Advertisement

ರೆಂಜಾಳ ಗರಡಿಯ  ಜೀರ್ಣೋದ್ಧಾರದ ನೆರವಿಗಾಗಿ ಮನವಿ

03:46 PM Mar 26, 2017 | Team Udayavani |

ಮುಂಬಯಿ: ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಶ್ರೀ ಧರ್ಮರಸು, ಕೊಡಮಣಿತ್ತಾಯ ಹಾಗೂ ಕುಕ್ಕಿನಂತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯು ಜೀರ್ಣೋದ್ಧಾರಗೊಳ್ಳುತ್ತಿದ್ದು, ಈ ಪುಣ್ಯ ಕಾರ್ಯಕ್ಕೆ ಪರವೂರಿನ ಭಕ್ತಾದಿಗಳು ಸಹಕರಿಸುವಂತೆ ಮನವಿ ಮಾಡಲಾಗಿದೆ.

Advertisement

ರೆಂಜಾಳ ಗ್ರಾಮದಲ್ಲಿ  ಊರಿನ ಹಿರಿಯರು ಶತಮಾನಗಳಿಂದ ದೈವಿಶಕ್ತಿಗಳನ್ನು ನಂಬಿ, ನೆಲೆಗೊಳಿಸಿ, ಆರಾಧಿಸುತ್ತಾ ಬಂದಿರುವುದು ಊರಿನವರ ಭಾಗ್ಯವೇ ಸರಿ. ಪ್ರಸ್ತುತ ಊರಿನ ಮಧ್ಯ ಭಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸುತ್ತಾ ಬಂದಿರುವ ಶ್ರೀ ಕೊಡಮಣಿತ್ತಾಯ, ಶ್ರೀ ಕುಕ್ಕಿನಂತಾಯ ದೈವಗಳ ಸಾನ್ನಿಧ್ಯ ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಂಬಿ ನೆಲೆಗೊಳಿಸಿಕೊಂಡಿರುವ ಸಾನ್ನಿಧ್ಯಗಳು ಊರಿನ ಸರ್ವ ಧರ್ಮಿಯರಿಗೂ ಮುಖ್ಯ ಆರಾಧನಾ ಕೇಂದ್ರವೆನಿಸಿಕೊಂಡಿವೆ.

ನೂರಾರು ವರ್ಷಗಳ ಹಿಂದೆ ಊರನ್ನು ಪ್ರವೇಶಿಸಿದ ಈ ದೈವೀ ಶಕ್ತಿಗಳನ್ನು ಮೊದಲು ವಿವಿಧೆಡೆಗಳಲ್ಲಿ ಆರಾಧಿಸಿಕೊಂಡು ಬಂದಿದ್ದರೂ ಕೊನೆಗೆ ಸುಮಾರು 210 ವರ್ಷಗಳ ಹಿಂದೆ ಈಗಿರುವ ಹೈಪಿಲತ್ತ ಸ್ಥಾನದಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಕಾರ್ಯ ಆರಂಭವಾಯಿತು. ಮೊದಲು ಹುಲ್ಲಿನ ಗುಡಿಸಲಿನಲ್ಲಿ ದೈವಸ್ಥಾನ, ಗರಡಿಗಳನ್ನು ನಿರ್ಮಿಸಿ ಸಾನ್ನಿಧ್ಯವನ್ನು ನಂಬಿದ್ದು, ಬಳಿಕ ಸುಮಾರು 100 ವರ್ಷಗಳ ಹಿಂದೆ ಸುಂದರವಾದ ಹಂಚಿನ ಮೇಲ್ಛಾವಣಿಯುಳ್ಳ ನೆಲೆಗಳನ್ನು ನಿರ್ಮಿಸಲಾಯಿತು. ಈ ಕ್ಷೇತ್ರದಲ್ಲಿ ವರ್ಷದಲ್ಲಿ 12 ಸಂಕ್ರಾಂತಿ, ಹೊಸ ಫಲ ಹಬ್ಬ, ನಾಲ್ಕು ವಿನಿಯೋಗಗಳು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿವೆ. ಸೋಣದ ಕೋಲ, ಕಂಬಳ ಕೋರಿ, ದೊಂಪದ ಬಲಿ ಹಾಗೂ ವಾರ್ಷಿಕ ಆಯನೋತ್ಸವ ಸಾನ್ನಿಧ್ಯಗಳಿಗೆ ಸಲ್ಲುವ ಗೌರವವಾಗಿದೆ. ಈ ದೈವ ಸಾನ್ನಿಧ್ಯಕ್ಕೆ ಸಂಬಂಧಿಸಿದ ಸ್ಥಾನದ ಬಾಕ್ಯಾರು, ಶತಮಾನಗಳ ಹಿಂದೆ ಸ್ಥಾಪಿಸಲ್ಪಟ್ಟ ಪಕ್ಕದಲ್ಲಿರುವ ಶಾಲೆಯ ಮಕ್ಕಳಿಗೆ ಆಟವಾಡಲು ಅನುಕೂಲಕರ ಕೇಂದ್ರವೆನಿಸಿದೆ.

ಪ್ರಸ್ತುತ ಈ ದೈವಸ್ಥಾನ, ಗರಡಿಗಳು ಕಾಲದೋಷದಿಂದ ಶಿಥಿಲಗೊಂಡಿದ್ದು, ಅವುಗಳ ಜೀರ್ಣೋದ್ಧಾರ ಮಾಡಿ ದೈವ ಸಾನ್ನಿಧ್ಯವನ್ನು ಪುನರ್‌ ಪ್ರತಿಷ್ಠಾಪಿಸುವ ಸಂಕಲ್ಪ ಮಾಡಲಾಗಿದೆ. ಅದಕ್ಕಾಗಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದೆ. ದೈವಸ್ಥಾನ, ಗರಡಿಗಳ ಅದೇ ಮೂಲ ಪಂಚಾಂಗದ ಮೇಲೆ ಹೊಸ ಭದ್ರವಾದ ಗೋಡೆ ಹಾಗೂ ನೂತನ ಹಂಚಿನ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ಜೊತೆಗೆ ದೈವಸ್ಥಾನದ ಗೋಪುರ ನಿರ್ಮಾಣ, ಅಂಗಣಕ್ಕೆ ನೆಲೆಹಾಸು, ದೈವನರ್ತನ ಪ್ರದೇಶಕ್ಕೆ ಭದ್ರವಾದ ಸ್ಥಿರ ಮೇಲ್ಛಾವಣಿ , ದೈವಸ್ಥಾನದಲ್ಲಿ ನೂತನ ಮಂಚ ನಿರ್ಮಾಣ, ಸುಂದರವಾದ ಪಾಗಾರ ಗೋಡೆ ನಿರ್ಮಿಸುವ ಯೋಜನೆಯನ್ನು ಸಮಿತಿಯು  ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ.

ಸಹೃದಯರ ಭಕ್ತರ ಪೂರ್ಣ ಬೆಂಬಲದ ಭರವಸೆ ದೊರಕಿದ್ದು, ಸುಮಾರು 45 ಲಕ್ಷ ರೂ. ವೆಚ್ಚದ ಈ ಕಾರ್ಯ ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವ ಸಂಕಲ್ಪದಿಂದ ಕಾರ್ಯೋನ್ಮುಖವಾಗಲಾಗಿದೆ. ಮಾರ್ಚ್‌ ಕೊನೆಯೊಳಗೆ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ, ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಿಸುವ ನಿರ್ಧಾರವನ್ನು ಮಾಡಲಾಗಿದೆ. ಇದಕ್ಕೆ ಭಕ್ತರ ಸಂಪೂರ್ಣ ಸಹಕಾರವನ್ನು ಆಪೇಕ್ಷಿಸಲಾಗುತ್ತಿದೆ. ಹೃದಯ ಶ್ರೀಮಂತಿಕೆಯುಳ್ಳ ಮುಂಬಯಿಯ ಭಕ್ತಾದಿಗಳು, ದಾನಿಗಳು, ಸಹೃದಯಿ ಗಳು ಈ ಹಿಂದೆ ರೆಂಜಾಳ ಗ್ರಾಮದ ಎಲ್ಲಾ ಸತ್ಕಾರ್ಯಗಳಲ್ಲಿ ಸಂತಸದಿಂದ ಕೈಜೋಡಿಸಿದ್ದೀರಿ. ಈ ಬಾರಿಯೂ ಅದೇ ರೀತಿಯ ಸಹಕಾರವನ್ನು ಆಪೇಕ್ಷಿಸಲಾಗುತ್ತಿದೆ.

Advertisement

ಒಂದು ಲಕ್ಷ ರೂ. ಗಳಿಗಿಂತ ಅಧಿಕ ದೇಣಿಗೆಯನ್ನು ನೀಡುವವರ ಹೆಸರನ್ನು ಶಿಲಾಫಲಕದಲ್ಲಿ ಬರೆದಿಡಲಾಗುವುದು ಅಲ್ಲದೆ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಅವರನ್ನು ವಿಶೇಷವಾಗಿ ಗೌರವಿಸಲಾಗುವುದು. ಐವತ್ತು ಸಾವಿರ ರೂ.ಗಳಿಗಿಂತ ಅಧಿಕ ದೇಣಿಗೆ ನೀಡುವವರ ಹೆಸರನ್ನು ಶಿಲಾಫಲಕದಲ್ಲಿ ಹಾಕಲಾಗುವುದು, ಅಲ್ಲದೆ ಉತ್ಸವದ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಗುವುದು. 25 ಸಾವಿರ ರೂ. ಗಳಿಗಿಂತ ಅಧಿಕ ದೇಣಿಗೆಯನ್ನು ನೀಡುವವರ ಹೆಸರನ್ನು ನಾಮಫಲಕದಲ್ಲಿ ಬರೆದಿಡಲಾಗುವುದು. ದೇಣಿಗೆ ನೀಡಲು ಆಪೇಕ್ಷಿಸುವ ಧರ್ಮ ಬಂಧುಗಳು ನಗದು ರೂಪದಲ್ಲಿ ಅಥವಾ ಚೆಕ್‌/ಡಿಡಿ ರೂಪದಲ್ಲಿ ತಮ್ಮ ಕೊಡುಗೆಯನ್ನು “ಶ್ರೀ ದೈವಸ್ಥಾನ ರೆಂಜಾಳ’ ಎಂಬ ಹೆಸರಿನಲ್ಲಿ ಪಾವತಿ ಮಾಡಬಹುದು.

ಎನ್‌ಇಎಫ್‌ಟಿ/ಆರ್‌ಟಿಜಿಎಸ್‌ ರೂಪದಲ್ಲಿ ಪಾವತಿಸುವವರು ಚಾಲ್ತಿ ಖಾತೆ 0005376000030 ಕ್ಕೆ, ಐಎಫ್‌ಎಸ್‌ಸಿ ಕೋಡ್‌ ಐಬಿಕೆಎಲ್‌078ಎಸ್‌ಸಿಡಿಸಿ “ಬಾಹುಬಲಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಲಿ ಕಾರ್ಕಳ’ ಎಂಬ ಹೆಸರಿನಲ್ಲಿ ಕಳುಹಿಸಿಕೊಡಬಹುದು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ಪಾರ್ಶ್ವನಾಥ ಹೆಗ್ಡೆ ಬ್ರಾಣಬೆಟ್ಟು ರೆಂಜಾಳ, ಕಾರ್ಯಾಧ್ಯಕ್ಷರಾಗಿ ಬಿ. ಮಹಾವೀರ ಹೆಗ್ಡೆ ಬ್ರಾಣಬೆಟ್ಟು, ಉಪಾಧ್ಯಕ್ಷರಾಗಿ ಜಿನರಾಜ ಹಲ್ಮ ಕಲ್ಕದಬೆಟ್ಟು, ಅನಂತ್ರಾಜ ಪಾಂಡಿ ಪಾಡ್ಯಾರು, ಭವ್ಯರಾಜ ಹೆಗ್ಡೆ ಸೊಂಬೆಟ್ಟು, ಕಾರ್ಯದರ್ಶಿಯಾಗಿ ಅಜಿತ್‌ ಕುಮಾರ್‌ ಅವರು ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಗಲಿರುಳು ಸಹಕರಿಸುತ್ತಿದ್ದಾರೆ.

ಮುಂಬಯಿ, ಪುಣೆ, ನಾಸಿಕ್‌, ಸೂರತ್‌ ಭಕ್ತಾಭಿಮಾನಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ರಾಮಚಂದ್ರ ವಿ. ಶೆಟ್ಟಿ ಸೂರತ್‌ (9825115150), ನವೀನ್‌ ಶೆಟ್ಟಿ ನವಿ ಮುಂಬಯಿ (9930303041), ಸಕೀತ್‌ ಕುಮಾರ್‌ ಜೈನ್‌ ನವಿಮುಂಬಯಿ (9323830750), ಜಯ ಆರ್‌. ಶೆಟ್ಟಿ ಪುಣೆ (9860184320) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next