ಹೊಸದಿಲ್ಲಿ: ಜೀವನ ಮತ್ತು ವೈದ್ಯಕೀಯ ವಿಮೆಗಳಿಗೆ ಪಾವತಿಸುವ ಪ್ರೀಮಿಯಂಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (Goods and Service Tax) ಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ನಾಗ್ಪುರ ಎಲ್‌ಐಸಿ ಒಕ್ಕೂಟದ ಮನವಿಯ ಮೇರೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿರುವ ಗಡ್ಕರಿ, ಜೀವ ವಿಮಾ ಪ್ರೀಮಿಯಂ ಮೇಲೆ ವಿಧಿಸುವ ಶೇ. 18 ಪರೋಕ್ಷ ತೆರಿಗೆಯು ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸುತ್ತದೆ ಎಂದು ಹೇಳಿದ್ದಾರೆ. ನಾಗ್ಪುರ ವಿಭಾಗೀಯ ಜೀವ ವಿಮಾ ನಿಗಮದ ನೌಕರರ ಸಂಘ, ನಾಗ್ಪುರ, ವಿಮಾ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಆಲಿಸುವಾಗ ಸಚಿವರು, ವಿಮಾ ನಿಗಮದ ನೌಕರರ ಸಮಸ್ಯೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಗಡ್ಕರಿ ಅವರ ಮುಂದೆ ವಿಮಾ ನಿಗಮದ ನೌಕರರು, ಜೀವನ ಮತ್ತು ವೈದ್ಯಕೀಯ ವಿಮೆ ಮೇಲಿನ ಶೇ. 18 ಜಿಎಸ್‌ಟಿ (GST) ವಾಪಸ್ ಪಡೆಯುಂತೆ ಒತ್ತಾಯಿಸಿದ್ದಾರೆ. ಜೀವ ವಿಮಾ ಪ್ರೀಮಿಯಂ ಮೇಲೆ ವಿಧಿಸುವ ಮೂಲಕ ಜೀವನದ ಅನಿಶ್ಚಿತತೆಗಳ ಮೇಲೆ ತೆರಿಗೆ ವಿಧಿಸದಂತೆ ಹಾಗೂ ಅನಿಶ್ಚಿತತೆಯ ಅಪಾಯಕ್ಕೆ ಒಳಗಾಗುವ ವ್ಯಕ್ತಿಗೆ ತೆರಿಗೆ ವಿಧಿಸಬಾರದು ಎಂದು ಒಕ್ಕೂಟ ಹೇಳಿದೆ.
ಜಿಎಸ್‌ಟಿ ವಿಧಿಸಿದ್ದರೆ ವಿಮೆ ಮಾಡಲು ಜನರು ಮುಂದೆ ಬರುವುದಿಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತದೆ. ಹಾಗಾಗಿ ವಿಮಾ ಮೇಲಿನ ತೆರಿಗೆ ತೆಗೆದು ಹಾಕಲು ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾರಿಗೆ ಪತ್ರ ಬರೆದಿದ್ದಾರೆ. ಭಾರತದಲ್ಲಿ ವಿಮೆ ಮತ್ತು ಪಿಂಚಣಿ ನಿಧಿ ಆಸ್ತಿಗಳ ಜಿಡಿಪಿ ಶೇ. 19 ಮತ್ತು ಶೇ. 5 ಮೇಲೆ ನಿಂತಿದೆ. ಭಾರತಕ್ಕೆ ಹೋಲಿಸಿದರೆ ಯುಎಸ್‌ಎನಲ್ಲಿ ಶೇ. 52 ಮತ್ತು ಶೇ. 122 ಮತ್ತು ಯುಕೆಯಲ್ಲಿ ಶೇ.112 ಮತ್ತು 80 ಇದೆ ಎಂದು ಹೇಳಿದ್ದಾರೆ.
ವಿಮೆ ಮೇಲಿನ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿ ಮರುಪರಿಶೀಲನೆ ಮಾಡುವ ಅಗತ್ಯ ಇದೆ ಎಂದು ಕೇಂದ್ರದ ಮಾಜಿ ಹಣಕಾಸು ರಾಜ್ಯ ಸಚಿವ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿಯು ಈ ಹಿಂದೆ ಶಿಫಾರಸು ಮಾಡಿತ್ತು.