ಕೋಲಾರ: ಜಿಲ್ಲೆಯು ಸಂಪೂರ್ಣವಾಗಿ ಮಳೆ ನೀರು ಮತ್ತು ಅಂತರ್ಜಲದ ಮೇಲೆ ಅವಲಂಬಿತವಾಗಿದೆ. ಪೂರ್ವಿಕರು ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಲು ತೆರೆದ ಬಾವಿ, ಕೆರೆ, ಕುಂಟೆ, ಕಲ್ಯಾಣಿಗಳನ್ನು ಯಥೇಚ್ಛವಾಗಿ ನಿರ್ಮಿಸಿದ್ದರು. ಆದರೆ, ಕಾಲಾಂತರದಲ್ಲಿ ಕೆರೆ, ಕುಂಟೆ ಕಲ್ಯಾಣಿಗಳನ್ನು ಅಭಿವೃದ್ಧಿ ನೆಪದಲ್ಲಿ ಒತ್ತುವರಿ ಮಾಡಿಕೊಂಡು ಮುಚ್ಚಲಾಗಿದೆ.
ಇದರಿಂದ ಅಂತರ್ಜಲ ಮರುಪೂರಣವಾಗುತ್ತಿಲ್ಲ. ಇದನ್ನು ಅರ್ಥ ಮಾಡಿಕೊಂಡಿರುವ ಜಿಲ್ಲಾಡಳಿತ ಈಗ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಕೆರೆ, ಕಲ್ಯಾಣಿಗಳ ಪುನಶ್ಚೇತನಕ್ಕೆ ಮುಂದಾಗಿದೆ.
ಪುನಶ್ಚೇತನಗೊಂಡರು ತುಂಬಿಲ್ಲ ನೀರು: ಪೂರ್ವಜರ ದೂರದೃಷ್ಟಿ, ಧಾರ್ಮಿಕ ಭಾವನೆಗಳಿಗೆ ಸಾಕಾರವೆನ್ನುವಂತೆ ಅನೇಕ ಗ್ರಾಮಗಳ ಮಧ್ಯೆ ಅಥವಾ ದೇವಾಲಯಗಳಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ಕಲ್ಯಾಣಿಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಇತ್ತೀಚಿನ ದಿನಗಳಲ್ಲಿ ಮತ್ತೆ ಪುನಶ್ಚೇತನಗೊಂಡು ನಮ್ಮ ಧಾರ್ಮಿಕ, ಸಾಮಾಜಿಕ, ಭಾವನಾತ್ಮಕ ಸಂಬಂಧಗಳನ್ನು ಬಲಗೊಳಿಸುತ್ತಿವೆ. ಗ್ರಾಮದ ಮಧ್ಯ ಭಾಗ ಅಥವಾ ದೇವಾಲಯಗಳ ಸುತ್ತಮುತ್ತ ಪುರ್ವಜರು ಕಟ್ಟಿರುವ ಕಲ್ಯಾಣಿಗಳ ನಿರ್ಮಾಣದ ಹಿಂದೆ ಧಾರ್ಮಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದ್ದವು. ಹಲವು ದಶಕಗಳ ಕಾಲ ನಿರ್ಲಕ್ಷ್ಯಕ್ಕೆ ಈಡಾಗಿದ್ದ ಕಲ್ಯಾಣಿಗಳು ಕಳೆದ ಐದಾರು ವರ್ಷಗಳಲ್ಲಿ ಪುನಶ್ಚೇತನ ಕಾರ್ಯ ನಡೆದರೂ ಬಹುತೇಕ ಮಳೆ ನೀರಿಲ್ಲದೆ ಒಣಗಿವೆ. ಕಲ್ಯಾಣಿಗಳ ಸುತ್ತ ಸುರಕ್ಷತಾ ಕ್ರಮಗಳಿಗೂ ಬರ ಬಡಿದಿದೆ. ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಕೆರೆಗಳಂತೆಯೇ ಕಲ್ಯಾಣಿಗಳು ಜೀವಜಲದ ಮೂಲಗಳಾಗಿದ್ದವು. ಒಂದೂವರೆ ದಶಕಗಳಲ್ಲಿ ನಿರಂತರ ಬರದ ಹೊಡೆತಕ್ಕೆ ತುತ್ತಾಗಿದ್ದರಿಂದ ಕಲ್ಯಾಣಿಗಳು ತುಂಬದೆ ನಿರ್ಲಕ್ಷ್ಯಕ್ಕೆ ತುತ್ತಾಗಿ ಶಿಥಿಲಗೊಂಡವು. ಹೂಳು ತುಂಬಿ ಗಿಡ ಗಂಟಿಗಳು ಬೆಳೆದವು. 2014ರಲ್ಲಿ 258 ಕಲ್ಯಾಣಿಗಳ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಲಾಗಿ ಪ್ರತಿ ವರ್ಷವೂ ನರೇಗಾ ಯೋಜನೆಯಿಂದ ಕಲ್ಯಾಣಿಗಳ ಪುನಶ್ಚೇತನ ಕಾರ್ಯ ನಡೆಸಿಕೊಂಡು ಬರಲಾಗುತ್ತಿದೆ.
ಭದ್ರತಾ ಕ್ರಮಗಳಿಗೆ ಬರ: ಇತ್ತೀಚಿನ ವರ್ಷಗಳಲ್ಲಿ ನರೇಗಾ ಯೋಜನೆಯಿಂದ ಪುನಶ್ಚೇತನಗೊಂಡ ಅನೇಕ ಕಲ್ಯಾಣಿಗಳ ಸುತ್ತ ತಡೆಬೇಲಿ ಹಾಕಿ ಭದ್ರಗೊಳಿಸಲಾಗಿದೆ. ಆದರೆ, ನೂರಾರು ಕಲ್ಯಾಣಿಗಳು ಇಂದಿಗೂ ತೆರೆದ ಪ್ರದೇಶದಲ್ಲಿದ್ದು, ಕನಿಷ್ಠ ಭದ್ರತಾ ಕ್ರಮಗಳು ಇಲ್ಲವಾಗಿದೆ. ಕೋಲಾರ ನಗರದಲ್ಲಿ ರಸ್ತೆ ಬದಿಯಲ್ಲಿರುವ ಶ್ರೀವೇಣುಗೋಪಾಲ ಸ್ವಾಮಿ ದೇವಾಲಯದ ಪುಷ್ಕರಣಿಯ ಎರಡು ಸುತ್ತ ತಡೆಬೇಲಿ, ಗೇಟ್ ನಿರ್ಮಿಸಿದ್ದರೆ ಉಳಿದ ಎರಡು ಸುತ್ತ ತೆರೆದಿದೆ. ಕಳೆದ ವರ್ಷ ಬೇಸಿಗೆಯಲ್ಲಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಪ್ರಾಣಬಿಟ್ಟಿದ್ದ. ಇದಾದ ನಂತರವೂ ಸ್ಥಳೀಯ ಸಂಸ್ಥೆ ಅಥವಾ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಕೋಲಾರದ ಅರಾಭಿಕೊತ್ತನೂರಿನ ಊರಬಾಗಿಲು ಬಳಿ ಬೃಹತ್ ಕಲ್ಯಾಣಿಯಿದ್ದರೂ ತಡೆಬೇಲಿ ಇಲ್ಲ. ಗೊಟ್ಟಹಳ್ಳಿಯಲ್ಲಿನ ಕಲ್ಯಾಣಿ ಸುತ್ತ ತಡೆಬೇಲಿ ಇದೆ. ಬೋರ್‌ವೆಲ್ ಮೂಲಕ ನೀರು ತುಂಬಿಸಲಾಗಿದ್ದು, ಯುವಕರು ಈಜಾಡುವ ಮೂಲಕ ದಣಿವಾರಿಸಿಕೊಳ್ಳುತ್ತಿದ್ದಾರೆ. ಈಜು ಬಾರದವರು ಇಳಿದರೆ ಅಪಾಯ ತಪ್ಪಿದ್ದಲ್ಲ.
ಯುವ ಬ್ರಿಗೇಡ್‌ನಿಂದ ಪುನಶ್ಚೇತನ: ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಸಂತೆ ಮೈದಾನದ ಕಾವೇರಮ್ಮ ಕಲ್ಯಾಣಿಯನ್ನು ಯುವ ಬ್ರಿಗೇಡ್‌ನಿಂದ ಪುನಶ್ಚೇತನಗೊಳಿಸಿದ್ದು, ಸ್ವಲ್ಪ ನೀರಿದ್ದರೂ ಸುತ್ತ ತಡೆಬೇಲಿ ಇಲ್ಲದೇ ತೆರೆದ ಸ್ಥಿತಿಯಲ್ಲಿ ಗಿಡಗಂಟಿಗಳು ತುಂಬಿಕೊಂಡಿದೆ. ಗ್ರಾಪಂನಿಂದ 5 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಿ ವರ್ಷ ಕಳೆದರೂ ಕಾಮಗಾರಿ ಕೈಗೊಂಡಿಲ್ಲ. ಮುಳಬಾಗಿಲಿನ ಆಂಜನೇಯಸ್ವಾಮಿ ದೇವಾಲಯದ ಒಳಗಿರುವ ಕಲ್ಯಾಣಿ ತೆರೆದ ಸ್ಥಿತಿಯಲ್ಲಿದೆ. ನರಸಿಂಹತೀರ್ಥದ ಕಲ್ಯಾಣಿಗೆ ತಡೆ ಬೇಲಿ ಇದ್ದರೂ ಕೆಲವು ಕಡೆ ಕಿತ್ತುಹೋಗಿದೆ. ಕಜ್ಜಾಯಕುಂಟೆಯದ್ದೂ ಇದೇ ಪರಿಸ್ಥಿತಿ. ದೊಡ್ಡಗಿರ್ಕಿಯಲ್ಲಿನ ಕಲ್ಯಾಣಿಗೂ ತಡೆ ಬೇಲಿ ಇಲ್ಲ. ಆವಣಿ ಗ್ರಾಮದಲ್ಲಿ 2, ಉತ್ತನೂರು ಗ್ರಾಮದಲ್ಲಿನ ಕಲ್ಯಾಣಿ ನರೇಗಾದನ್ವಯ ಪುನಶ್ಚೇತನ ಕೈಗೆತ್ತಿಕೊಂಡು ಕಾಮಗಾರಿ ಪ್ರಗತಿಯಲ್ಲಿದೆ. ಶ್ರೀನಿವಾಸಪುರದ ಯಲ್ದೂರು ಗ್ರಾಮದಲ್ಲಿರುವ ಕಲ್ಯಾಣಿಗೆ ಫೆನ್ಸಿಂಗ್ ಇಲ್ಲ. ಉಳಿದಂತೆ ಅಡ್ಡಗಲ್, ಲಕ್ಷ್ಮೀಸಾಗರ, ಮಾಸ್ತೇನಹಳ್ಳಿ, ಹೊದಲಿ, ಮುದಿಮಡಗು, ತಿಮ್ಮಸಂದ್ರ ಗ್ರಾಮದಲ್ಲಿನ ಕಲ್ಯಾಣಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಪಾಳು ಬಿದ್ದ ಕಲ್ಯಾಣಿ ರಕ್ಷಣೆಗೆ ಕ್ರಮ: ಮಾಲೂರು ಪಟ್ಟಣದಲ್ಲಿನ ಪಾಳು ಬಿದ್ದಿದ್ದ ಗಜಾಗುಂಡ್ಲ ಕಲ್ಯಾಣಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡಿದ್ದರೆ, ಕೋಡಿಹಳ್ಳಿ ಮಾರಿಕಾಂಬ ದೇವಾಲಯದ ಬಳಿಯ ಕಲ್ಯಾಣಿಯಲ್ಲಿ ನೀರಿಲ್ಲ, ತಡೆಬೇಲಿಯೂ ಇಲ್ಲ. ಬಾಳಕುಂಟೆ, ಡಿ.ಎನ್. ದೊಡ್ಡಿ, ಮಾಸ್ತಿ ಗ್ರಾಮದಲ್ಲಿನ ಕಲ್ಯಾಣಿಯಲ್ಲಿ ನೀರಿದೆ, ಫೆನ್ಸಿಂಗ್ ಇಲ್ಲ. ಯಶವಂತಪುರದ ಕಲ್ಯಾಣಿಗೂ ಬೇಲಿ ಇಲ್ಲ. ಬನಹಳ್ಳಿ ಗ್ರಾಮದಲ್ಲಿನ ದೊಡ್ಡ ಕಲ್ಯಾಣಿಯಲ್ಲಿ ಎಂದೂ ನೀರು ಬತ್ತಿಲ್ಲ. ಆದರೆ, ಸುತ್ತಲೂ ಸುರಕ್ಷತಾ ಕ್ರಮಗಳೇ ಇಲ್ಲ.
ಸತತ ಬರದಿಂದ ಕಲ್ಯಾಣಿಯಲ್ಲಿ ನೀರಿಲ್ಲ: ಕೋಲಾರ ತಾಲೂಕಿನ ಚಿಟ್ನಹಳ್ಳಿಯಲ್ಲಿ ನಿರ್ಮಿಸಿರುವ ಕಲ್ಯಾಣಿಗೆ ತಡೆ ಬೇಲಿಯೂ ಹಾಕಲಾಗಿದ್ದು, ಅತ್ಯಂತ ಸುಂದರ ಹಾಗೂ ಸ್ವಚ್ಛತೆಯ ಜತೆಗೆ ರಮಣೀಯವೂ ಆಗಿದೆ. ಟೇಕಲ್, ಹಸಾಂಡಹಳ್ಳಿ, ರಾಜೇನಹಳ್ಳಿ,ಚಿಕ್ಕಕುಂತೂರು ಗ್ರಾಮದಲ್ಲಿ ತಲಾ 2, ಎಚ್. ಹೊಸಕೋಟೆ, ಮಾಸ್ತಿ ಗ್ರಾಮದಲ್ಲಿ 3, ಜಯಮಂಗಲದಲ್ಲಿ 4 ಸೇರಿದಂತೆ ಒಟ್ಟು 26 ಕಲ್ಯಾಣಿಗಳ ಪುನಶ್ಚೇತನಕ್ಕೆ ಉದ್ದೇಶಿಸಿದ್ದು, 5 ಪೂರ್ಣಗೊಂಡು 13 ಪ್ರಗತಿಯಲ್ಲಿದೆ. ಇತ್ತೀಚೆಗೆ ದಾಬಸ್‌ಪೇಟೆ ಸಮೀಪದ ಸಿದ್ಧ್ದರ ಬೆಟ್ಟದಲ್ಲಿನ ಕಲ್ಯಾಣಿಯಲ್ಲಿ ಮುಳುಗಿ ಒಂದೇ ಕುಟುಂಬದ 5 ಮಂದಿ ಮೃತಪಟ್ಟಿದ್ದರು. ಕೋಲಾರ ಜಿಲ್ಲೆಯಲ್ಲಿ ಸತತ ಬರದಿಂದಾಗಿ ಬಹುತೇಕ ಕಲ್ಯಾಣಿಗಳು ಬರಿದಾಗಿದ್ದು, ಸದ್ಯಕ್ಕೆ ಆತಂಕ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ಸುರಕ್ಷತೆಯ ಪ್ರಶ್ನೆ ಮೂಡುತ್ತದೆ. ಕೆರೆ, ಕುಂಟೆ ಕಲ್ಯಾಣಿಗಳು ಅಂತರ್ಜಲ ಹೆಚ್ಚಿಸುವುದರ ಜೊತೆಗೆ ಅಪಾಯವನ್ನು ತುಂದೊಡ್ಡುವ ಸಾಧ್ಯತೆಗಳಿವೆ. ಈ ದಿಸೆಯಲ್ಲಿ ಯಾವುದೇ ಅನಾಹುತಗಳು ಜಿಲ್ಲೆಯಲ್ಲಿ ಮರುಕಳುಹಿಸದಂತೆ ಎಚ್ಚರವಹಿಸುವ ಜವಾಬ್ದಾರಿ ಜಿಲ್ಲಾಡಳಿತ, ಜಿಪಂ ಮೇಲಿದೆ. ಸುರಕ್ಷತೆ ಇಲ್ಲದ ಕಡೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ, ಸೂಚನಾ ಫಲಕಗಳನ್ನು ಹಾಕಿ ಎಚ್ಚರಿಕೆ ಸಂದೇಶ ನೀಡುವ ಕೆಲಸ ಆಗಬೇಕಿದೆ.
ಕೆ.ಎಸ್.ಗಣೇಶ್