Advertisement
ರೆಂಜಿಲಾಡಿ ಗ್ರಾಮದ ನೂಜಿಬೈಲ್ ದೈವಸ್ಥಾನದ ಬಳಿಯಲ್ಲಿರುವ ತೋಡು ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಕಲ್ಲುಗುಡ್ಡೆ – ಕಡ್ಯಕೊಣಾಜೆ ಭಾಗದಿಂದ ನೂಜಿ ರೆಂಜಿಲಾಡಿ ಅಂಗನವಾಡಿ, ಶಾಲೆಗೆ ಬರುವ ವಿದ್ಯಾರ್ಥಿಗಳು, ದೈವಸ್ಥಾನಕ್ಕೆ ಬರುವ ಭಕ್ತರು ಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ತೋಡಿಗೆ ತಾತ್ಕಾಲಿಕ ಮರದ ಪಾಲ ನಿರ್ಮಾಣ ಮಾಡಲಾಗುತ್ತಿದೆ. ಮಕ್ಕಳು, ವೃದ್ಧರು ಭಯದಿಂದಲೇ ಅದರಲ್ಲಿ ಸಂಚರಿಸಬೇಕಾಗಿದೆ. ಮಳೆಗಾಲದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಹೆತ್ತವರು ಮಕ್ಕಳನ್ನು ಪಾಲ ದಾಟಿಸಬೇಕಾಗಿದೆ. ಇಲ್ಲಿ ಸೇತುವೆ ಇಲ್ಲದೇ ಇರುವುದರಿಂದ ನೂಜಿ-ರೆಂಜಿಲಾಡಿ ಶಾಲೆ ವ್ಯಾಪ್ತಿಯ ಮಕ್ಕಳು ದೂರದ ಶಾಲೆಗಳಿಗೆ ತೆರಳುತ್ತಿದ್ದು, ಮಕ್ಕಳ ಸಂಖ್ಯೆ ಕಡಿಮೆಗೊಳ್ಳುವ ಭೀತಿ ಯನ್ನು ಶಾಲಾ ಸಮಿತಿ ತೋಡಿಕೊಂಡಿದೆ.ಇಲ್ಲಿಂದ ನೂಜಿ-ರೆಂಜಿಲಾಡಿ ಅಂಗನ ವಾಡಿ, ಶಾಲೆಗೆ ಎಳುವಾಲೆ, ಮಾರಪ್ಪೆ, ಕೊಣಾಜೆ ಇತರೆಡೆಯಿಂದ ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಪ್ರಸಿದ್ಧ ನೂಜಿ ದೈವಸ್ಥಾನದ ಬಳಿ ಹರಿಯುತ್ತಿರುವ ತೋಡಿಗೆ ಸೇತುವೆ ನಿರ್ಮಿಸು ವಂತೆ ಹಲವು ವರ್ಷಗಳಿಂದ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಬೇಸಗೆ ಯಲ್ಲಿ ತೋಡಿನಲ್ಲಿ ನೀರಿನಲ್ಲದೇ ಇರುವುದರಿಂದ ತೋಡಿಗೆ ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಮಾಡಲಾಗುತ್ತದೆ. ಮಳೆಗಾಲದಲ್ಲಿ ತೊಂದರೆಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ದುರಸ್ತಿಗೊಂಡಿಲ್ಲ ರಸ್ತೆ
ಕಲ್ಲುಗುಡ್ಡೆ ಮಾವಿನಕಟ್ಟೆಯಿಂದ ರೆಂಜಿಲಾಡಿ ನೂಜಿಬೈಲ್ ದೈವಸ್ಥಾನ ರಸ್ತೆಗೆ ಡಾಮರು ಹಾಕಲಾಗಿದ್ದು, ದೈವಸ್ಥಾನದ ಬಳಿಯಿಂದ ಕಲ್ಲುಗುಡ್ಡೆ-ಕಡ್ಯಕೊಣಾಜೆ ಸಂಪರ್ಕ ರಸ್ತೆಯವರೆಗೆ ಸುಮಾರು 400 ಮೀ. ದೂರದವರೆಗಿನ ಸಾರ್ವಜನಿಕ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ನೂಜಿಬೈಲ್ ಜಾತ್ರೆಯ ಸಂದರ್ಭ ಕೆಲವೊಮ್ಮೆ ದುರಸ್ತಿಗೊಂಡರೆ, ಉಳಿದಂತೆ ಬೇಸಗೆಯಲ್ಲಿ ಧೂಳಿನಿಂದ, ಮಳೆಗಾಲದಲ್ಲಿ ಕೆಸರಿನಿಂದ ಕೂಡಿ ಸಂಚಾರ ದುಸ್ತರಗೊಂಡಿರುತ್ತದೆ.
Related Articles
ಇಲ್ಲಿ ಸೇತುವೆ ನಿರ್ಮಾಣ ಹಾಗೂ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರ ಸರಕಾರದಲ್ಲಿ ಆಗಿನ ಬಿಎಂಟಿಸಿ ಅಧ್ಯಕ್ಷ ನಾಭಿರಾಜ್ ಜೈನ್ ಅವರ ಪ್ರಯತ್ನದಿಂದ 35 ಲಕ್ಷ ರೂ. ಅನುದಾನ ಮಂಜೂರಾಗಿದ್ದರೂ, ಬಳಿಕ ಬಂದ ಸಮ್ಮಿಶ್ರ ಸರಕಾರ ಅದನ್ನು ರದ್ದುಪಡಿಸಿತ್ತು. ಪಂಚಾಯತ್ ಅನುದಾನದಿಂದ ಸೇತುವೆ ನಿರ್ಮಾಣ ಅಸಾಧ್ಯವಾಗಿರುವುದರಿಂದ, ಶೀಘ್ರದಲ್ಲಿ ಸ್ಥಳೀಯ ಪ್ರಮುಖರೊಂದಿಗೆ ನಾವು ಈ ಭಾಗದ ಶಾಸಕರ, ಸಂಸದರ ಬಳಿ ತೆರಳಿ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲು ತೀರ್ಮಾನಿಸಿದ್ದೇವೆ.
– ಸದಾನಂದ ಗೌಡ ಸಾಂತ್ಯಡ್ಕ, ಅಧ್ಯಕ್ಷರು ನೂಜಿಬಾಳ್ತಿಲ ಗ್ರಾ.ಪಂ.
Advertisement
ಶೀಘ್ರ ಸೇತುವೆ ನಿರ್ಮಾಣವಾಗಲಿನೂಜಿಬೈಲ್ ದೈವಸ್ಥಾನ ಬಳಿ ಸೇತುವೆ ಇಲ್ಲದಿರುವುದರಿಂದ ಅನೇಕರು ತಮ್ಮ ಮಕ್ಕಳನ್ನು ದೂರದ ಶಾಲೆಗಳಿಗೆ ಕಳುಹಿಸುತ್ತಿದ್ದು, ಇಲ್ಲಿ ಸೇತುವೆ ನಿರ್ಮಿಸುವಂತೆ ಗ್ರಾ.ಪಂ.ಗೆ, ಶಿಕ್ಷಣ ಇಲಾಖೆ ಯವರಿಗೂ ಹಲವು ಮನವಿ ಸಲ್ಲಿಸ ಲಾಗಿದೆ. ಆದರೆ ಇಲ್ಲಿವರೆಗೆ ಯಾವುದೇ ಸ್ಪಂದನೆ ಸಿಗದಿರುವುದು ವಿಪರ್ಯಾಸ. ಇನ್ನಾದರೂ ಶೀಘ್ರವಾಗಿ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳ ಬೇಕೆಂಬುದೇ ನಮ್ಮ ಆಗ್ರಹ.
ರವಿಪ್ರಸಾದ್ ಕರಿಂಬಿಲ, ನೂಜಿ-ರೆಂಜಿಲಾಡಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರು ದಯಾನಂದ ಕಲ್ನಾರ್