Advertisement

2 ವಾರಗಳಲ್ಲಿ 5 ಮಿಲಿಯನ್ ಡೌನ್ ಲೋಡ್ ಕಂಡ ರಿಮೂವ್ ಚೀನಾ ಆ್ಯಪ್: ಏನಿದರ ವಿಶೇಷತೇ ?

07:32 PM Jun 02, 2020 | Mithun PG |

ಭಾರತ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಂದೆಡೆ ಬಡತನ, ನಿರುದ್ಯೋಗ ತಾಂಡವವಾಡುತ್ತಿದ್ದರೇ ಮತ್ತೊಂದೆಡೆ ಕೋವಿಡ್ -19 ವೈರಸ್  ಜನಜೀವನವನ್ನು ಅಕ್ಷರಶಃ ನಲುಗಿಸಿದೆ. ಮಾತ್ರವಲ್ಲದೆ ಗಡಿ ಸಮಸ್ಯೆಯೂ ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಇವೆಲ್ಲದರ ನಡುವೆಯೂ ಚೀನಾ ವಸ್ತುಗಳು ಮತ್ತು  ತಂತ್ರಜ್ಞಾನಗಳು ದೇಶದಲ್ಲಿ ಪಾರುಪತ್ಯ ಸಾಧಿಸುತ್ತಿವೆಯೇ ?  ಎಂಬ ಗುಮಾನಿ ಸದ್ಯದ ಮಟ್ಟಿಗೆ ಕಾಡುತ್ತಿರುವುದಂತೂ  ಸುಳ್ಳಲ್ಲ.

Advertisement

ಇಷ್ಟೆಲ್ಲಾ ಪೀಠಿಕೆಗೆ ಕಾರಣವೆಂದರೇ ‘ರಿಮೂವ್ ಚೀನಾ ಆ್ಯಪ್’ ಎಂಬ ಹೊಸ ಅಪ್ಲಿಕೇಶನ್. ಒಂದೆಡೆ ಭಾರತದ ಗಡಿಯಲ್ಲಿ ಚೀನಾ ಕ್ಯಾತೆ ತೆಗೆಯುತ್ತಿದ್ದರೇ, ಮತ್ತೊಂದೆಡೆ ಚೀನಾದಲ್ಲಿ ಸೃಷ್ಟಿಯಾದಂತಹ  ವೈರಸ್ ಭಾರತದಲ್ಲಿ ಕಬಂಧಬಾಹುವವನ್ನು ಚಾಚುತ್ತಿದೆ. ಈ ಕಾರಣಕ್ಕಾಗಿಯೇ ಚೀನಾದ ಆರ್ಥಿಕತೆಗೆ ಹೊಡೆತ ನೀಡಲು ‘ಚೀನಾದ ವಸ್ತುಗಳ ಬಹಿಷ್ಕಾರ, ಚೀನಾ ಆ್ಯಪ್ ಗಳಿಗೆ ಗುಡ್ ಬಾಯ್’ ಮುಂತಾದ ವಿಧಾನಗಳನ್ನು ಭಾರತೀಯರು ಅನುಸರಿಸುತ್ತಿದ್ದಾರೆ. ಈ ಅಭಿಯಾನದ ಒಂದು ಅಂಗವೇ ರಿಮೂವ್ ಚೀನಾ ಆ್ಯಪ್ ಎಂಬ ಅಪ್ಲಿಕೇಶನ್.

ಏನಿದು ರಿಮೂವ್ ಚೀನಾ ಆ್ಯಪ್ ?

ಸ್ಮಾರ್ಟ್ ಫೋನ್ ಗಳಲ್ಲಿ ಚೀನಾ ಮೂಲದ ಆ್ಯಪ್ ಗಳನ್ನು ಗುರುತಿಸಿ ಅದನ್ನು ಅಳಿಸಿ ಹಾಕಲು ಸಹಾಯ ಮಾಡುವ ಅಪ್ಲಿಕೇಶನ್ ಇದು. ಮೇ 17 ರಂದು ಅಧಿಕೃತವಾಗಿ ಪ್ಲೇಸ್ಟೋರ್ ನಲ್ಲಿ ಕಾಣಿಸಿಕೊಂಡ ಈ ಆ್ಯಪ್ ಬಿಡುಗಡೆಯಾದ ಎರಡೇ ವಾರಗಳಲ್ಲಿ 5 ಮಿಲಿಯನ್ (50 ಲಕ್ಷ) ಡೌನ್ ಲೋಡ್ ಕಂಡಿದೆ. ಮಾತ್ರವಲ್ಲದೆ ಬಳಕೆದಾರರಿಂದ 4.9 ರೇಟಿಂಗ್ ಸಿಕ್ಕಿದೆ. ಅತೀ ಹೆಚ್ಚು ಜನರು 5 ಸ್ಟಾರ್ ನೀಡಿದ್ದಾರೆ.

ಇದು ಕೇವಲ 3.8 ಎಂಬಿ ಗಾತ್ರದಲ್ಲಿದ್ದು, ಪ್ಲೇಸ್ಟೋರ್ ನಿಂದ ರಿಮೂವ್ ಚೀನಾ ಆ್ಯಪ್ ಎಂದು ಸರ್ಚ್ ಮಾಡಿ ಇನ್ ಸ್ಟಾಲ್ ಮಾಡಿಕೊಂಡರೇ ನಿಮ್ಮ ಮೊಬೈಲ್ ಫೋನ್ ನಲ್ಲಿರುವ ಚೀನಾ ಮೂಲದ ಎಲ್ಲಾ ಆ್ಯಪ್ ಗಳನ್ನು ಗುರುತಿಸಿ ಪಟ್ಟಿ ಮಾಡುತ್ತದೆ. ನಿಮಗೆ ಅಲ್ಲಿಂದಲೇ ಅನ್ ಇನ್ ಸ್ಟಾಲ್ ಮಾಡುವ ಅವಕಾಶಗಳನ್ನು ಕೂಡ ಕಲ್ಪಿಸಲಾಗಿದೆ.

Advertisement

ಒನ್  ಟಚ್ ಆ್ಯಪ್ ಲ್ಯಾಬ್ಸ್ ಎಂಬ ಜೈಪುರ ಮೂಲದ ಕಂಪೆನಿಯೊಂದು ಈ ಆ್ಯಪ್ ತಯಾರಿಸಿದೆ. ಗಮನಾರ್ಹ ಸಂಗತಿಯೆಂದರೇ ಬಳಕೆದಾರರು ಪ್ಲೇ ಸ್ಟೋರ್ ಮತ್ತು ಇತರ ಕಡೆಗಳಿಂದ ಇನ್ ಸ್ಟಾಲ್ ಮಾಡಿಕೊಂಡ ಆ್ಯಪ್ ಗಳನ್ನು ಮಾತ್ರ ಗುರುತಿಸುತ್ತದೆಯೇ ಹೊರತು ಇನ್ ಬಿಲ್ಟ್ (ಚೀನಾ ಮೊಬೈಲ್ ಗಳಲ್ಲಿ ಮೊದಲೇ ಇನ್ ಸ್ಟಾಲ್ ಆಗಿರುವ ) ಆ್ಯಪ್ ಗಳನ್ನು ಪತ್ತೆಹಚ್ಚುವುದಿಲ್ಲ.

ಚೀನಾದ ಹಲವು ತಂತ್ರಜ್ಞಾನ ಕಂಪೆನಿಗಳಿಗೆ ಭಾರತವೇ ಆದಾಯದ ಮೂಲವಾಗಿದೆ.  ಇದೀಗ ಹಲವು ಚೀನಾ ಮೂಲದ ಅಪ್ಲಿಕೇಶನ್ ಗಳು ಭಾರೀ ಪ್ರಮಾಣದಲ್ಲಿ ಅನ್ ಇನ್ ಸ್ಟಾಲ್ ಆಗುತ್ತಿದ್ದು ಇದಕ್ಕೆ ರಿಮೂವ್ ಚೀನಾ ಆ್ಯಪ್ ಅಪ್ಲಿಕೇಶನ್ ವೇದಿಕೆ ಒದಗಿಸಿರುವುದು ಸುಳ್ಳಲ್ಲ.   ಅದಾಗ್ಯೂ ನಾವು ಶೈಕ್ಷಣಿಕ ಉದ್ದೇಶಕ್ಕಾಗಿ ಈ ಆ್ಯಪ್ ಅಭಿವೃದ್ಧಿ ಪಡಿಸಿದ್ದೇವೆಯೇ ಹೊರತು ಬಲವಂತವಾಗಿ ಅಪ್ಲಿಕೇಶನ್ ಗಳನ್ನು  ಅನ್ ಇನ್ ಸ್ಟಾಲ್ ಮಾಡಲು ಅಲ್ಲ. ಪ್ಲೇಸ್ಟೋರ್ ನಲ್ಲಿರುವ ಅಪ್ಲಿಕೇಶನ್ ಗಳು ಯಾವ ದೇಶಕ್ಕೆ ಸೇರಿವೆ ಎಂಬ ಮಾಹಿತಿಯನ್ನು ಬಳಕೆದಾರರಿಗೆ ತಿಳಿಸಲು ಇದು ಸಹಾಯಕ. ಇದು ಶಿಕ್ಷಣ ವಿಭಾಗಕ್ಕೆ ಸೇರಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಅಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಭಾರತದಲ್ಲಿ ಟಿಕ್ ಟಾಕ್ ಅತ್ಯಂತ ಜನಪ್ರಿಯ ಆ್ಯಪ್ ಆಗಿ ಬದಲಾಗಿತ್ತು. ಆದರೇ ಕಳೆದ 2/3 ವಾರಗಳಿಂದ  #tiktokexposed #Bantiktokinindia ಮುಂತಾದ ಹ್ಯಾಷ್ ಟ್ಯಾಗ್ ಗಳು ಏಕಾಏಕಿ ಟ್ರೆಂಡ್ ಸೃಷ್ಟಿಸಿದ್ದವು.  ಇದಕ್ಕೆ ಕಾರಣ ವ್ಯಕ್ತಿಯೊಬ್ಬರು ಮಾಡಿದ ಪೋಸ್ಟ್. ಈ ವಿಡಿಯೋಗಳಿಗೆ ಭಾರೀ ಆಕ್ಷೇಪ ಕೇಳಿಬಂದಿದ್ದು ಮಾತ್ರವಲ್ಲದೆ ಯೂಟ್ಯೂಬ್ ಮತ್ತು ಟಿಕ್ ಟಾಕ್ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಪರಿಣಾಮವೆಂಬಂತೆ ಪ್ಲೇಸ್ಟೋರ್ ನಲ್ಲಿ ಟಿಕ್ ಟಾಕ್ ರೇಟಿಂಗ್ ಭಾರೀ ಕುಸಿತ ಕಂಡಿದ್ದು. ಈ ಮೊದಲು 4.6 ರಷ್ಟಿದ್ದ ರೇಟಿಂಗ್ 1.2ಕ್ಕೆ ಇಳಿದಿತ್ತು. ಆದರೇ ಗೂಗಲ್ ಕೆಲವೊಂದು ಮಾರ್ಗಸೂಚಿಗಳ ಹಿನ್ನಲೆಯಲ್ಲಿ ಒನ್ ಸ್ಟಾರ್ ರೇಟಿಂಗ್ ಗಳನ್ನು ತೆಗೆದುಹಾಕಿದೆ. ಆದ್ದರಿಂದ ಮತ್ತೆ ಟಿಕ್ ಟಾಕ್ ರೇಟಿಂಗ್ 4.4ಕ್ಕೆ ಏರಿಕೆಯಾಗಿದೆ.

-ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next