Advertisement

ರೀನಲ್‌ ಸೆಲ್‌ ಕಾರ್ಸಿನೋಮಾ ಮೂತ್ರಪಿಂಡದ ಕ್ಯಾನ್ಸರ್‌

05:37 PM Feb 26, 2022 | Team Udayavani |

ರೀನಲ್‌ ಸೆಲ್‌ ಕಾರ್ಸಿನೋಮಾ (ಆರ್‌ಸಿಸಿ)ವು ಮೂತ್ರಶಾಸ್ತ್ರೀಯ ಅನಾರೋಗ್ಯಗಳಲ್ಲಿ ಅತ್ಯಂತ ಮಾರಕವಾದುದಾಗಿದ್ದು, ಪುರುಷರಲ್ಲಿ ಉಂಟಾಗುವ ಕ್ಯಾನ್ಸರ್‌ ಸಂಬಂಧಿ ಮರಣ ಪ್ರಕರಣಗಳಲ್ಲಿ ಶೇ. 3ರಷ್ಟು ಇದರಿಂದ ಆಗುತ್ತವೆ. ಇದು ಅನಿಯಮಿತವಾಗಿ ಮತ್ತು ಕೌಟುಂಬಿಕ ಚರಿತ್ರೆಯ ಸ್ವರೂಪದಲ್ಲಿ ಕಂಡುಬರುತ್ತದೆ. ಕುಟುಂಬ ಸ್ವರೂಪದಲ್ಲಿ ಉಂಟಾಗುವ ಆರ್‌ಸಿಸಿ ಯುವ ಜನರಲ್ಲಿ ಹೆಚ್ಚು ಕಂಡುಬರುತ್ತಿದ್ದು, ಸಾಮಾನ್ಯವಾಗಿ ಬೈಲ್ಯಾಟರಲ್‌ ಮತ್ತು ಮಲ್ಟಿಫೋಕಲ್‌ ಆಗಿರುತ್ತದೆ. ಅನಿಯಮಿತ ಸ್ವರೂಪದ ಆರ್‌ಸಿಸಿ ಸಾಮಾನ್ಯವಾಗಿ ಬದುಕಿನ ಆರು ಮತ್ತು ಏಳನೆಯ ದಶಕದಲ್ಲಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಯೂನಿಲ್ಯಾಟರಲ್‌ ಆಗಿದ್ದು, ನಿರೀಕ್ಷಿತವಾಗಿರುತ್ತದೆ. ಆದರೆ ಅದರ ವೈದ್ಯಕೀಯ ಲಕ್ಷಣಗಳು ವಯಸ್ಸನ್ನು ಆಧರಿಸಿ ಬದಲಾಗುತ್ತವೆ. ದೇಹದಲ್ಲಿ ಆಂತರಿಕವಾಗಿ ಪ್ರಾರಂಭಗೊಳ್ಳುವುದು ಮತ್ತು ವಿಳಂಬವಾಗಿ ಲಕ್ಷಣಗಳನ್ನು ಪ್ರದರ್ಶಿಸುವುದನ್ನು ಹಿರಿಯ ವಯಸ್ಕರಲ್ಲಿ ಗುರುತಿಸಲಾಗಿದೆ. ರೀನಲ್‌ ಸೆಲ್‌ ಕಾರ್ಸಿನೊಮಾ ಪ್ರಕರಣಗಳಲ್ಲಿ ಬಹುತೇಕ ಬದುಕಿನ ಆರನೇ ದಶಕ (60-70 ವಯಸ್ಸು)ದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯುವ ವಯಸ್ಸಿನ (40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ವರಲ್ಲಿ ರೀನಲ್‌ ಸೆಲ್‌ ಕಾರ್ಸಿನೊಮಾ ಆರಂಭವಾಗುವುದು ಕಡಿಮೆ, ಒಟ್ಟು ಪ್ರಕರಣಗಳಲ್ಲಿ ಶೇ. 4ರಿಂದ 7ರಷ್ಟು ಮಾತ್ರ.

Advertisement

ಬಹುತೇಕ ಕ್ಯಾನ್ಸರ್‌ ಪ್ರಕರಣಗಳು ಅನಿಯಮಿತ ಸ್ವರೂಪದ್ದಾಗಿರುತ್ತವೆ (ನಿಖರ ಕಾರಣಗಳು ತಿಳಿದುಬರುವುದಿಲ್ಲ). ರೀನಲ್‌ ಸೆಲ್‌ ಕಾರ್ಸಿನೊಮಾ ಉಂಟಾಗುವುದಕ್ಕೆ ಇತರ ಗೊತ್ತಿರುವ ಕಾರಣಗಳೆಂದರೆ ಧೂಮಪಾನ, ಬೊಜ್ಜು, ಮಧುಮೇಹ, ದೀರ್ಘ‌ಕಾಲಿಕ ಮೂತ್ರಪಿಂಡ ಸಂಬಂಧಿ ಕಾಯಿಲೆಗಳು, ಪಾಲಿಸಿಸ್ಟಿಕ್‌ ಕಿಡ್ನಿ ಕಾಯಿಲೆ ಮತ್ತು ವಂಶವಾಹಿ ಅಂಶಗಳಾಗಿವೆ. ಕೌಟುಂಬಿಕವಾದ ಕೆಲವು ಸಿಂಡ್ರೋಮ್‌ಗಳು ಕೂಡ ರೀನಲ್‌ ಸೆಲ್‌ ಕಾರ್ಸಿನೋಮಾ ಜತೆಗೆ ಸಂಬಂಧ ಹೊಂದಿರುವುದು ಕಂಡುಬಂದಿದೆ. ಮೂತ್ರಪಿಂಡದ ವಂಶವಾಹಿ ಸಂಬಂಧಿ ಕ್ಯಾನ್ಸರ್‌ಗಳು ಬಹುಕೇಂದ್ರಿತ, ಬಹುಪಕ್ಷೀಯ ಮತ್ತು ಕುಟುಂಬದಲ್ಲಿ ಇರುವ ಇತರ ಅನಾರೋಗ್ಯಗಳ ಜತೆಗೆ ಸಾಮಾನ್ಯವಾಗಿ ಸಂಬಂಧ ಹೊಂದಿರುತ್ತವೆ.

ಬಹುತೇಕ ಕ್ಯಾನ್ಸರ್‌ ಪ್ರಕರಣಗಳು ಅಚಾನಕ್‌ ಪತ್ತೆಯಾಗುತ್ತವೆ (ಸಾಮಾನ್ಯವಾಗಿ ರೋಗಿಯು ಇತರ ಯಾವುದಾದರೂ ಕಾರಣಗಳಿಗಾಗಿ ಅಲ್ಟ್ರಾಸೌಂಡ್‌ ಅಥವಾ ಇತರ ಯಾವುದೇ ಸ್ಕ್ಯಾನಿಂಗ್‌ಗೆ ಒಳಪಟ್ಟಾಗ). ಇದು ಮಹಿಳೆಯರಿಗಿಂತ ಪುರುಷರಲ್ಲಿ ಎರಡು ಪಟ್ಟು ಹೆಚ್ಚು ಕಂಡುಬರುತ್ತದೆ. ಈ ರೋಗಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳೆಂದರೆ, ಹೊಟ್ಟೆಯಲ್ಲಿ ಬೆಳವಣಿಗೆ, ಹೆಮಟೂರಿಯಾ (ಮೂತ್ರದಲ್ಲಿ ರಕ್ತದಂಶ), ಹೊಟ್ಟೆಯ ಭಾಗದಲ್ಲಿ ನೋವು, ತೂಕ ನಷ್ಟ, ಬೆನ್ನು ನೋವು ಮತ್ತು ಹಸಿವು ಇಲ್ಲದಿರುವಿಕೆ. ಇತರ ಕ್ಯಾನ್ಸರ್‌ ಗಳಂತಲ್ಲದೆ ರೀನಲ್‌ ಸೆಲ್‌ ಕಾರ್ಸಿನೊಮಾವು ಯುವ ವಯಸ್ಸಿನಲ್ಲಿ ಮತ್ತು ಬೇಗನೆ ಪತ್ತೆ ಹಚ್ಚಿದಾಗ ಚಿಕಿತ್ಸೆಗೆ ಹೆಚ್ಚು ಪ್ರತಿಸ್ಪಂದಿಯಾಗಿರುತ್ತದೆ.

ಬಹುತೇಕ ರೋಗಿಗಳಿಗೆ ಚಿಕಿತ್ಸೆಯಾಗಿ ಶಸ್ತ್ರಕ್ರಿಯೆಯ ಅಗತ್ಯವಿರುತ್ತದೆ. ಮೆಟಾಸ್ಟಾಟಿಕ್‌ ಕ್ಯಾನ್ಸರ್‌ (ನಾಲ್ಕನೇ ಹಂತ) ಹೊಂದಿರುವ ರೋಗಿಗಳಿಗೆ ಗುರಿ ನಿರ್ದೇಶಿತ ಚಿಕಿತ್ಸೆ ಅಥವಾ ಕಿಮೊಥೆರಪಿಯ ಅಗತ್ಯವಿರುತ್ತದೆ.

ಕೌಟುಂಬಿಕ ಇತಿಹಾಸವುಳ್ಳ ಕ್ಯಾನ್ಸರ್‌ ರೋಗಿಗಳಿಗೆ ವಂಶವಾಹಿ ಪರೀಕ್ಷೆ ಮತ್ತು ಆಪ್ತಸಮಾಲೋಚನೆಯ ಅಗತ್ಯವಿರುತ್ತದೆ. ಈ ರೋಗಿಗಳು ಸರ್ಕೋಮಾಸ್‌, ಫಿಕ್ರೊಮೊಸೈಟೊಮಾ, ಮೇದೋಜೀರಕ ಗ್ರಂಥಿಯಲ್ಲಿ ಗಡ್ಡೆಗಳು, ಕೊಲೆಂಜಿಯೊಕಾರ್ಸಿನೊಮಾಸ್‌ನಂತಹ ಇತರ ಕ್ಯಾನ್ಸರ್‌ಗಳನ್ನು ಕೂಡ ಹೊಂದಿರಬಹುದಾದ ಸಾಧ್ಯತೆಗಳೇ ಇದಕ್ಕೆ ಕಾರಣ.

Advertisement

ಕುಟುಂಬ ಸದಸ್ಯರನ್ನು ಕೂಡ ಪರೀಕ್ಷೆಗೆ (ವಿಎಚ್‌ಎಲ್‌ ಜೀನ್‌ ಮ್ಯುಟೇಶನ್‌, ಎಫ್ಎಚ್‌ ಮ್ಯುಟೇಶನ್‌, ಎಫ್ಎಲ್‌ಸಿಎನ್‌ ಮ್ಯುಟೇಶನ್‌) ಒಳಪಡಿಸಬೇಕಾಗುತ್ತದೆ. ಅವರಿಗೆ ಮೇಲೆ ಹೇಳಲಾದ ಕ್ಯಾನ್ಸರ್‌ಗಳ ಪತ್ತೆಗಾಗಿ ನಿಯಮಿತವಾಗಿ ತಪಾಸಣೆ ಮಾಡಿಸಬೇಕಾಗುತ್ತದೆ.

-ಡಾ| ಹರೀಶ್‌ ಇ.
ಸರ್ಜಿಕಲ್‌ ಓಂಕಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next