ಸಾಗರ: ಇಲ್ಲಿನ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬುಧವಾರ ಮಂಕಳಲೆ ರಸ್ತೆಯಲ್ಲಿರುವ ಬೆಥನಿ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳು ಧರಿಸುವ ಕೋಟ್ ಮತ್ತು ಟೈ ಮೇಲೆ ಶಿಲುಬೆ ಚಿತ್ರ ಇರುವುದನ್ನು ತೆಗೆಸುವಂತೆ ಒತ್ತಾಯಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಚ್.ಸುಧೀಂದ್ರ, ಶಾಲೆಯಲ್ಲಿ ಇತ್ತೀಚಿಗೆ ರಕ್ಷಾಬಂಧನ ಸಂದರ್ಭದಲ್ಲಿ ಮಕ್ಕಳು ಕಟ್ಟಿಕೊಂಡ ರಾಖಿಯನ್ನು ತೆಗೆಸಿ ಹಾಕುವ ಮೂಲಕ ಶಾಲಾ ಮುಖ್ಯ ಶಿಕ್ಷಕಿ ಮತ್ತು ಶಿಕ್ಷಕ ವರ್ಗ ಧರ್ಮವಿರೋಧಿ ಕೃತ್ಯ ನಡೆಸಿತ್ತು.
ಈ ಸಂದರ್ಭದಲ್ಲಿ ಹಿಂ.ಜಾ. ವೇದಿಕೆ ಶಾಲೆ ಎದುರು ಪ್ರತಿಭಟನೆ ನಡೆಸಿ ಮುಖ್ಯ ಶಿಕ್ಷಕಯನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಹಿಂ.ಜಾ. ವೇದಿಕೆ ಶಾಲೆಗೆ ಭೇಟಿ ನೀಡಿದಾಗ ಪೋಷಕರು ಮಕ್ಕಳ ಕೋಟು ಮತ್ತು ಟೈ ಮೇಲೆ ಶಿಲುಬೆ ಚಿತ್ರ ಇರುವುದನ್ನು ತೋರಿಸಿ, ತೆಗೆಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಶಾಲೆ ಎಂದ ಮೇಲೆ ಅಲ್ಲಿ ಸರ್ವಧರ್ಮೀಯರು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಜಾತಿಯೊಂದರ ಚಿಹ್ನೆಯನ್ನು ಮಕ್ಕಳ ಉಡುಪುಗಳ ಮೇಲೆ ಹಾಕುವುದು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತದೆ. ತಕ್ಷಣ ಶಿಕ್ಷಣಾಧಿಕಾರಿಗಳು ಶಾಲೆಯ ಸಂಬಂಧಪಟ್ಟವರನ್ನು ಕರೆಸಿ ಶಿಲುಬೆ ಚಿತ್ರವನ್ನು ತೆಗೆಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಉದಯನಿಧಿ ವಿರುದ್ದ ದೂರು: ಇದೇ ಸಂದರ್ಭದಲ್ಲಿ ಹಿಂ.ಜಾ. ವೇದಿಕೆ ವತಿಯಿಂದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಪುತ್ರ ಕ್ರೀಡಾ ಸಚಿವ ಉದಯನಿಧಿ ಸ್ಟ್ಯಾಲಿನ್ ಸನಾತನ ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ನೀಡಲಾಯಿತು.
ಪ್ರತಿಭಟನೆಯಲ್ಲಿ ಕೋಮಲ್ ರಾಘವೇಂದ್ರ, ಶ್ರೀಧರ್ ಸಾಗರ್, ಸಂತೋಷ್, ರಾಘವೇಂದ್ರ ಕಾಮತ್, ಆಟೋ ಗಣೇಶ್, ಅಶೋಕು, ಉದಯ, ಆದಿತ್ಯ, ವಿನಯ್ ಶೇಟ್ ಇನ್ನಿತರರು ಹಾಜರಿದ್ದರು.