ಚಮೀ ವ್ಯಾಪ್ತಿ ಹೊಂದಿದೆ. 1 ಮೀಟರ್‌ ಆಳದಿಂದ 4.83 ಮೀಟರ್‌ ವರೆಗೆ ಆಳ ಹೊಂದಿದೆ. ಹಲವು ವರ್ಷಗಳಿಂದ ಈಜುಕೊಳದಲ್ಲಿ ಸೋರಿಕೆಯಾಗುತ್ತಿತ್ತು. ಈಗ ಸೋರಿಕೆ ಸಮಸ್ಯೆ ನಿವಾರಿಸಲಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಈಜುಕೊಳ ನವೀಕರಿಸಿರುವುದು ಸಂತಸದ ಸಂಗತಿ. ಈಜಿನಲ್ಲಿ ಸಾಧನೆ ಮಾಡಬೇಕೆನ್ನುವ ನನ್ನಂಥ ಅನೇಕ ಪಟುಗಳಿಗೆ ಖಾಸಗಿ ಈಜುಕೊಳವನ್ನು ಬಳಕೆ ಮಾಡುವುದು ದುಸ್ತರವಾಗಿದೆ. ಈಜು ಅಭ್ಯಾಸಕ್ಕಾಗಿ ಹೆಚ್ಚು ಹಣ ವ್ಯಯಿಸುವುದು ಕಷ್ಟಕರ. ಸಾಧ್ಯವಾದಷ್ಟು ಬೇಗನೇ ಇದನ್ನು ಬಳಕೆಗೆ ಮುಕ್ತಗೊಳಿಸಬೇಕು. –ರಮೇಶ ಹಿರೇಗೌಡರ, ಯುವ ಈಜುಪಟು

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next