Advertisement

ರೆಂಜಿಲಾಡಿ: ಆನೆ ಹಾವಳಿಗೆ ಸಿಕ್ಕಿಲ್ಲ ಶಾಶ್ವತ ಪರಿಹಾರ

12:29 PM Feb 20, 2024 | Team Udayavani |

ಸುಬ್ರಹ್ಮಣ್ಯ: ಅಂದು ಬೆಳಗ್ಗೆ ಜನತೆಯ ಕಿವಿಗೆ ಬಿದ್ದ ಸುದ್ದಿಯೊಂದು ಎಲ್ಲೆಡೆ ಸಂಚಲನ ಮೂಡಿಸಿತ್ತು, ಬೇಸರದ ಜತೆಗೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿ ಘಟನ ಸ್ಥಳದಲ್ಲಿ ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರು.

Advertisement

ರೆಂಜಿಲಾಡಿ ಗ್ರಾಮದಲ್ಲಿ 2023ರ ಫೆ.20ರಂದು ಬೆಳ್ಳಂ ಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾಗಿದ್ದರು. ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲದಲ್ಲಿ ಅಂದು ಬೆಳಗ್ಗೆ 6.15ರ ವೇಳೆಗೆ ಘಟನೆ ಸಂಭವಿಸಿತ್ತು. ಸ್ಥಳೀಯರಾದ ರಾಜೀವ ಹಾಗೂ ಸುಂದರಿ ದಂಪತಿ ಪುತ್ರಿ ರೆಂಜಿಲಾಡಿ ಹಾಲು ಸೊಸೈಟಿ ಉದ್ಯೋಗಿ ರಂಜಿತಾ (24) ಹಾಗೂ ರಮೇಶ್‌ ರೈ (58) ಕಾಡಾನೆ ದಾಳಿಗೆ ಮೃತರಾಗಿದ್ದರು.

ಹಾಲು ಸೊಸೈಟಿಗೆ ತೆರಳುತ್ತಿದ್ದ ಯುವತಿಯ ಮೇಲೆ ಕಾಡಾನೆ ದಾಳಿ ನಡೆಸಿದ ವೇಳೆ ಆಕೆಯ ಬೊಬ್ಬೆ ಕೇಳಿ ಅಕೆಯ ರಕ್ಷಣೆಗೆ ಧಾವಿಸಿದ ರಮೇಶ ಆವರ ಮೇಲೂ ಕಾಡಾನೆ ದಾಳಿ ನಡೆಸಿ ದುರ್ಘ‌ಟನೆ ಸಂಭವಿಸಿತ್ತು. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಲೇ ಸ್ಥಳದಲ್ಲಿ ಜಮಾಯಿಸಿದ ಸಾವಿರಾರು ಜನರು ನಿರಂತರ ನಡೆಯುತ್ತಿರುವ ಕಾಡಾನೆ ದಾಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು ಹಿಡಿದಿದ್ದರು.

ಸ್ಥಳಕ್ಕೆ ಜಿಲ್ಲಾಧಿಕಾರಿ, ಡಿಸಿಎಫ್‌, ಸಚಿವರು ಭೇಟಿ ನೀಡಿದ್ದರು. ಜನರ ಅಹವಾಲು ಆಲಿಸಿದ್ದ ಅಧಿಕಾರಿಗಳು ಮರು ದಿನದಿಂದಲೇ ಐದು  ಸಾಕಾನೆಗಳನ್ನು ಶಿಬಿರದಿಂದ ಕರೆಸಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಮೂರನೇ ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಕೊಂಬಾರು ಸಮೀಪ ಸೆರೆ ಹಿಡಿದು ಶಿಬಿರಕ್ಕೆ ಕಳುಹಿಸಲಾಗಿತ್ತು. ಘಟನೆ ನಡೆದ ಪ್ರದೇಶದ ಸಮೀಪ ಅರಣ್ಯ ಇಲಾಖೆ ವತಿಯಿಂದ ಕೆಲವು ಕಡೆ ತಡೆಬೇಲಿ ನಿರ್ಮಾಣ ಕೆಲಸ ಮಾಡಲಾಗಿದೆ. ಆದರೂ ಇಂದಿಗೂ ಆ ಭಾಗದಲ್ಲಿ ಕಾಡಾನೆ ಉಪಟಳ ಮುಂದುವರೆದಿದೆ.

ಒಂದೇ ಆನೆ ಸೆರೆ ಹಿಡಿದ ತಂಡ
ಘಟನೆ ನಡೆದ ದಿನ ಸೇರಿದ್ದ ಜನರು ಹಾಗೂ ರಾಜಕೀಯ ನಾಯಕರು ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಎಲ್ಲ ಕಾಡಾನೆಗಳನ್ನು ಸೆರೆ ಹಿಡಿದು ಸಾಗಿಸುವಂತೆ ಆಗ್ರಹಿಸಿದ್ದರು. ಅದಕ್ಕೆ ಅಧಿಕಾರಿಗಳೂ ಭರವಸೆ ನೀಡಿದ್ದರು. ಆದರೆ ಬಳಿಕದಲ್ಲಿ ಒಂದು ಆನೆಯನ್ನು ಸೆರೆ ಹಿಡಿದು ಕಾರ್ಯಾಚರಣೆಯ ತಂಡ ಕಡಬ ಭಾಗದಿಂದ ತೆರಳಿತ್ತು. ಈ ಬಗ್ಗೆ ಸಾರ್ವಜನಿಕರು
ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಈ ಮಧ್ಯೆ ಸೆರೆ ಹಿಡಿಯಲಾಗಿದ್ದ ಕಾಡಾನೆ ಶಿಬಿರಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಹಿಡಿದ ಆನೆ ಆಗಿದ್ದರಿಂದ ಅದಕ್ಕೆ ಸುಬ್ರಮಣಿ ಎಂದು ಹೆಸರನ್ನೂ ಇಡಲಾಗಿತ್ತು. ಇತ್ತ ಮೃತ ಕುಟುಂಬಗಳಿಗೆ ಸರಕಾರದ ಪರಿಹಾರಗಳನ್ನು ನೀಡಿದೆ.

Advertisement

ಕಾಡಾನೆ ಲಗ್ಗೆ ನಿಂತಿಲ್ಲ;
ಕಡಬ ಸೇರಿದಂತೆ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕಿನ ವಿವಿಧೆಡೆ ಕಾಡಾನೆಗಳು ಕೃಷಿ ತೋಟಕ್ಕೆ ಲಗ್ಗೆ ಇಡುವುದು ಇನ್ನೂ ನಿಂತಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಅದೆಷ್ಟೋ ಕೃಷಿಕರು ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ಜನರು ಕೂಡ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಕಾಡಾನೆ ದಾಳಿಯಿಂದ ಹಾನಿ ಸಂಭವಿಸಿದ ಸ್ಥಳಕ್ಕೆ ಆಗಮಿಸುವ ಅಧಿಕಾರಿಗಳು ಪರಿಶೀಲಿಸುತ್ತಾರೆ. ಆದರೆ ಈ ಭಾಗದ ಜನರ ಬೇಡಿಕೆಯಂತೆ ಕಾಡಾನೆ ಲಗ್ಗೆ ತಡೆಯಲು ಶಾಶ್ವತ ಪರಿಹಾರದ ಕೆಲಸ ಇನ್ನೂ ನಡೆದಿಲ್ಲ ಎಂಬುದು ನಾಗರಿಕರ ಮಾತು. ಇನ್ನಾದರೂ ಈ ಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಾಮಗಾರಿಗಳು ನಡೆಯಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಾಟ್ಸ್‌ ಆ್ಯಪ್‌ ಗ್ರೂಪ್‌ ರಚನೆ
ಪ್ರಸ್ತುತ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ವ್ಯಾಪ್ತಿ ಸೆರಿದಂತೆ ಕೆಲವೆಡೆ ಅರಣ್ಯ ಇಲಾಖೆಯಿಂದ ಗಸ್ತು ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಪಾಳಿಗೂ ಸಿಬಂದಿ ನೇಮಿಸಿ ಕಾಡಾನೆ ಇರುವಿಕೆಯ ಮಾಹಿತಿ ಬಂದಲ್ಲಿಗೆ ತೆರಳಿ ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ  ಮಾಡಲಾಗುತ್ತದೆ. ಇದಕ್ಕಾಗಿಯೇ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗಿದೆ.

ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತಿದೆ
ಕಳೆದ ವರ್ಷ ಇಬ್ಬರನ್ನು ಬಲಿ ಪಡೆ ದಿದ್ದ ಕಾಡಾನೆಯನ್ನು ಅಂದೇ ಸೆರೆ ಹಿಡಿಯ ಲಾಗಿತ್ತು. ಬಳಿಕ ಅಲ್ಲಿ ಆ ರೀತಿಯ ಕಾಡಾನೆಗಳು ಕಂಡುಬಂದಿಲ್ಲ. ಕಾಡಾನೆ ಲಗ್ಗೆ ಇಡುತ್ತಿರುವ ಕಡೆಗಳಲ್ಲಿ ಸೋಲಾರ್‌ ಬೇಲಿ ಅಳವಡಿಸಲಾಗಿದೆ. ಜತೆಗೆ ಕಾಡಾನೆ ಹಾವಳಿ ಜಾಸ್ತಿ ಇರುವ ಭಾಗದಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ ಇಲಾಖೆಯ ಗಸ್ತು ತಂಡಕ್ಕೆ ಮಾಹಿತಿ ನೀಡಿ, ಕಾಡಾನೆ ಅಟ್ಟಿಸುವ ಕೆಲಸವನ್ನು ಮಾಡಿ ಜನರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.
ವಿಮಲ್‌ ಬಾಲು, ವಲಯ
ಅರಣ್ಯಾಧಿಕಾರಿ ಸುಬ್ರಹ್ಮ,ಣ್ಯ ವಲಯ

*ದಯಾನಂದ ಕಲಾರ್‌

Advertisement

Udayavani is now on Telegram. Click here to join our channel and stay updated with the latest news.

Next